ನವದೆಹಲಿ: ಭಾರತದಲ್ಲೂ ಟ್ವಿಟರ್ ಬ್ಲೂಟಿಕ್ ಚಂದಾದಾರಿಕೆ ಅಧಿಕೃತವಾಗಿ ಚಾಲ್ತಿಗೆ ಬಂದಿದೆ. ತಮ್ಮ ಟ್ವಿಟರ್ ಖಾತೆಯನ್ನು “ದೃಢೀಕೃತ’ ಎಂದು ತೋರಿಸಬಯಸುವವರು ಬ್ಲೂಟಿಕ್‌ಗೆ ಇನ್ನು ಮುಂದೆ ಪ್ರತಿ ತಿಂಗಳು 900 ರೂ. ಪಾವತಿಸಬೇಕಾಗುತ್ತದೆ!
ಈ ಚಂದಾದಾರಿಕೆಯ ಅನುಕೂಲತೆಯೇನೆಂದರೆ, ದೃಢೀಕೃತ ಫೋನ್ ನಂಬರ್ ಹೊಂದಿರುವ ಚಂದಾದಾರರು ತಮ್ಮ ಪ್ರೊಫೈಲ್‌ನಲ್ಲಿ ತನ್ನಿಂತಾನೇ ನೀಲಿ ಬಣ್ಣದ ದೃಢೀಕರಣ ಬ್ಯಾಜ್(ಎರಡು ಟಿಕ್ ಮಾರ್ಕ್) ಪಡೆಯುತ್ತಾರೆ. ಹಿಂದೆಲ್ಲ, ಟ್ವಿಟರ್ ಬಳಕೆದಾರರು ಬ್ಲೂಟಿಕ್‌ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿತ್ತು.
ಭಾರತದಲ್ಲಿರುವ ಆ್ಯಂಡ್ರಾಯ್ಡ ಮತ್ತು ಐಒಎಸ್ ಬಳಕೆದಾರರು ಕೂಡ ಸದಸ್ಯತ್ವ ಪಡೆಯಬಹುದು. ಇದೇ ವೇಳೆ, ಬ್ಲೂಟಿಕ್‌ಗೆ ವಾರ್ಷಿಕ ಚಂದಾದಾರಿಕೆಯ ಅವಕಾಶವನ್ನೂ ಕಲ್ಪಿಸಲಾಗಿದ್ದು, ಒಮ್ಮೆಗೇ 6,800 ರೂ. ಪಾವತಿಸಿದರೆ ವಾರ್ಷಿಕ ಚಂದಾದಾರಿಕೆ(ಅಂದರೆ ಮಾಸಿಕ 566.67 ರೂ.) ಲಭ್ಯವಾಗುತ್ತದೆ.
ಬೇರೇನು ಅನುಕೂಲ?:
ಬ್ಲೂಟಿಕ್ ಹೊಂದಿರುವವರಿಗೆ ಕಡಿಮೆ ಸಂಖ್ಯೆಯ ಜಾಹೀರಾತು, ದೀರ್ಘ ಬರಹ ಬರೆಯುವ, ಮುಂಬರುವ ಹೊಸ ಫೀಚರ್‌ಗಳನ್ನು ಬೇಗನೆ ಪಡೆಯುವ ಅವಕಾಶ ಸಿಗಲಿದೆ. ಜತೆಗೆ, ಅವರು ಒಮ್ಮೆ ಟ್ವೀಟ್ ಮಾಡಿದ ಬಳಿಕ 30 ನಿಮಿಷಗಳೊಳಗಾಗಿ ಒಟ್ಟು 5 ಬಾರಿ ಟ್ವೀಟ್ ತಿದ್ದುಪಡಿ ಮಾಡಬಹುದಾಗಿದೆ. ಫುಲ್ ಎಚ್‌ಡಿ ರೆಸೂಲ್ಯೂಷನ್‌ನೊಂದಿಗೆ ವಿಡಿಯೋ ಹಂಚಿಕೊಳ್ಳುವ ಸೌಲಭ್ಯವನ್ನೂ ಒದಗಿಸಲಾಗುತ್ತದೆ.