ಒಡಿಶಾ: ಹುಲ್ಲಿನ ಮೆದೆಯ ಬಳಿ ಆಟವಾಡುತ್ತಿದ್ದ ಮೂರು ಪುಟ್ಟ ಬಾಲಕಿಯರು ಬೆಂಕಿಗೆ ಆಹುತಿಯಾದ ದಾರುಣ ಘಟನೆ ಕಲಹಂಡಿ ಜಿಲ್ಲೆಯ ಬಿಜ್ ಮಾರ ಗ್ರಾಮದಲ್ಲಿ ನಡೆದಿದೆ.
ಅವಳಿಗಳಾದ ಡೈಜಿ ಮತ್ತು ರೋಸಿ, ಹಾಗೂ ರಚನಾ ರಾಹುತ್ ಬೆಂಕಿ ಅವಘಡಕ್ಕೆ ಬಲಿಯಾದ 4 ರಿಂದ 5 ವರ್ಷದ ಬಾಲಕಿಯರು.
ಶನಿವಾರ ಸಂಜೆ ಈ ಮೂವರು ಬಾಲಕಿಯರು ಹುಲ್ಲಿನ ಮೆದೆಯ ಬಳಿ ಆಟವಾಡುತ್ತಿದ್ದರು. ಈ ವೇಳೆ ಏಕಾಏಕಿ ಮೆದೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಮಕ್ಕಳು ಸಿಲುಕಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅಲ್ಲಿಗೆ ಬಂದ ಪೋಷಕರು ಬಾಲಕಿಯರನ್ನು ಕೊಕ್ಸರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಆದರೆ 90 ಶೇ ಸುಟ್ಟ ಗಾಯಗಳಿಂದ ಅಸ್ವಸ್ಥರಾಗಿದ್ದ ಮಕ್ಕಳಲ್ಲಿ ಒಂದು ಮಗು ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದೆ. ಉಳಿದಿಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ಧಾರೆ.