Advertisement

ಹನ್ನೆರಡು ವರ್ಷಗಳಾದರೂ ಮುಗಿಯದ ವನವಾಸ

10:31 AM Jun 18, 2019 | Team Udayavani |

ದಾವಣಗೆರೆ/ಚನ್ನಗಿರಿ: ಬರೋಬ್ಬರಿ 12 ವರ್ಷಗಳ ಹಿಂದೆ ಭಾರಿ ಪ್ರಚಾರ ಪಡೆದಿದ್ದ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಈಗ ಮತ್ತೆ ಸುದ್ದಿ ಮಾಡುತ್ತಿದೆ.

Advertisement

ಈ ಹಿಂದೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಆರಂಭಿಸಿದ ಗ್ರಾಮ ವಾಸ್ತವ್ಯದ ಭಾಗವಾಗಿ 2007ರಲ್ಲಿ ದಾವಣಗೆರೆ ಜಿಲ್ಲೆಯ (ಈಗ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗ್ರಾಮ ಸೇರಿ) ಎರಡು ಗ್ರಾಮಗಳಲ್ಲಿ ಸಿಎಂ ವಾಸ್ತವ್ಯ ಮಾಡಿದ್ದು ಹೆಚ್ಚು ಸುದ್ದಿಯಾಗಿತ್ತು.

ನಿಜ. ಕುಗ್ರಾಮದ ಸಾಮಾನ್ಯನೊಬ್ಬ ರಾಜ್ಯದ ಮುಖ್ಯಮಂತ್ರಿ ಕಂಡು ತನ್ನ ಸಮಸ್ಯೆ ತೋಡಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ರಾಜ್ಯದ ಕಾರ್ಯಭಾರ ಹೊತ್ತ ಮುಖ್ಯಮಂತ್ರಿ ಜನಸಾಮಾನ್ಯರೆಲ್ಲರನ್ನೂ ಭೇಟಿ ಮಾಡಿ ಸಮಸ್ಯೆ ಆಲಿಸಲು ಆಗದು. ಮುಖ್ಯಮಂತ್ರಿಯೇ ಜನಸಾಮಾನ್ಯರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸುವುದು, ತಾವು ವಾಸ್ತವ್ಯ ಹೂಡಿದ ಮನೆಯವರೇ ತಯಾರಿಸಿದ ಆಹಾರ ಸೇವಿಸುವುದು ವಿಶೇಷ ಎನಿಸುವ ಜತೆಗೆ ಮುಖ್ಯಮಂತ್ರಿ ಹಾಗೂ ಜನಸಾಮಾನ್ಯರ ಮಧ್ಯೆ ಒಂದಷ್ಟು ವೇದಿಕೆ ನಿರ್ಮಿಸುವ ಉದ್ದೇಶ ಗ್ರಾಮ ವಾಸ್ತವ್ಯದ್ದಾಗಿತ್ತು. ಉದ್ದೇಶವೇನೋ ಒಳ್ಳೆಯದಿತ್ತು. ಆದರೆ, ಅದರಿಂದ ಆದ ಪ್ರಯೋಜನವೇನು? ಎಂಬುದಕ್ಕೆ ಸಮರ್ಪಕ ಉತ್ತರ ಮಾತ್ರ ಇನ್ನೂ ಸಿಕಿಲ್ಲ.

ಆಗ ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರದ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಈಗ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಗ್ರಾಮ-ಶಾಲಾ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಆ ಕಾರ್ಯಕ್ರಮ ದಾವಣಗೆರೆ ಜಿಲ್ಲೆಯಲ್ಲೂ ನಡೆಯಲಿದೆಯೇ ಎಂಬುದು ಇನ್ನೂ ಖಾತರಿ ಆಗಿಲ್ಲ. ಅದಕ್ಕೂ ಮುನ್ನ ಎಚ್.ಡಿ.ಕುಮಾರಸ್ವಾಮಿ 12 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದ ಗ್ರಾಮದ ಸ್ಥಿತಿ ಈಗ ಹೇಗಿದೆ ಎಂಬುದನ್ನು ಉದಯವಾಣಿ ಅವಲೋಕಿಸಿದೆ.

ಎಚ್.ಡಿ.ಕುಮಾರಸ್ವಾಮಿ 2007ರ ಮೇ ತಿಂಗಳಲ್ಲಿ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಧುರನಾಯಕನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಏನೇನೋ ಆಸೆ ಇಟ್ಟುಕೊಂಡಿದ್ದ ಆ ಗ್ರಾಮಸ್ಥರಲ್ಲೀಗ ನಿರಾಸೆ ಆಗಿದೆ. ಸಣ್ಣ ಪುಟ್ಟ ಕೆಲಸ ಬಿಟ್ಟರೆ ಆ ಗ್ರಾಮ ಇಂದಿಗೂ ಯಾವ ಸುಧಾರಣೆ ಕಾಣದೇ ಹಾಗೆಯೇ ಇದೆ.

Advertisement

ತಾಲೂಕು ಕೇಂದ್ರ ಚನ್ನಗಿರಿಯಿಂದ 18 ಕಿ.ಮೀ ದೂರದ ಮಧುರನಾಯಕನಹಳ್ಳಿ ಎಂಬ ಕುಗ್ರಾಮಕ್ಕೆ ನಾಡಿದ ದೊರೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ಕೇಳಿ ಆ ಗ್ರಾಮವಿರಲಿ ಸುತ್ತ ಮುತ್ತಲಿನ ಗ್ರಾಮಸ್ಥರಲ್ಲೂ ಕೌತುಕ ಇತ್ತು. ಆ ಗ್ರಾಮದಲ್ಲಿ ಏನೇನೋ ಅಭಿವೃದ್ಧಿ ಕನಸು ಕನಸಾಗಿಯೇ ಉಳಿದಿದೆ. ಈಗಲೂ ಮಧುರನಾಯಕನಹಳ್ಳಿ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಈ ಗ್ರಾಮಕ್ಕೆ ತೆರಳಲು ಇಂದಿಗೂ ಸಾರಿಗೆ ವ್ಯವಸ್ಥೆಯಿಲ,್ಲ ಪರಸ್ಥಳಕ್ಕೆ ಹೋಗಲು ಬಸ್‌ಗಾಗಿ ಆ ಗ್ರಾಮದಿಂದ 3 ಕಿಲೋ ಮೀಟರ್‌ ದೂರದ ಎನ್‌. ಗಾಣದಕಟ್ಟೆಕ್ಕೆ ತೆರಳಬೇಕಿದೆ.

ಬಸ್‌ ಕಾಣದ ಗ್ರಾಮಸ್ಥರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಧುರನಾಯಕನಹಳ್ಳಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿದ ಕೆಲವೇ ದಿನಗಳು ಮಾತ್ರ ಸರ್ಕಾರಿ ಬಸ್‌ಗಳು ಸಂಚರಿಸಿದ್ದು ಬಿಟ್ಟರೆ ಮತ್ತೆ ಆ ಗ್ರಾಮಕ್ಕೆ ಬಸ್ಸುಗಳು ತಿರುಗಿ ನೋಡಿಲ್ಲ, ರಸ್ತೆ ಭಾಗ್ಯವನ್ನೇ ಕಾಣದ ಗ್ರಾಮದಲ್ಲಿ ತರಾತುರಿಯಲ್ಲಿ ರಸ್ತೆಗಳನ್ನು ಮಾಡುವುದಕ್ಕೆ ಗ್ರಾವೆಲ್ ತಂದು ಸುರಿದು ಹೋದವರು ಪುನಃ ಆ ಕಡೆ ನೋಡಿಲ್ಲ. ಇತ್ತೀಚೆಗೆ ವಿವಿಧ ಯೋಜನೆಗಳಡಿ ಒಂಡೆರೆಡು ರಸ್ತೆ ಮಾತ್ರ ಸಿಮೆಂಟೀಕರಣವಾಗಿವೆ. ಕೆಲವು ರಸ್ತೆಗಳು ಮಣ್ಣಿನಿಂದ ಕೂಡಿವೆ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ತಂಗಿದ್ದ ಮನೆಯಲ್ಲಿ ಶೌಚಾಲಯವೊಂದನ್ನು ಆ ಕ್ಷಣದಲ್ಲಿ ನಿರ್ಮಿಸಿದ್ದು ಬಿಟ್ಟರೆ ಗ್ರಾಮದಲ್ಲಿ ಅವರ ಆಡಳಿತಾವಧಿಯಲ್ಲಿ ಯಾವೊಂದು ಕೆಲಸಗಳು ನಡೆದಿಲ್ಲ, ಸಿಎಂ ಹೆಸರಿಗಷ್ಟೆ ಗ್ರಾಮವಾಸ್ತವ್ಯ ನಡೆಸಿದ್ದಾರೆ ಎಂಬುದಾಗಿ ಗ್ರಾಮಸ್ಥರು ದೂರುತ್ತಾರೆ.

ಕುಮಾರಸ್ವಾಮಿಯವರು ಗ್ರಾಮಕ್ಕೆ ಭೇಟಿ ನೀಡಿದ ಸಂರ್ಭದಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ. ಇನಷ್ಟು ಕೆಲಸ ಆಗಬೇಕಿದೆ. ಗ್ರಾಮಕ್ಕೆ ಬೇಕಾಗಿರುವ ಸೌಕರ್ಯದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇವೆ. ರಸ್ತೆಗಳ ದುರಸ್ತಿ ಮಾಡಬೇಕಿದೆ.•ಶೇಖರ ನಾಯ್ಕ, ಸಿಎಂ ವಾಸಿಸಿದ್ದ ಮನೆ ಮಾಲೀಕ

ತಾಪಂ ಸದಸ್ಯನ ಮನೆಯಲ್ಲಿ: ಮಧುರನಾಯಕನಹಳ್ಳಿಯಲ್ಲಿ ಶೇಖರ್‌ ನಾಯ್ಕ ಎಂಬುವರ ಮನೆಯಲ್ಲಿ ಕುಮಾರಸ್ವಾಮಿ ತಂಗಿದ್ದರು. ತಾಲೂಕು ಪಂಚಾಯಿತಿ ಸದಸ್ಯರಾಗಿದ್ದ ಜೆಡಿಎಸ್‌ನ ಶೇಖರನಾಯ್ಕ ಅವರ ಮನೆಯಲ್ಲಿ ಸೀಗೆಸೊಪ್ಪಿನ ಸಾರು, ರಾಗಿ ಮುದ್ದೆ ಸವಿದಿದ್ದ ಮುಖ್ಯಮಂತ್ರಿಗಳಿಗೆ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿ ಸಂಬಂಧ ಮುಂದಿಟ್ಟಿದ್ದ ಬೇಡಿಕೆಗಳನ್ನು ಆದಷ್ಟು ಬೇಗನೆ ಕಾರ್ಯಗತಗೊಳಿಸುವುದಾಗಿ ಹೇಳಿದ್ದರು. 2007ರಲ್ಲಿ ಪಿಎಂಇ ಯೋಜನೆಯಡಿ ಎ.ಗಾಣದಕಟ್ಟೆ, ಗುಡ್ಡದ ಕೊಮ್ಮರನಹಳ್ಳಿ, ಲಿಂಗದಹಳ್ಳಿವರೆಗೆ ರಸ್ತೆ ಡಾಂಬರೀಕರಣ ಮಾಡಲಾಗಿದ್ದು, ಈಗ ಆ ರಸ್ತೆಗಳು ದುಸ್ಥಿತಿಯಲ್ಲಿವೆ.

ಸಿಎಂ ತಂಗಿದ್ದ ಮನೆಯ ಮಾಲೀಕ ಶೇಖರ ನಾಯ್ಕ ಈಗ ಚನ್ನಗಿರಿಯಲ್ಲಿ ವಾಸವಾಗಿದ್ದಾರೆ. ಸಿಎಂ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ ಎಂಬ ನೆಪದಲ್ಲಿ ಗ್ರಾಪಂ ಸಿಬ್ಬಂದಿ, ಜಿಲ್ಲಾಡಳಿತದವರು ಹಳ್ಳಿ ಸ್ವಚ್ಛಗೊಳಿಸಿದ್ದರು. ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು. ಮಾಧ್ಯಮಗಳು ಸಹ ಭಾರಿ ಪ್ರಚಾರ ನೀಡಿ, ಕುತೂಹಲ ಹುಟ್ಟಿಸಿದ್ದವು. ಆದರೆ, ಗ್ರಾಮ ವಾಸ್ತವ್ಯದಿಂದ ಸಿಕ್ಕಿದ್ದೇನು? ಯಾವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಕುಡಿಯಲು ಶುದ್ಧ ನೀರಿಲ್ಲ:
ಮಧುರನಾಯಕನಹಳ್ಳಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿವೆ. 500 ಜನ ವಾಸ ಮಾಡುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯಿಂದ ಬೋರವೆಲ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇತ್ತೀಚೆಗೆ ನೀರಿನಲ್ಲಿ ಫ್ಲೋರೈಡ್‌ ಅಂಶ ಕಂಡು ಬರುತ್ತಿದೆ ಎಂದು ಗ್ರಾಮದ ಯುವಕರು ಹೇಳುತ್ತಾರೆ.
ಸಿಗದ ಸಾಗುವಳಿ ಹಕ್ಕುಪತ್ರ:
ಮಧುರನಾಯಕನಹಳ್ಳಿಯಲ್ಲಿ ಲಂಬಾಣಿ ಜನಾಂಗದವರು ಹೆಚ್ಚಿದ್ದಾರೆ. ನಾಯಕ, ಲಿಂಗಾಯತರ ಮೂರ್‍ನಾಲ್ಕು ಮನೆ ಮಾತ್ರ ಇವೆ. ಕೂಲಿ ಕಾರ್ಮಿಕರೇ ಅಧಿಕವಾಗಿದ್ದು, ಬಗರ್‌ಹುಕುಂ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಅವರಿಗೆ ಹಕ್ಕು ಪತ್ರ ಹಂಚಿಕೆ ಮಾಡುವುದಾಗಿ ನೀಡಿದ್ದ ಭರವಸೆ ಇನ್ನೂ ಕಾರ್ಯಗತವಾಗಿಲ್ಲ.
ಸಿಎಂ ನೀಡಿದ್ದ ಭರವಸೆ ಏನು?:
ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ, ಗ್ರಾಮದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದಕ್ಕೆ ಮುಕ್ತಿ ನೀಡುವೆ. ಅಭಿವೃದ್ಧಿ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ದತ್ತು ತೆಗೆದುಕೊಂಡು ವಿಶೇಷ ಅನುದಾನದಿಂದ ಮಾದರಿ ಗ್ರಾಮವನ್ನಾಗಿ ಮಾಡುವುದಾಗಿ ಹೇಳಿದ್ದರು.
•ಎನ್‌.ಆರ್‌.ನಟರಾಜ್‌, ಸಿ.ಎಸ್‌.ಶಶೀಂದ್ರ
Advertisement

Udayavani is now on Telegram. Click here to join our channel and stay updated with the latest news.

Next