Advertisement

ತಾಲೀಮಿಗೆ “ಕ್ವಾಡ್‌’ಸಜ್ಜು; USA ನೇತೃತ್ವದಲ್ಲಿ ಭಾರತ, ಜಪಾನ್‌, ಆಸ್ಟ್ರೇಲಿಯಾ ನೌಕಾಭ್ಯಾಸ

09:57 AM Jul 23, 2020 | mahesh |

ಹೊಸದಿಲ್ಲಿ: ಚೀನಕ್ಕೆ ಬುದ್ಧಿಕಲಿಸಲು ಅಮೆರಿಕ ಮಿತ್ರ ರಾಷ್ಟ್ರಗಳು ಕಡಲನ್ನೇ ರಣರಂಗವನ್ನಾಗಿ ಮಾರ್ಪಡಿಸಿವೆ. ಸಮುದ್ರ ಸೀಮೆಯಲ್ಲಿ ಚೀನ ವಿರುದ್ಧ “ಕ್ವಾಡ್‌’ ಸದಸ್ಯ ರಾಷ್ಟ್ರಗಳ ಯುದ್ಧನೌಕೆಗಳು ಸಜ್ಜಾಗಿವೆ. ಭಾರತ, ಅಮೆರಿಕ, ಜಪಾನ್‌, ಆಸ್ಟ್ರೇಲಿಯಾಗಳ ಸಮರ ನೌಕೆಗಳ ಆರ್ಭಟ ಕಲ್ಪಿಸಿಕೊಂಡೇ ಚೀನ ದಿಕ್ಕೆಟ್ಟು ಕುಳಿತಿದೆ.

Advertisement

ಈ ವಾರದಲ್ಲಿ ಹಿಂದೂ ಮಹಾಸಾಗರ ಸೀಮೆಯಲ್ಲಿ ಭಾರತದ 4 ಯುದ್ಧನೌಕೆಗಳು ಅಮೆರಿಕದ ಸೂಪರ್‌ ಕ್ಯಾರಿಯರ್‌ ಯುಎಸ್ಸೆಸ್‌ ನಿಮಿಟ್ಜ್ ಜತೆ 2 ದಿನಗಳ ಜಂಟಿ ಬಲಪ್ರದರ್ಶನ ನಡೆಸಲಿವೆ. ಇದೇವೇಳೆ ಫಿಲಿಪ್ಪೀನ್ಸ್‌ ಸಮುದ್ರದಲ್ಲಿ ಅಮೆರಿಕದ ಮತ್ತೂಂದು ಸೂಪರ್‌ ಕ್ಯಾರಿಯರ್‌ ಯುಎಸ್ಸೆಸ್‌ ರೊನಾಲ್ಡ್‌ ರೇಗನ್‌, ಆಸ್ಟ್ರೇಲಿಯಾ ಮತ್ತು ಜಪಾನ್‌ ಯುದ್ಧ ನೌಕೆಗಳ ಜತೆಗೂಡಿ ಸಮರಾಭ್ಯಾಸ ಆರಂಭಿಸಲಿವೆ.

ಅಮೆರಿಕ ಆರ್ಭಟ: ದಕ್ಷಿಣ ಚೀನ ಸಮುದ್ರದಲ್ಲಿ ಮಿತ್ರರಾಷ್ಟ್ರಗಳ ಬಲದೊಂದಿಗೆ ಅಮೆರಿಕ ಭದ್ರಕೋಟೆ ನಿರ್ಮಿಸುತ್ತಿರುವುದು ಚೀನಕ್ಕೆ ಆತಂಕ ಹೆಚ್ಚಿಸಿದೆ. “ಚೀನದ ದುಷ್ಟಬುದ್ಧಿಯ ವಿರುದ್ಧ ನಮ್ಮ ಮಿತ್ರರಾಷ್ಟ್ರ ಗಳ ಸಾರ್ವಭೌಮತ್ವ ಬೆಂಬಲಿಸಲು, ಅವುಗಳನ್ನು ರಕ್ಷಿಸಲು ಅಮೆರಿಕ ಸದಾ ಜತೆಗಿರುತ್ತದೆ. ಅವರಿಗೆ ನಾವು ಧೈರ್ಯ ತುಂಬುತ್ತೇವೆ’ ಎಂಬ ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌ ಹೇಳಿಕೆ ಕ್ಸಿ ಜಿನ್‌ಪಿಂಗ್‌ ಆಡಳಿತಕ್ಕೆ ಭೀತಿ ಹುಟ್ಟಿಸಿದೆ.

ಚೀನ ಉತ್ತರನ ಪೌರುಷ: ತೈವಾನ್‌ಗೆ ವಿಶ್ವದ ಬೆಂಬಲ ಸಿಗುತ್ತಿದ್ದಂತೆ ಆ ಪುಟ್ಟ ರಾಷ್ಟ್ರದ ಮೇಲೆ ಚೀನ ಉತ್ತರನ ಪೌರುಷ ಮೆರೆಯುತ್ತಿದೆ. ಚೀನ ಪ್ರತಿನಿತ್ಯ ತನ್ನ ದ್ವೀಪಗಳ ಸಮೀಪ ಯುದ್ಧವಿಮಾನಗಳ ಹಾರಾಟ ನಡೆಸುತ್ತಿದೆ ಎಂದು ತೈವಾನ್‌ ಹೇಳಿದೆ.

ಚೀನಕ್ಕೆ ನೇಪಾಲ ಸಂಪುಟ ತಲೆನೋವು
ಕಠ್ಮಂಡು: ಅಲುಗಾಡುತ್ತಿರುವ ನೇಪಾಲ ಪ್ರಧಾನಿ ಕುರ್ಚಿಯನ್ನು ಪ್ರಯಾಸಪಟ್ಟು ಹಿಡಿದುಕೊಂಡಿರುವ ಚೀನಕ್ಕೆ ಈಗ ಮತ್ತೂಂದು ತಲೆನೋವು ಎದುರಾಗಿದೆ. ಪ್ರಧಾನಿ ಕೆ.ಪಿ. ಶರ್ಮಾ ಓಲಿ ಸರಕಾರದ ಸಚಿವ ಸಂಪುಟ ಪುನರ್‌ರಚನೆಗೆ ಮಾಜಿ ಪ್ರಧಾನಿ ಪ್ರಚಂಡ ಪಟ್ಟು ಹಿಡಿದಿದ್ದಾರೆ. ಇತ್ತ ಪ್ರಧಾನಿ ಕುರ್ಚಿ ಬಿಡಲ್ಲ, ಅತ್ತ ಪಕ್ಷದ ಅಧ್ಯಕ್ಷ ಸ್ಥಾನವನ್ನೂ ಬಿಡಲ್ಲ ಎನ್ನುತ್ತಿರುವ ಅಧಿಕಾರದಾಹಿ ಓಲಿ ನಿರ್ಧಾರವನ್ನು ಎನ್‌ಸಿಪಿಯ ಪ್ರಚಂಡ ಬಣ ವಿರೋಧಿಸುತ್ತಲೇ ಬಂದಿದೆ. ಓಲಿ ಮತ್ತು ಪ್ರಚಂಡ ನಡುವೆ ಔತಣಕೂಟ ಏರ್ಪಡಿಸಿ, ಬೆಸುಗೆಗೆ ಯತ್ನಿಸುತ್ತಿರುವ ಚೀನ ರಾಯಭಾರಿ ಹೌ ಯಾಂಕಿ ಈಗಾಗಲೇ ಹೈರಾಣಾಗಿದ್ದಾರೆ. ಇವೆಲ್ಲದರ ನಡುವೆ ಪ್ರಚಂಡ ಸಂಪುಟ ಪುನರ್‌ರಚನೆಗೆ ಪಟ್ಟು ಹಿಡಿದಿದ್ದು, ತಮ್ಮ ಬಣದವರಿಗೆ ಹೆಚ್ಚು ಸಚಿವ ಸ್ಥಾನಗಳನ್ನು ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.

Advertisement

ವಾಯುಪಡೆ ಸಾಮರ್ಥ್ಯಕ್ಕೆ ಸಚಿವ ಶಹಬಾಸ್‌
ಲಡಾಖ್‌ನ ಮುಂಚೂಣಿ ನೆಲೆಗಳಿಗೆ ಅತ್ಯಂತ ಶೀಘ್ರದಲ್ಲಿ ಯುದ್ದೋಪಕರಣ, ಯೋಧಪಡೆ ಗಳನ್ನು ರವಾನಿಸಿದ ವಾಯುಪಡೆಯ ಬಲಭೀಮ ಸಾಹಸವನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕೊಂಡಾಡಿದ್ದಾರೆ. ಈ ಮೂಲಕ ಐಎಎಫ್ ವಿರೋಧಿಗಳಿಗೆ ದಿಟ್ಟ ಸಂದೇಶ ರವಾನಿಸಿದೆ ಎಂದಿದ್ದಾರೆ. ಐಎಎಫ್ ಉನ್ನತ ಕಮಾಂಡರ್‌ಗಳ 3 ದಿನಗಳ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಚಿವರು, ರಾಷ್ಟ್ರದ ಜನತೆ ಭಾರತೀಯ ಸೇನೆಯ ಶಸ್ತ್ರಾಸ್ತ್ರ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದಾರೆ. ತಂತ್ರಜ್ಞಾನ ಅಳವಡಿಸಿಕೊಳ್ಳುವ ವಿಚಾರದಲ್ಲಿ ಐಎಎಫ್ ಸದಾ ಮುಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚೀನದ 40 ಸಾವಿರ ಸೈನಿಕರ ನಿಯೋಜನೆ
ಸೇನೆ ವಾಪಸಾತಿಗೆ ಕಾರ್ಪ್ ಕಮಾಂಡರ್‌ಗಳ ಸಭೆಯಲ್ಲಿ ಒಪ್ಪಿಯೂ ಚೀನ ಪೂರ್ವ ಲಡಾಖ್‌ ಗಡಿಯ ತನ್ನ ಮುಂಚೂಣಿಯ ನೆಲೆಗಳಲ್ಲಿ 40 ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. “ವಾಯುಪಡೆ ವ್ಯವಸ್ಥೆ, ಶಸ್ತ್ರಸಜ್ಜಿತ ಸಿಬಂದಿ, ಫಿರಂಗಿದಳಗಳನ್ನು ಈ ಭಾಗದಲ್ಲಿ ಹಾಗೆಯೇ ಉಳಿಸಿಕೊಂಡಿದೆ. ಸರಿಸುಮಾರು 40 ಸಾವಿರ ಸೈನಿಕರು ಪಿಎಲ್‌ಎ ನಿಯೋಜಿಸಿದ್ದು, ಸೇನೆ ವಾಪಸಾತಿಯ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ’ ಎಂದು ಭಾರ ತೀಯ ಸೇನೆಯ ಮೂಲಗಳು ಹೇಳಿವೆ.

ಹುತಾತ್ಮ ಯೋಧನ ಪತ್ನಿ ಡೆಪ್ಯುಟಿ ಕಲೆಕ್ಟರ್‌
ಗಾಲ್ವಾನ್‌ ಘರ್ಷಣೆಯಲ್ಲಿ ವೀರಮರಣವನ್ನಪ್ಪಿದ ಕರ್ನಲ್‌ ಬಿ. ಸಂತೋಷ್‌ ಬಾಬು ಪತ್ನಿಯನ್ನು ಡೆಪ್ಯುಟಿ ಕಲೆಕ್ಟರ್‌ ಆಗಿ ತೆಲಂಗಾಣ ಸರಕಾರ ನೇಮಿಸಿದೆ. ಸಿಎಂ ಕೆ. ಚಂದ್ರಶೇಖರ ರಾವ್‌ ಈ ಕುರಿತ ನೇಮಕಾತಿ ಪತ್ರವನ್ನು ಯೋಧನ‌ ಪತ್ನಿ ಸಂತೋಷಿ ಅವರಿಗೆ ಬುಧವಾರ ಹಸ್ತಾಂತರಿಸಿ ದ್ದಾರೆ. ಕಳೆದ ತಿಂಗಳಷ್ಟೇ ಕೆಸಿಆರ್‌ ಹುತಾತ್ಮ ಯೋಧನ ಪೋಷಕರಿಗೆ 1 ಕೋಟಿ ರೂ., ಪತ್ನಿಗೆ 4 ಕೋಟಿ ರೂ. ಪರಿಹಾರ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next