ಹಿಂಗೋಲಿ: “ಬನ್ನಿ. ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಿ. ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಬಹುಮಾನ ಗೆಲ್ಲಿ’ ಇದು ಈಗ ಜನರನ್ನು ಆಕರ್ಷಿಸಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ.
ದೇಶದಲ್ಲಿ ಒಮಿಕ್ರಾನ್ ರೂಪಾಂತರ ತಡೆಗಟ್ಟುವ ನಿಟ್ಟಿನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳಲು ಭಿನ್ನ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಪೂರಕವಾಗಿಯೇ ಮಹಾರಾಷ್ಟ್ರದ ಹಿಂಗೋಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಆಕರ್ಷಕ ಯೋಜನೆ ಜನರ ಮುಂದಿಟ್ಟಿದ್ದಾರೆ. ಲಸಿಕೆ ಹಾಕಿಸಿಕೊಂಡವರಿಗೆ ಫ್ರಿಡ್ಜ್, ಎಲ್‌ಇಡಿ ಟಿವಿ, ವಾಷಿಂಗ್ ಮಷಿನ್ ನೀಡುವ ಆಮಿಷ ಒಡ್ಡಿದ್ದಾರೆ.
ಇಂಥದ್ದೇ ಕ್ರಮವನ್ನು ಮಹಾರಾಷ್ಟ್ರದ ಚಂದ್ರಾಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಕೆಲ ಸಮಯದ ಹಿಂದೆ ಜಾರಿಗೆ ತರಲಾಗಿತ್ತು.
ಹೊಸ ಯೋಜನೆ ಬಗ್ಗೆ “ಪಿಟಿಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಹಿಂಗೋಲಿ ಮಹಾನಗರ ಪಾಲಿಕೆಯ ಕೊರೊನಾ ಲಸಿಕೆ ವಿಭಾಗದ ಅಧಿಕಾರಿ ಪಂಡಿತ್ ಮಷ್ಕೆ ನಗರ ವ್ಯಾಪ್ತಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ನೀಡುವ ಬಗ್ಗೆ ಘೋಷಣೆ ಮಾಡಿದ್ದೇವೆ. ಅದಕ್ಕಾಗಿ ಡಿ.27ರಂದು ಲಕ್ಕಿ ಡ್ರಾವನ್ನೂ ಆಯೋಜಿಸಿರುವುದಾಗಿ ಹೇಳಿದ್ದಾರೆ. ಡಿ.2ರಿಂದ ಡಿ.24ರ ನಡುವೆ ಲಸಿಕೆ ಹಾಕಿಸಿಕೊಂಡವರಿಗೆ ಈ ಬಹುಮಾನ ನೀಡಲಾಗುತ್ತದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿ ಡಾ. ಅಜಯ ಕುರ್ವಾಡೆ ಹೇಳಿದ್ದಾರೆ.
ಇದನ್ನೂ ಓದಿ:ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸ್ಪಂದನೆ : ಸಿಎಂ
ಎಲ್‌ಇಡಿ ಟಿವಿಯನ್ನು ಮೊದಲ ಬಹುಮಾನವಾಗಿ ನೀಡಲಾಗುತ್ತದೆ. ನಂತರದ ಬಹುಮಾನವಾಗಿ ಫ್ರಿಡ್ಜ್, ವಾಷಿಂಗ್ ಮಷಿನ್ ಇರಲಿದೆ ಎಂದು ಹೇಳಿದ್ದಾರೆ. ಮೊದಲ ಡೋಸ್ ಹಾಕಿಸಿಕೊಳ್ಳುವವರಿಗೂ ಲಕ್ಕಿ ಡ್ರಾದಲ್ಲಿ ಭಾಗವಹಿಸಲು ಅವಕಾಶ ಇದೆ ಎಂದಿದ್ದಾರೆ. ನಗರದಲ್ಲಿ ಶೇ.73 ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದರೆ, ಶೇ.56 ಮಂದಿ ಎರಡೂ ಡೋಸ್ ಪಡೆದುಕೊಂಡಿದ್ದಾರೆ.