Advertisement

ರಾಜಕೀಯ ಕಿಚ್ಚು ಹೊತ್ತಿಸಿದ ಹಿಂದೂ ಹುಡುಗಿಯರ ಮತಾಂತರ

02:35 AM Mar 25, 2019 | Sriram |

ನವದೆಹಲಿ: ಹೋಳಿ ಹಬ್ಬದ ದಿನ ಪಾಕಿಸ್ತಾನದಲ್ಲಿ ಇಬ್ಬರು ಬಾಲಕಿಯರನ್ನು ಅಪಹರಿಸಿ ಅವರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಲ್ಲದೆ, ಇಬ್ಬರು ಮುಸ್ಲಿಂ ಯುವಕರಿಗೆ ಬಲವಂತವಾಗಿ ಮದುವೆ ಮಾಡಿಕೊಟ್ಟಿರುವ ಪ್ರಕರಣ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಪಾಕಿಸ್ತಾನದ ಮಾಹಿತಿ ಸಚಿವ ಫ‌ವಾದ್‌ ಹುಸೇನ್‌ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

Advertisement

ಸಚಿವದ್ವಯರ “ಟ್ವೀಟ್‌ ವಾರ್‌’
ಪಾಕ್‌ನಲ್ಲಿರುವ ಭಾರತೀಯ ಹೈಕಮೀಷನ್‌ಗೆ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಸಲ್ಲಿಸಲು ಸೂಚಿಸಿರುವುದಾಗಿ ಸುಷ್ಮಾ ಅವರು ಟ್ವಿಟರ್‌ನಲ್ಲಿ ಪ್ರಕಟಿಸುತ್ತಿದ್ದಂತೆ, ಪ್ರತಿಕ್ರಿಯಿಸಿದ ಫ‌ವಾದ್‌ ಹುಸೇನ್‌, “ಸ್ವರಾಜ್‌ ಅವರೇ, ನಮ್ಮ ಆಂತರಿಕ ಪ್ರಕರಣದಲ್ಲಿ ಮೂಗು ತೂರಿಸಲು ಇದು ಮೋದಿ ಆಡಳಿತವಿರುವ ಭಾರತವಲ್ಲ, ಇಮ್ರಾನ್‌ ಖಾನ್‌ ಅವರ ನಯಾ ಪಾಕಿಸ್ತಾನ. ನಮ್ಮ ರಾಷ್ಟ್ರಧ್ವಜದ ಬಿಳಿ ಬಣ್ಣವೂ (ಅಲ್ಪಸಂಖ್ಯಾತರ ಪ್ರತೀಕ) ನಮಗೆ ಆಪ್ತವಾಗಿದೆ. ಇನ್ನಾದರೂ ನೀವು ಇದೇ ದಕ್ಷತೆಯಿಂದ ನಿಮ್ಮ ದೇಶದ ಅಲ್ಪಸಂಖ್ಯಾತರೊಡನೆ ವ್ಯವಹರಿಸುತ್ತೀರಿ ಎಂದು ಆಶಿಸುತ್ತೇನೆ’ ಎಂದರು.

ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸುಷ್ಮಾ, “ಮಿಸ್ಟರ್‌ ಮಿನಿಸ್ಟರ್‌, ನಾನು ಹೈಕಮಿಷನ್‌ಗೆ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದಷ್ಟೇ ಹೇಳಿದ್ದೆ. ಅಷ್ಟಕ್ಕೆ ನೀವು ಅಸಂಬದ್ಧವಾಗಿ ಮಾತಾಡಿರುವುದು ಪ್ರಕರಣದ ಬಗ್ಗೆ ನಿಮ್ಮಲ್ಲಿರುವ ಅಪರಾಧಿ ಮನೋಭಾವವನ್ನು ಎತ್ತಿ ತೋರಿಸಿದೆ’ ಎಂದು ತಿರುಗೇಟು ನೀಡಿದರು.

ತನಿಖೆಗೆ ಆದೇಶಿಸಿದ ಇಮ್ರಾನ್‌
ಅಪಹರಣ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಎಚ್ಚೆತ್ತುಕೊಂಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಇತ್ತೀಚೆಗಷ್ಟೇ “ಮೋದಿ ಸರ್ಕಾರಕ್ಕೆ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕೆಂದು ನಾನು ತೋರಿಸುತ್ತೇನೆ’ ಎಂದಿದ್ದ ಇಮ್ರಾನ್‌ಗೆ ಈ ಪ್ರಕರಣ ಇರುಸು ಮುರುಸು ತಂದಿದೆ.

ಏನಿದು ಘಟನೆ?
ಹೋಳಿ ಹಬ್ಬದಂದು ಪಾಕ್‌ನ ಸಿಂಧ್‌ ಪ್ರಾಂತ್ಯದ ಗೋಟಿR ಜಿಲ್ಲೆಯ ಮನೆಯೊಂದಕ್ಕೆ ನುಗ್ಗಿದ ಪ್ರಭಾವಿ ವ್ಯಕ್ತಿಗಳಿದ್ದ ಗುಂಪೊಂದು ರವೀನಾ (13), ರೀನಾ (15) ಎಂಬಿಬ್ಬರು ಬಾಲಕಿಯರನ್ನು ಅಪಹರಿಸಿದ್ದರು. ಇದಾಗಿ, ಕೆಲ ಹೊತ್ತಿನಲ್ಲೇ ಆ ಬಾಲಕಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ, ಮದುವೆ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಇದು ಪಾಕಿಸ್ತಾನದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next