Advertisement

ಮನೆ ಸೌಂದರ್ಯ ಹೆಚ್ಚಿಸುವ ಟಿವಿ ಸ್ಟ್ಯಾಂಡ್ 

02:01 PM Aug 04, 2018 | |

ಹೊಸ ಮನೆ ಖರೀದಿಯಾಯಿತು ಕೇವಲ ಮನೆಯಾದರೆ ಅಂದವೆಲ್ಲಿರುತ್ತದೆ. ಚಿಕ್ಕದಾದರೂ ಚೊಕ್ಕವಾಗಿರಬೇಕಲ್ಲವೆ? ಹಾಗಾಗಬೇಕಾದರೆ ಆ ಮನೆಯ ಅಂದ ಹೆಚ್ಚಿಸುವ ವಿವಿಧ ಬಗೆಯ ವಸ್ತೂಗಳು ಮನೆಯಲ್ಲಿರಬೇಕು. ಎಲ್ಲ ಇದ್ದ ಮೇಲೆ ಟಿವಿ ಇಲ್ಲದಿದ್ದರೆ ಹೇಗೆ? ಅದಕ್ಕಾಗಿ ಎಲ್ಲ ಆವಶ್ಯಕತೆಗಳ ಜತೆಗೆ ದೊಡ್ಡ ಗಾತ್ರದ ಅಥವಾ ಪುಟ್ಟ ಗಾತ್ರದ ಟಿವಿಯನ್ನೂ ಖರೀದಿಸಿ ತಂದಾಯಿತು.

Advertisement

ಟಿವಿ ತಂದು ಹಾಗೇ ಇಡುವ ಹಾಗಿಲ್ಲ. ಅದರ ಸೌಂದರ್ಯವನ್ನು ಹೆಚ್ಚಿಸಲು ಸಣ್ಣದಾದ ಅಥವಾ ದೊಡ್ಡದಾದ ಸ್ಟ್ಯಾಂಡ್ ಅಂತೂ ಆಗಲೇಬೇಕು. ಯಾವ ರೀತಿಯ ಸ್ಟಾಂಡ್‌ ಖರೀದಿ ಮಾಡುವುದು ಎಂಬ ಚಿಂತೆ ಶುರುವಾಗುವುದೂ ಆಗಲೇ.

ಹಾಗೆ ನೋಡಿದರೆ ಮನೆಯ ಲೀವಿಂಗ್‌ ರೂಮ್‌ನ ಅಂದ ಹೆಚ್ಚಿಸುವುದೇ ಟಿವಿ ಸ್ಟಾಂಡ್‌ಗಳು. ಚಿಕ್ಕದಾದ ಸ್ಟಾಂಡ್‌ನಿಂದ ಹಿಡಿದು ಬೆಲೆಬಾಳುವಂತಹ ಅನೇಕ ಟಿವಿ ಸ್ಟಾಂಡ್‌ಗಳು ಮಾರುಕಟ್ಟೆಯಲ್ಲಿವೆ. ಮನೆಯ ಗಾತ್ರಕ್ಕೆ ಅನುಗುಣವಾಗಿ ಇದನ್ನು ಖರೀದಿಸಿ ತಂದಿಟ್ಟರೆ ಮನೆಯ ಸೌಂದರ್ಯ ದುಪ್ಪಟ್ಟಾಗುವುದು.

ಟಿವಿಗಾಗಿಯೇ ಇರುವ ಸ್ಟ್ಯಾಂಡ್ 
ಟಿವಿಯನ್ನು ಮಾತ್ರ ಇಡಲೆಂದು ಸ್ಟಾಂಡ್‌ಗಳು ಇರುತ್ತವೆ. ಇದರಲ್ಲಿ ಟಿವಿ ಸ್ಟೆಬಿಲೈಸರ್‌, ರಿಮೋಟ್‌ ಮತ್ತು ಟಿವಿಗೆ ಮಾತ್ರ ಸ್ಥಳಾವಕಾಶ. ಬಾಡಿಗೆ ಮನೆಗಳಿಗೆ ಮತ್ತು ಚಿಕ್ಕದಾದ ಮನೆಗಳಿಗೆ ಇಂತಹ ಸ್ಟ್ಯಾಂಡ್ಗಳೇ ಬೆಸ್ಟ್‌. ಏಕೆಂದರೆ ಮನೆ ಬದಲಾಯಿಸುವಾಗ ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯುವುದೂ ಸುಲಭ. ಸಿಂಗಲ್‌ ವಿಂಡೋ ಜತೆಗೆ ಎರಡು ಮತ್ತು ಮೂರು ಕಿಟಕಿಗಳಿರುವ ಸ್ಟಾಂಡ್‌ಗಳೂ ಬರುತ್ತವೆ. ಇದರಲ್ಲಿ ಟಿವಿಯೊಂದಿಗೆ ಇತರ ವಸ್ತುಗಳನ್ನು, ಪುಸ್ತಕಗಳನ್ನು ಇಡಲು ಸಹಕಾರಿಯಾಗುತ್ತದೆ.

ಟೇಬಲ್‌ ಸ್ಟ್ಯಾಂಡ್ ಆಕರ್ಷಣೆ
ಟಿವಿ ಸ್ಟ್ಯಾಂಡ್  ಎಂದರೆ ಇಂತಹುದೇ ಆಗಿರಬೇಕು ಎಂಬುದಿಲ್ಲ. ಅನುಕೂಲಕ್ಕೆ ತಕ್ಕಂತೆ ಈ ಸ್ಟಾಂಡ್‌ ಗಳನ್ನು ಖರೀದಿಸಬಹುದು. ಟೇಬಲ್‌ ಸ್ಟಾಂಡ್‌ನ‌ ಮೇಲ್ಭಾಗದಲ್ಲಿರುವ ಸಮತಟ್ಟಾದ ಜಾಗದಲ್ಲಿ ಟಿವಿ ಇಟ್ಟರೆ, ಕೆಳ ಭಾಗದಲ್ಲಿರುವ ಕಿಟಕಿಗಳ ಮುಖಾಂತರ ಬಟ್ಟೆ ಬರೆ, ಪುಸ್ತಕ ಅಥವಾ ಇತರ ವಸ್ತುಗಳನ್ನು ಇಡಲು ಸಹಾಯಕವಾಗುತ್ತದೆ. ಮನೆಯಲ್ಲಿರುವ ಸ್ಥಳಾವಕಾಶದ ಕೊರತೆಯನ್ನೂ ಇದು ನೀಗಿಸುತ್ತದೆ.

Advertisement

ಮೊಬೈಲ್‌ ಟಿವಿ ಸ್ಟ್ಯಾಂಡ್ 
ಕೆಮರಾ ಸ್ಟಿಕ್‌ನಂತಿರುವ ಈ ಸ್ಟಾಂಡ್‌ನ‌ಲ್ಲಿ ಎಲ್‌ಸಿಡಿ ಟಿವಿಯನ್ನು ಜೋಡಿಸುವುದು ಸುಲಭ. ಕೇವಲ ಉದ್ದದ ಕೋಲಿನಂತಿರುವುದರಿಂದ ಜಾಗವೂ ಉಳಿತಾಯವಾಗುತ್ತದಲ್ಲದೆ ಇದನ್ನು ಅಗತ್ಯಕ್ಕೆ ತಕ್ಕಂತೆ ಹಿರಿದು- ಕಿರಿದುಗೊಳಿಸಲು ಸಾಧ್ಯವಾಗುವುದರಿಂದ ಮತ್ತು ಬೇಡವಾದಾಗ ಸ್ಟಿಕ್‌ ಮಡಚಿಟ್ಟುಕೊಳ್ಳಲು ಆಗುವುದರಿಂದ ಇದೊಂದು ಬೆಸ್ಟ್‌ ಸ್ಟಾಂಡ್‌ ಆಗಿ ಪರಿಗಣಿಸಲ್ಪಡುತ್ತದೆ.

ಕಪಾಟಿನಲ್ಲಿ ಸ್ಟ್ಯಾಂಡ್ 
ಟಿವಿಯ ನೆಪದಲ್ಲಿ ಮನೆಯಲ್ಲಿನ ಹಲವು ವಸ್ತುಗಳನ್ನು ಇಡಲು ಈ ಸ್ಟ್ಯಾಂಡ್ ನ್ನು ಬಳಸಬಹುದು. ಇದು ಉದ್ದನೆಯ ಸ್ಟ್ಯಾಂಡ್ ಆಗಿದ್ದು, ಹತ್ತಾರು ಕಪಾಟುಗಳನ್ನು ಹೊಂದಿರುತ್ತದೆ. ಆ ಕಪಾಟಿನಲ್ಲಿಯೂ ಸಣ್ಣ ಮತ್ತು ದೊಡ್ಡ ಗಾತ್ರದ್ದಿರುವುದರಿಂದ ಮನೆಯ ಬಹುತೇಕ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸದೆ, ಒಪ್ಪವಾಗಿ ಇದರಲ್ಲಿ ಜೋಡಿಸಿಡಬಹುದು. ಈ ಕಪಾಟಿನ ಎರಡೂ ತುದಿಯಲ್ಲಿ ಆಲಂಕಾರಿಕ ಗಿಡ ಅಥವಾ ಹೂವನ್ನಿಟ್ಟರೆ ಅದರ ಅಂದ ಇನ್ನಷ್ಟು ವೃದ್ಧಿಸಿ ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ಮರದ ಸ್ಟ್ಯಾಂಡ್  ಉತ್ತಮ
ಫೈಬರ್‌ ಮತ್ತು ಮರದ ಸ್ಟಾಂಡ್‌ ಒಡೆದು ಹೋಗುವ ಸಾಧ್ಯತೆಗಳು ತೀರಾ ಕಡಿಮೆ ಇರುವುದರಿಂದ ಆಯ್ಕೆಯ ವಿಷಯದಲ್ಲಿ ಇವೇ ಉತ್ತಮ. ಮರದ ಸ್ಟಾಂಡ್‌ನ‌ಲ್ಲಿ ಸಾಂಪ್ರದಾಯಿಕ ಲುಕ್‌ ಕೊಡುವುದರಿಂದ ನೋಡಲು ಆಕರ್ಷಕವಾಗಿ ಕಾಣುತ್ತದೆ. ಫರ್ನೀಚರ್‌ ಶೋರೂಂಗಳಲ್ಲಿ ಮರದ ಟಿವಿ ಸ್ಟಾಂಡ್‌ ಗಳು ರೆಡಿಮೇಡ್‌ ಆಗಿ ಸಿಗುತ್ತದೆ. ಬೇಕಾದ ವಿನ್ಯಾಸದಲ್ಲಿ ಸ್ಟಾಂಡ್‌ಗಳ ಆಯ್ಕೆಗೆ ಅವಕಾಶವಿರುತ್ತದೆ. ಅದು ಬೇಡವೆಂದರೆ ಬೇಕಾದ ವಿನ್ಯಾಸ, ಗಾತ್ರಕ್ಕೆ ಅನುಸಾರವಾಗಿ ತಯಾರಿಸಿಕೊಡುವ ವ್ಯವಸ್ಥೆಯೂ ಇರುತ್ತದೆ. 

ಆಯ್ಕೆಯಲ್ಲಿ ಎಚ್ಚರವಿರಲಿ
ಟಿವಿ ಸ್ಟ್ಯಾಂಡ್  ಖರೀದಿಗೆ ಮುನ್ನ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು. ಗಾಜು, ಮರ, ಫೈಬರ್‌ ಹೀಗೆ ನಾನಾ ರೀತಿಯ ಸ್ಟಾಂಡ್‌ಗಳು ಮಾರುಕಟ್ಟೆಯಲ್ಲಿವೆ. ಗ್ಲಾಸ್‌ನಿಂದ ಮಾಡಿದ ಟಿವಿ ಸ್ಟ್ಯಾಂಡ್ ಗಳು ಮನೆಯ ಸೌಂದರ್ಯ ವರ್ಧನೆಗೆ ಸಹಕಾರಿಯಾದರೂ, ಅದನ್ನು ಬಳಸುವಾಗ ಅಷ್ಟೇ ಎಚ್ಚರಿಕೆ ಅಗತ್ಯ. ಯಾವುದಾದರೂ ಘನ ವಸ್ತು ಆ ಸ್ಟ್ಯಾಂಡ್ ಮೇಲೆ ಉರುಳಿ ಬಿದ್ದರೆ, ಸ್ಟ್ಯಾಂಡ್ ಒಡೆದು ಹೋಗುತ್ತದೆ. ಹೀಗಾಗಿ ಆದಷ್ಟು ಎಚ್ಚರಿಕೆಯಿಂದ ಮನೆಯಲ್ಲಿರಿಸಿಕೊಳ್ಳಬೇಕು. ಮರ ಮತ್ತು ಫೈಬರ್‌ ಸ್ಟಾಂಡ್‌ಗಳು ಹೆಚ್ಚು ಕಾಲ ಬಾಳಿಕೆ ಬರುವುದರಿಂದ ಯಾವ ವಿನ್ಯಾಸದಲ್ಲಿರಬೇಕು, ಬಜೆಟ್‌ ಗನುಗುಣವಾಗಿ ಹೇಗಿರಬೇಕು ಎಂಬುದನ್ನು ಮೊದಲೇ ಯೋಚಿಸಿ ತಂದರೆ ಮತ್ತೆ ಬದಲಾಯಿಸುವ ಚಿಂತೆ ಇರುವುದಿಲ್ಲ. 

ಲಕ್ಷಾಂತರ ರೂ.ಗಳ ಸ್ಟ್ಯಾಂಡ್ 
ಸುಮಾರು ಐದು ಸಾವಿರದಿಂದ ಹಿಡಿದು ಲಕ್ಷಾಂತರ ರೂ. ಬೆಲೆ ಬಾಳುವ ಟಿವಿ ಸ್ಟಾಂಡ್‌ಗಳೂ ಮಾರುಕಟ್ಟೆಯಲ್ಲಿವೆ. ಸ್ಟಾಂಡ್‌ನ‌ ಗಾತ್ರ, ವಿನ್ಯಾಸ, ಬಾಳಿಕೆಯ ಮೇಲೆ ದರಗಳು ಅವಲಂಬಿತವಾಗಿರುತ್ತವೆ. ಮನೆಗೆ ಹೊಸ ನೋಟ ನೀಡುವ ಸ್ಟಾಂಡ್‌ಗಳ ಆಯ್ಕೆಯಲ್ಲಿಯೂ ಜಾಗರೂಕರಾಗಿದ್ದರೆ ಮನೆ- ಮನಸ್ಸು ಖುಷಿಯಾಗಿರುತ್ತದೆ. ಅಲ್ಲದೇ ಟಿವಿ ಸ್ಟಾಂಡ್‌ನ‌ ಕುರಿತು ವಿಶೇಷ ಕಲ್ಪನೆಗಳಿದ್ದರೆ ಅದೇ ಮಾದರಿಯನ್ನಿಟ್ಟು ಕೊಂಡು ರಚಿಸುವವರೂ ಇದ್ದಾರೆ. ಇಲ್ಲಿ ಮರದಿಂದ ನಿಮಗೆ ಬೇಕಾದ ಆಕೃತಿಯ ಟಿವಿ ಸ್ಟಾಂಡ್‌ಗಳನ್ನು ರಚಿಸಬಹುದು. ಕೊಂಚ ದುಬಾರಿಯಾದರೂ ಹೆಚ್ಚು ಕಾಲ ಬಾಳಿಕೆ ಬರುವುದರಲ್ಲಿ ಸಂದೇಹವಿಲ್ಲ.

 ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next