Advertisement

ಧರ್ಮದ ಬಗ್ಗೆ ಟ್ವೀಟ್‌ ಮಾಡಿ ಟೀಕೆಗೆ ಗುರಿಯಾದ ಸೋನು ನಿಗಮ್‌

03:45 AM Apr 18, 2017 | Harsha Rao |

ಮುಂಬೈ: ಭಿಕ್ಷುಕನಂತೆ ಬಟ್ಟೆ ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಹಾರ್ಮೋನಿಯಂ ಹಿಡಿದು ಹಾಡುತ್ತಾ ಜನರಿಂದ ಭೇಷ್‌ ಎನಿಸಿಕೊಳ್ಳುತ್ತಿದ್ದ, ಬಹುತೇಕ ಬಾರಿ ಒಳ್ಳೆ ಕಾರಣಗಳಿಗಾಗೇ ಸುದ್ದಿಯಲ್ಲಿರುತ್ತಿದ್ದ ಖ್ಯಾತ ಗಾಯಕ ಸೋನು ನಿಗಮ್‌, ಈಗ ಧಾರ್ಮಿಕ ಆಚರಣೆ ವಿರೋಧಿಸಿ ಸರಣಿ ಟ್ವೀಟ್‌ ಮಾಡುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಧಾರ್ಮಿಕ ಕೇಂದ್ರಗಳಲ್ಲಿ ಬೆಳಗಿನ ಹೊತ್ತು ಪ್ರಾರ್ಥನೆ ಮಾಡುವಾಗ ಧ್ವನಿವರ್ಧಕ ಬಳಸುವುದನ್ನು ಖಂಡಿಸಿ ಸೋನು ಒಂದರ ಹಿಂದೆ ಒಂದು ಮೂರು ಟ್ವೀಟ್‌ ಮಾಡಿದ್ದಾರೆ. “ದೇವರು ಎಲ್ಲರಿಗೂ ಒಳಿತು ಮಾಡಲಿ. ನಾನು ಮುಸ್ಲಿಂ ಅಲ್ಲ. ಆದರೆ ದಿನಾ ಬೆಳಗ್ಗೆ ಅಝಾನ್‌(ಮುಸ್ಲಿಂ ಪ್ರಾರ್ಥನೆ) ನನ್ನನ್ನು ಎಚ್ಚರಿಸುತ್ತದೆ. ಇಂಥ ಒತ್ತಾಯದ ಧಾರ್ಮಿಕತೆ ನಿಲ್ಲುವುದೆಂದು? ‘ ಎಂಬುದು ಸೋನು ನಿಗಮ್‌ ಮಾಡಿದ ಮೊದಲು ಟ್ವೀಟ್‌.

Advertisement

ಕೆಲವೇ ನಿಮಿಷಗಳಲ್ಲಿ ಮತ್ತೂಂದು ಟ್ವೀಟ್‌ ಮಾಡಿದ ಸೋನು, “ಅಂದ ಹಾಗೆ ಮೊಹಮ್ಮದ್‌ ಅವರು ಇಸ್ಲಾಂ ಸ್ಥಾಪಿಸಿದಾಗ ವಿದ್ಯುತ್‌ ಸೌಲಭ್ಯ ಇರಲಿಲ್ಲ. ಆದರೆ ಎಡಿಸನ್‌ನ ನಂತರ ನನಗೇಕೆ ಈ ಸದ್ದು ಕೇಳುವ ಗತಿ ಬಂದಿದೆ?’ ಎಂದಿದ್ದಾರೆ. ಮತ್ತೂ ಮುಂದುವರಿದ ಸೋನು, “ವಿದ್ಯುತ್‌ ಬಳಸಿಕೊಂಡು, ಧರ್ಮವನ್ನು ಪ್ರತಿಪಾದಿಸದ ಜನರ ನಿದ್ದೆ ಕೆಡಿಸುವ ಯಾವುದೇ ದೇವಾಲಯ ಅಥವಾ ಗುರುದ್ವಾರದ ಮೇಲೆ ನನಗೆ ನಂಬಿಕೆಯಿಲ್ಲ. ಮತ್ತೇಕೆ..? ಪ್ರಾಮಾಣಿಕ? ಸತ್ಯ?” ಎಂದು ಮೂರನೇ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ನೆಚ್ಚಿನ ಗಾಯಕನ ಈ ಟ್ವೀಟ್‌ಗಳಿಂದ ಮನನೊಂದ ಕೆಲ ಅಭಿಮಾನಿಗಳು “ಸೋನು ನಿಗಮ್‌ ಪಾಕಿಸ್ತಾನಕ್ಕೆ ಹೋಗಲಿ. ಅಲ್ಲಿ ಕರೆಂಟ್‌ ಇಲ್ಲ ಹೀಗಾಗಿ ಬೆಳಗ್ಗೆ ಧ್ವನಿವರ್ಧಕಗಳು ಅವರ ನಿದ್ದೆ ಕೆಡಿಸಲಾರವು,’ ಎಂದು ರೀಟ್ವೀಟ್‌ ಮಾಡಿದ್ದಾರೆ. ಸೋನು ಅವರ ಈ ಅಭಿಪ್ರಾಯವನ್ನು ಕೆಲ ಬಾಲಿವುಡ್‌ ಗಾಯಕರು ಸ್ವಾಗತಿಸಿದ್ದಾರೆ. ಶಾನ್‌, ರಾಹುಲ್‌ ರಾಮ್‌, ಕೈಲಾಶ್‌ ಖೇರ್‌ ಮತ್ತಿತರರು ಸೋನು ಬೆಂಬಲಕ್ಕೆ ನಿಂತರೆ, ಬಾಬಾ ಸೆಹಗಲ್‌, ಸೋನಾ ಮಹಾಪಾತ್ರ ಮತ್ತಿತರರು ಸೋನು ನಿಗಮ್‌ ಹೀಗೆ ಹೇಳಬಾರದಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next