Advertisement
ಇಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೆ ಎತ್ತಿ ಕೊಂಡೇ ಹೋಗಬೇಕು. ಒಬ್ಬರು ಮಾತ್ರ ನಡೆಯಲು ಇರುವ ದಾರಿ ಇದಾದ್ದು, ಇಬ್ಬರು – ಮೂವರು ಒಟ್ಟಿಗೆ ನಡೆದುಕೊಂಡು ಹೋಗಲು ಅಸಾಧ್ಯ. ಹಿರಿಯರು, ಮಹಿಳೆಯರಿಗೆ ಹುಷಾರಿಲ್ಲದೆ ಆದರೆ ಮನೆಯಲ್ಲಿ ಸ್ವಲ್ಪ ಸದೃಢವಾದ ಗಂಡಸರು ಇದ್ದರೆ ಸರಿ, ಇಲ್ಲದಿದ್ದರೆ ಅವರನ್ನು ಆಸ್ಪತ್ರೆಗೆ ಸೇರಿಸುವುದು ಕಷ್ಟ.
ಬಾಳೆಹಿತ್ಲು, ವಿಲಾಸಕೇರಿ ಪರಿಸರದಲ್ಲಿ ರಸ್ತೆ ಸಂಪರ್ಕ ವಿಲ್ಲದ 18 ರಿಂದ 20 ಮನೆಗಳಿವೆ. ಇಲ್ಲಿನ ಜನ ಕಳೆದ 25 ವರ್ಷಗಳಿಂದ ರಸ್ತೆಗಾಗಿ ಸಂಬಂಧಪಟ್ಟ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಇದ್ದಾರೆ. ಆದರೆ ಇನ್ನೂ ಈಡೇರಿಲ್ಲ. 3 ವರ್ಷಗಳ ಹಿಂದೆ ಮೂಡುಕೇರಿಯಿಂದ ಸುಮಾರು 200 ಮೀ. ವರೆಗೆ ಮೊದಲಿಗೆ 15 ಲಕ್ಷ ರೂ. ಹಾಗೂ ಅನಂತರ 8 ಲಕ್ಷ ರೂ. ಒಟ್ಟು 23 ಲಕ್ಷ ರೂ. ವೆಚ್ಚದಲ್ಲಿ ಸ್ವಲ್ಪ ದೂರದವರೆಗೆ ಅಷ್ಟೇ ರಿಂಗ್ ರೋಡ್ ಆಗಿದೆ. ಅದು ಆಗಿ 3 ವರ್ಷ ಆಯಿತು ಎನ್ನುವುದಾಗಿ ಬಾಳೆಹಿತ್ಲು ನಿವಾಸಿ ಸುರೇಶ್ ಮೊಗವೀರ ಹೇಳುತ್ತಾರೆ.
Related Articles
ಇಲ್ಲಿ ಮುಖ್ಯ ರಸ್ತೆಯಿಂದ ಮನೆಗಳಿಗೆ ರಸ್ತೆ ನಿರ್ಮಾಣಕ್ಕೆ ಸುಮಾರು 1 ಕಿ.ಮೀ. ಅಂತರದಲ್ಲಿ ಖಾಸಗಿ ಜಾಗ ಬರುವುದರಿಂದ ಕಷ್ಟ. ಆ ಕಾರಣಕ್ಕೆ ಮೂಡುಕೇರಿಯಿಂದ ಬಾಳೆಹಿತ್ಲು ಮೂಲಕ ವಿಲಾಸಕೇರಿಯವರೆಗೆ ಸುಮಾರು 1.5 ಕಿ.ಮೀ. ವರೆಗೆ ರಿಂಗ್ ರೋಡ್ ನಿರ್ಮಾಣ ಮಾಡಿದರೆ ಇಲ್ಲಿರುವ ಎಲ್ಲ ಮನೆಗಳ ರಸ್ತೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಆದರೆ ಈಗ ರಿಂಗ್ ರೋಡ್ ಹಾದು ಹೋಗುವ ಜಾಗದಲ್ಲಿಯೂ ಜಾಗದ ತಕರಾರು ಇದೆ. ಮಾತ್ರವಲ್ಲದೆ ಇದಕ್ಕೆ 20 ಲಕ್ಷ ರೂ. ಗೂ
ಮಿಕ್ಕಿ ಅನುದಾನ ಬೇಕಿದ್ದು, ಇದಕ್ಕೆ ಶಾಸಕರು ಅಥವಾ ಸಂಸದರೇ ಅನುದಾನ ನೀಡಬೇಕಿದೆ ಎನ್ನುವುದು ಪಂಚಾಯತ್ ಸದಸ್ಯ ಮಹೇಶ್ ಅವರ ಅಭಿಪ್ರಾಯ.
Advertisement
ಅಮ್ಮನ ಸಾವಿಗೆ ಕಾರಣಅಮ್ಮನಿಗೆ 3 ವರ್ಷಗಳಿಂದ ಹುಷಾರಿಲ್ಲದೆ ಇದ್ದರು. ಪ್ರತಿ ಸಲ ಕಷ್ಟಪಟ್ಟುಕೊಂಡು ಎತ್ತಿಕೊಂಡೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿತ್ತು. ಕೊನೆ -ಕೊನೆಗೆ ಅಮ್ಮನೇ ಆಸ್ಪತ್ರೆಗೆ ಬೇಡ ಅನ್ನುತ್ತಿದ್ದರು. 2 ವರ್ಷದ ಹಿಂದೆ ಸೀರಿಯಸ್ ಆಗಿದ್ದಾಗ ಅವರನ್ನು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಕಾರಣ ಅವರು ಸಾವನ್ನಪ್ಪಿದರು. ರಸ್ತೆಯಿದ್ದಿದ್ದರೆ ಅವರು ಇನ್ನಷ್ಟು ವರ್ಷ ಬದುಕುತ್ತಿದ್ದರೋ ಏನೋ ಎಂದು ಹೇಳಿ ಕಣ್ಣೀರಾದರು ಬಾಳೆಹಿತ್ಲು ನಿವಾಸಿ ಸಂದೀಪ್. ರಸ್ತೆಯೊಂದೇ ಸಾಕು
ನಾವು ದೇಶದ ಗಡಿ ಕಾದು, ರಜೆಯಲ್ಲಿ ಮನೆಗೆ ಹೋದಾಗ ಇಷ್ಟು ವರ್ಷವಾದರೂ, ನಮಗೊಂದು ರಸ್ತೆ ಸಂಪರ್ಕ ಇಲ್ಲವೆಂದು ತುಂಬಾನೇ ಬೇಜಾರಾಗುತ್ತೆ. ರಾಜಕಾರಣಿಗಳು ಮಾಡಿಕೊಡುತ್ತೇವೆ ಅನ್ನುವ ಭರವಸೆ ಮಾತ್ರ ಕೊಡುತ್ತಾರೆ ಅಷ್ಟೇ. ರಸ್ತೆಯಿಲ್ಲದೆ ಇಲ್ಲಿನ ಹೆಂಗಸರು, ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತುಂಬಾ ಕಷ್ಟವಾಗುತ್ತಿದೆ. ನಮಗೆ ಪಂಚಾಯತ್, ಜನಪ್ರತಿನಿಧಿಗಳು ಬೇರೆ ಯಾವುದೇ ಸವಲತ್ತು ಕೊಡುವುದು ಬೇಡ. ಆದರೆ ರಸ್ತೆಯೊಂದನ್ನು ಮಾಡಿಕೊಡಲಿ.
-ಪ್ರದೀಪ್ ಕುಮಾರ್ ಖಾರ್ವಿ,
ಬಾಳೆಹಿತ್ಲು, ಬಿಎಸ್‌ಎಫ್ ಯೋಧ ಪ್ರಯತ್ನದಲ್ಲಿದ್ದೇವೆ
ಮೂಡುಕೇರಿಯಿಂದ ವಿಲಾಸಕೇರಿಯವರೆಗೆ ರಿಂಗ್ ರೋಡ್ ನಿರ್ಮಿಸಲು ಈಗಾಗಲೇ ಶಾಸಕರ ಬಳಿಯೂ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಎಲ್ಲ ರೀತಿಯಿಂದಲೂ ಪ್ರಯತ್ನದಲ್ಲಿದ್ದೇವೆ. ಗ್ರಾ.ಪಂ. ಅಥವಾ ತಾ.ಪಂ.ನಿಂದ ಇದು ಕಷ್ಟ. ಹೆಚ್ಚಿನ ಅನುದಾನ ಬೇಕಿರುವುದರಿಂದ ಮತ್ತೂಮ್ಮೆ ಶಾಸಕರ ಗಮನಕ್ಕೆ ತರಲಾಗುವುದು.
-ರಾಮ್‌ಕಿಶನ್ ಹೆಗ್ಡೆ,
ತಾ.ಪಂ. ಉಪಾಧ್ಯಕ್ಷರು, ಕುಂದಾಪುರ - ಪ್ರಶಾಂತ್ ಪಾದೆ