ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿಯಲ್ಲಿ ಜೈಪುರದ ಪ್ರವಾಸಿ ದಂಪತಿಗಳು ಗಾಯಗೊಂಡಿದ್ದು, ಬಿಜೆಪಿಯ ಮಾಜಿ ಸರಪಂಚ್ ಒಬ್ಬರು ಸಾವನ್ನಪ್ಪಿದ್ದಾರೆ.
ಮೊದಲ ಘಟನೆಯಲ್ಲಿ, ಶೋಪಿಯಾನ್‌ನ ಹಿರ್ಪೋರಾ ಪ್ರದೇಶದಲ್ಲಿ ರಾತ್ರಿ 10.30 ರ ಸುಮಾರಿಗೆ ಐಜಾಜ್ ಶೇಖ್ ಎಂದು ಗುರುತಿಸಲಾದ ಬಿಜೆಪಿಯ ಸರಪಂಚ್ ನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು, ನಂತರ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ನಡೆದ ಮತ್ತೊಂದು ಘಟನೆಯಲ್ಲಿ, ಯುಟಿಯ ಅನಂತನಾಗ್ ಜಿಲ್ಲೆಯ ಪ್ರವಾಸಿ ಶಿಬಿರದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರಿಂದ ಜೈಪುರದ ಇಬ್ಬರು ಗಾಯಗೊಂಡಿದ್ದಾರೆ.
ಗಾಯಾಳು ಫರ್ಹಾ ಮತ್ತು ಆಕೆಯ ಪತಿ ತಬ್ರೇಜ್ ಅವರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.
“ಭಯೋತ್ಪಾದಕರು ಜೈಪುರ ನಿವಾಸಿ ಫರ್ಹಾ ಮತ್ತು ಆಕೆಯ ಪತಿ ತಬ್ರೇಜ್ ಮೇಲೆ ಯನ್ನಾರ್, ಅನಂತನಾಗ್‌ನಲ್ಲಿ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರದೇಶವನ್ನು ಸುತ್ತುವರಿಯಲಾಗಿದೆ” ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.