Advertisement
ಕಳೆದ ವರ್ಷದ ಬೇಸಿಗೆ ಹೋಲಿಸಿದರೆ ಈ ಬಾರಿ ಬೇಸಿಗೆಯಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇಷ್ಟಾದರೂ ಸೌರಶಕ್ತಿ, ಪವನಶಕ್ತಿ ಮೂಲದಿಂದಲೇ ಬೇಡಿಕೆಯ ಅರ್ಧದಷ್ಟು ವಿದ್ಯುತ್ ಪೂರೈಕೆಯಾಗುತ್ತಿರುವುದು ವರದಾನವಾಗಿ ಪರಿಣಮಿಸಿದೆ. ರಾಜ್ಯದ ಹಲವೆಡೆ 15 ದಿನದಿಂದ ಮಳೆಯಾಗುತ್ತಿರುವುದರಿಂದ ಬೇಡಿಕೆಯೂ ತಗ್ಗಿದ್ದು, ಉಷ್ಣ ಸ್ಥಾವರ ಹಾಗೂ ಜಲವಿದ್ಯುತ್ ಉತ್ಪಾದನೆ ಮೇಲಿನ ಒತ್ತಡ ತಗ್ಗಿಸಿದೆ. ಹಾಗಾಗಿ ಈ ಬಾರಿಯ ಬೇಸಿಗೆಯಲ್ಲಿ ವಿದ್ಯುತ್ ಕಡಿತವಿಲ್ಲದೆ ಪರಿಸ್ಥಿತಿ ನಿಭಾಯಿಸುವ ವಿಶ್ವಾಸವನ್ನು ಇಂಧನ ಇಲಾಖೆ ವ್ಯಕ್ತಪಡಿಸಿದೆ.
Related Articles
Advertisement
ಪವನಶಕ್ತಿ ವಿದ್ಯುತ್ ಹೆಚ್ಚಳ: ಸೌರಶಕ್ತಿ ಜತೆಗೆ ಪವನ ಶಕ್ತಿ ಮೂಲದ ವಿದ್ಯುತ್ ಉತ್ಪಾದನೆಯೂ ಹೆಚ್ಚಾಗಿದೆ. ಕೆಲ ದಿನಗಳಿಂದ ಪವನಶಕ್ತಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿದ್ದು, ಮುಂದಿನ ಮೂರ್‍ನಾಲ್ಕು ತಿಂಗಳ ಕಾಲ ಪವನಶಕ್ತಿ ವಿದ್ಯುತ್ ಉತ್ಪಾದನೆ ಉತ್ತಮ ಸ್ಥಿತಿಯಲ್ಲಿರಲಿದೆ. ಗುರುವಾರ ಪವನಶಕ್ತಿ ಮೂಲದಿಂದ 2240 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಿತ್ತು. ಸೌರ ಹಾಗೂ ಪವನಶಕ್ತಿ ಮೂಲದಿಂದ 5,500ರಿಂದ 6000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾದರೆ ಕೇಂದ್ರ ಸರ್ಕಾರದಿಂದ ವಿದ್ಯುತ್ ಹಂಚಿಕೆಯಡಿ 3,500 ಮೆಗಾವ್ಯಾಟ್ ಪೂರೈಕೆಯಾಗುತ್ತಿದೆ. ಹಾಗಾಗಿ ಉಳಿಕೆ ಬೇಡಿಕೆಯನ್ನಷ್ಟೇ ಉಷ್ಣ ಸ್ಥಾವರ ಹಾಗೂ ಜಲವಿದ್ಯುತ್ ಮೂಲದಿಂದ ಪೂರೈಸಲಾಗುತ್ತಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಈ ಮೂಲದಿಂದ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಮೂಲಗಳು ತಿಳಿಸಿವೆ.
ವರದಾನವಾದ ಮಳೆ: ಈ ಬಾರಿಯ ಬೇಸಿಗೆಯಲ್ಲಿ ಸರಾಸರಿ ವಿದ್ಯುತ್ ಬೇಡಿಕೆ 10,500ರಿಂದ 11,500 ಮೆಗಾವ್ಯಾಟ್‌ನಷ್ಟಿತ್ತು. ಆದರೆ 15 ದಿನಗಳಿಂದ ಹಲವೆಡೆ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬೇಡಿಕೆಯಲ್ಲಿ 2000 ಮೆಗಾವ್ಯಾಟ್‌ನಷ್ಟು ಇಳಿಕೆಯಾಗಿದೆ. ಇನ್ನೂ ಕೆಲವೆಡೆ ಮಳೆ ಮುಂದುವರಿದಿರುವುದರಿಂದ ಬೇಡಿಕೆ ಕಡಿಮೆ ಇದೆ. ಹಾಗಾಗಿ ಬಳ್ಳಾರಿಯ ಬಿಟಿಪಿಎಸ್ ಘಟಕ ದಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದು, ರಾಯಚೂ ರಿನ ಆರ್‌ಟಿಪಿಎಸ್ ಸ್ಥಾವರದಲ್ಲಿ ಕನಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಹೇಳಿವೆ.
ರಾಜ್ಯದಲ್ಲಿ ಸದ್ಯ ವಿದ್ಯುತ್ ಬೇಡಿಕೆ ತಗ್ಗಿದೆ. ಪವನಶಕ್ತಿ, ಸೌರಶಕ್ತಿ ಮೂಲದಿಂದಲೂ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್ ಕಡಿತವಿಲ್ಲದಂತೆ ಪರಿಸ್ಥಿತಿ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ.-ಸೆಲ್ವ ಕುಮಾರ್, ಕೆಪಿಟಿಸಿಎಲ್ ಎಂಡಿ -ಎಂ.ಕೀರ್ತಿಪ್ರಸಾದ್