Advertisement

ಆಶಾವಾದದಲ್ಲೇ ಸ್ವಾವಲಂಬಿ ಬದುಕು ಮತ್ತೆ ಕಟ್ಟಿಕೊಳ್ಳಬೇಕಷ್ಟೇ !

05:56 PM Oct 04, 2020 | Suhan S |

ಮುಂಬಯಿ, ಅ. 3: ಕೋವಿಡ್‌ – 19 ಸಾಂಕ್ರಾಮಿಕ ರೋಗದಿಂದಾಗಿ ಚಾಲ್ತಿಯಲ್ಲಿರುವ ಬಿಕ್ಕಟ್ಟಿನ ಮಧ್ಯೆ ಮಕ್ಕಳಿಗೆ ಮನೆಯಲ್ಲಿ ಶಿಕ್ಷಣ ನೀಡುವ ತುಳು – ಕನ್ನಡಿಗ ಮಹಿಳೆಯರೂ ಕಠಿನ ಸಮಯವನ್ನು ಎದುರಿಸುತ್ತಿದ್ದಾರೆ. ಅದರ ಮಧ್ಯೆಯೂ ಬದುಕಿನ ನವ ಘಟ್ಟಕ್ಕೆ ತಲುಪಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.

Advertisement

ಮುಂಬಯಿಗರು ಆಡುಭಾಷೆಯಲ್ಲಿ ಟ್ಯೂಶನ್‌ ಕ್ಲಾಸ್‌ ಎಂದು ಕರೆಯುವ, ಖಾಸಗಿ ಕೋಚಿಂಗ್‌ ಕ್ಲಾಸ್‌ ಮಾದರಿಯಲ್ಲಿ ಮನೆಯಲ್ಲಿ ಮಕ್ಕಳಿಗೆ ನೂರಾರು ತುಳು – ಕನ್ನಡಿಗ ಮಹಿಳೆಯರು ಪಾಠಗಳನ್ನು ಕಲಿಸುತ್ತಿದ್ದರು. ಅದು ಅವರಿಗೆ ಕಸುಬಾಗಿತ್ತು. ಮುಂಬಯಿ ಮತ್ತು ಉಪನಗರಗಳಲ್ಲಿ ಮನೆಯಲ್ಲಿ ಟ್ಯೂಶನ್‌ ತರಗತಿಗಳನ್ನು ನಡೆಸುವ ಲಕ್ಷಾಂತರ ಮಂದಿ ಇದ್ದಾರೆ. ಅವರಲ್ಲಿ ತುಳು-ಕನ್ನಡಿಗ ಶಿಕ್ಷಕರದ್ದು ಮೊದಲ ಹೆಸರು. ದಕ್ಷಿಣ ಭಾರತೀಯರು ಅದರಲ್ಲೂ ಕನ್ನಡಿಗರು ಶಿಕ್ಷಣದಲ್ಲಿ ಅತ್ಯುತ್ತಮರೆಂಬ ಅಭಿಪ್ರಾಯ ಸ್ಥಳೀಯರಲ್ಲಿದೆ. ಹಾಗಾಗಿ ಎಲ್ಲ ಭಾಷೆಗಳ ಜನರು ತಮ್ಮ ಮಕ್ಕಳನ್ನು ತುಳು-ಕನ್ನಡಿಗರ ಟ್ಯೂಶನ್‌ ತರಗತಿಗಳಿಗೆ ಕಳುಹಿಸಲು ಆದ್ಯತೆ ನೀಡುತ್ತಾರೆ.

ಸ್ವಾವಲಂಬಿ ಬದುಕು : ಪೂರೈಸಲು ಟ್ಯೂಶನ್‌ ನೀಡುತ್ತಾರೆ. ಟ್ಯೂಶನ್‌ ಕ್ಲಾಸ್‌ ಮುಖ್ಯವಾಗಿ ಮಹಿಳೆಯರನ್ನು ಸ್ವಾವಲಂಬಿಯಾಗಿ ಮಾಡಿತ್ತು. ಈ ಟ್ಯೂಶನ್‌ ತರಗತಿಗಳಿಂದ ಹೆತ್ತವರಿಗೂ ಪ್ರಯೋಜನವಾಗುತ್ತಿತ್ತು. ಶಾಲೆಯಿಂದ ಮನೆಗೆ ಬಂದ ಅನಂತರ ಟಿವಿ, ಮೊಬೈಲ್‌ಗ‌ಳಲ್ಲಿ ನಿರತರಾಗಿ ಶಾಲೆಯಲ್ಲಿ ಕಲಿತದ್ದನ್ನು ಮರೆಯದಂತೆ ಈ ಟ್ಯೂಶನ್‌ ತರಗತಿಗಳು ನಿರ್ವಹಿಸುತ್ತಿದ್ದವು.

ಆರ್ಥಿಕ ಬಿಕ್ಕಟ್ಟು  :  ಟ್ಯೂಶನ್‌ ತರಗತಿಯಲ್ಲಿ ಇತರ ಮಕ್ಕಳ ಜತೆಗೆ ಸೇರಿ ಕಲಿಯುವಾಗ ಮಕ್ಕಳಲ್ಲಿ ಶಿಕ್ಷಣದ ಆಸಕ್ತಿಯೂ ಹೆಚ್ಚಾಗುತ್ತದೆ. ಆದರೆ, ಮಾ. 25ರಿಂದ ಲಾಕ್‌ ಡೌನ್‌ ಜಾರಿಗೆ ಬಂದಾದಾಗಿನಿಂದ ಹೆತ್ತವರು ತಮ್ಮ ಮಕ್ಕಳನ್ನು ಟ್ಯೂಶನ್‌ ತರಗತಿಗಳಿಗೆ ಕಳುಹಿಸುತ್ತಿಲ್ಲ. ಈಗ ಮಕ್ಕಳ ಶಾಲೆಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಶಾಲೆಗಳೇ ತೆರೆಯದಿರುವಾಗ ಹೆತ್ತವರು ತಮ್ಮ ಮಕ್ಕಳನ್ನು ಟ್ಯೂಶನ್‌ ಕ್ಲಾಸ್‌ಗಳಿಗೂ ಕಳಿಸುತ್ತಿಲ್ಲ. ಸೋಂಕು ಹರಡಬಹುದೆಂಬ ಭಯವೂ ಇರಬಹುದು. ಇವೆಲ್ಲದರ ಪರಿಣಾಮ ಅನೇಕ ಟ್ಯೂಶನ್‌ ಶಿಕ್ಷಕರು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.

ಆನ್‌ಲೈನ್‌ ಟ್ಯೂಶನ್‌ :  ಈಗಾಗಲೇ ಹೊಂದಿಕೊಂಡ ಬದುಕಿಗೆ ಕೋವಿಡ್ ಹೊಡೆತ ಕೊಟ್ಟ ಕಾರಣ, ಕೆಲವರು ಹೊಸಬದುಕಿನ ಕ್ರಮವನ್ನು ಶೋಧಿಸುತ್ತಿದ್ದಾರೆ.ಈಗಾಗಲೇ ಹಲವರು ಆನ್‌ಲೈನ್‌ನಲ್ಲಿ ಟ್ಯೂಶನ್‌ ನೀಡಲು ಪ್ರಾರಂಭಿಸಿದ್ದಾರೆ. ಆದರೆ ಅದಕ್ಕೆ ಹಿಂದೆ ಸಿಗುತ್ತಿದ್ದಷ್ಟು ಪ್ರತಿಕ್ರಿಯೆ ಈಗ ಸಿಗುತ್ತಿಲ್ಲ. ಹಾಗಾಗಿ ಇನ್ನು ಕೆಲವರು ಬೇರೆ ವೃತ್ತಿಯನ್ನು ಹುಡುಕುತ್ತಿದ್ದಾರೆ. ಇದರೊಂದಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಲ್ಲಿನ ಕೆಲವು ನಿಬಂಧನೆಗಳು ಟ್ಯೂಶನ್‌ ಕಾಯಕಕ್ಕೆ ಸಂಕಷ್ಟ ತಂದೊಡ್ಡುವ ಭೀತಿ ಎದುರಾಗಿದೆ.

Advertisement

ಉದ್ಯೋಗ ಇಲ್ಲದಂತಾಗಿದೆ : 20 ವರ್ಷಗಳಿಂದ ಟ್ಯೂಶನ್‌ ನೀಡುತ್ತಿದ್ದೇನೆ. ಆದರೆ ಇಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಫೀಸ್‌ ಪಾವತಿಸಲು ಹಣವಿಲ್ಲದೆ ಹೆತ್ತವರು ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸುತ್ತಿಲ್ಲ. ಆನ್‌ ಲೈನ್‌ ಪರೀಕ್ಷೆಯಲ್ಲಿ ಮಕ್ಕಳು ಹೇಗೂ ಪಾಸ್‌ ಆಗುತ್ತಾರೆ ಎಂಬ ಭಾವನೆ ಅವರಲ್ಲಿದೆ. ನನ್ನಂತೆ ಮನೆಯಲ್ಲಿ ಟ್ಯೂಶನ್‌ ನೀಡುವವರಿಗೆ ಉದ್ಯೋಗ ಇಲ್ಲದಂತಾಗಿದೆ. -ಅಮಿತಾ ವೀರೇಂದ್ರ ಶೆಟ್ಟಿ , ಡೊಂಬಿವಿಲಿ

ಶೀಘ್ರ ಸಾಮಾನ್ಯ ಸ್ಥಿತಿಗೆ ಬರಲಿ : ಲಾಕ್ ಡೌನ್ ನಿಂದ ನ‌ಷ್ಟವಾಗಿದೆ. ಟ್ಯೂಶನ್‌ ಅನ್ನು ವೃತ್ತಿಯಾಗಿಸಿಕೊಂಡಿದ್ದ ನನಗೆ ಬೇರೆ ಉದ್ಯೋಗ ಅಸಾಧ್ಯವಾಗಿದೆ. ಆದಷ್ಟು ಬೇಗ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲಿ ಎಂಬ ಆಶಯದಲ್ಲಿದ್ದೇನೆ -ವಿಶಾಲಾ ಉಮೇಶ್‌ ಶೆಟ್ಟಿ, ಆಜ್ದೆಪಾಡಾ

ಕಲಿಕೆ ಪರಿಭಾಷೆ ಮರೆಯುವ ಭಯ :  ಆನ್‌ಲೈನ್‌ ತರಗತಿಯಿಂದಾಗಿ ಕಲಿಸುವ ಪರಿಭಾಷೆ ಮರೆಯುವ ಭಯವಿದೆ. ಆನ್‌ಲೈನ್‌ ಟ್ಯೂಶನ್‌ನಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಮನೆಯಲ್ಲಿ ಮಕ್ಕಳೊಂದಿಗೆ ನೀಡುವಂತಹ ಪಾಠವನ್ನು ಆನ್‌ಲೈನ್‌ ಮುಖಾಂತರ ನಡೆಸಲು ಸಾಧ್ಯವಾಗುತ್ತಿಲ್ಲ -ಹೇಮಾ ಸದಾನಂದ್‌ ಅಮೀನ್‌ ಘಾಟ್‌ಕೋಪರ್‌

ಬಂದ್‌ ಮಾಡಬೇಕಾದ ಸ್ಥಿತಿ :ಹೆಚ್ಚಿನ ಗೃಹಿಣಿಯರು ಮನೆಯ ಖರ್ಚು-ವೆಚ್ಚಸರಿದೂಗಿಸಲು ಮನೆಯಲ್ಲಿ ಟ್ಯೂಶನ್‌ ಹೇಳಿ ಕೊಡುತ್ತಿದ್ದರು. ಅದರಲ್ಲಿ ನಾನೂ ಒಬ್ಬಳು. ಲಾಕ್‌ ಡೌನ್‌ನಿಂದಾಗಿ ಟ್ಯೂಶನ್‌ ಬಂದ್‌ ಮಾಡುವ ಪ್ರಸಂಗ ಬಂದೊಗಿದೆ. ನನ್ನ ಸಮಯವನ್ನು ಸಾಹಿತ್ಯಕ್ಕಾಗಿ ಇಟ್ಟಿದ್ದೇನೆ. -ಅನಿತಾ ಎಸ್‌. ಶೆಟ್ಟಿ, ಪೊವಾಯಿ

ತಾಳ್ಮೆ ಇರಲಿ : ಆನ್‌ಲೈನ್‌ನಲ್ಲಿ ಶಿಕ್ಷಣದಿಂದ ಮನೆ ಟ್ಯೂಶನ್‌ ಸ್ಥಗಿತ ಗೊಂಡಿದೆ. ಮಕ್ಕಳಿಗೆ ಪಾಠ ಹೇಳುವುದರಲ್ಲೇ ಸಂತೃಪ್ತಿ ಕಂಡುಕೊಂಡಿದ್ದೆ. ಟ್ಯೂಶನ್‌ ಪ್ರಾರಂಭಗೊಳ್ಳಲು ಸಮಯ ಹಿಡಿಯಬಹುದು. ತಾಳ್ಮೆಯಿಂದ ಕಾಯಬೇಕಷ್ಟೆ. – ವಿಮಲಾ ರಾಘವ ಕುಂದರ್‌, ಕುಂದರ್‌ ಗ್ರೂಪ್‌ ಟ್ಯೂಷನ್ಸ್‌ ವಿಕ್ರೋಲಿ.

ಕೋವಿಡ್  ತೊಲಗಲಿ : ಸ್ವಾವಲಂಬಿಯಾಗ ಬೇಕೆಂಬ ದೃಷ್ಟಿಯಿಂದ ಟ್ಯೂಶನ್‌ ಕ್ಲಾಸನ್ನುಆರಂಭಿಸಿದೆ. ಆದರೆ ಈಗ ಕೊರೊನಾದಿಂದ ಆರ್ಥಿಕ ಪರಿಸ್ಥಿತಿಯ ಜತೆಗೆ ಮಕ್ಕಳೊಡನೆ ಒಡನಾಡುವ ಅವಕಾಶ ತಪ್ಪಿದೆ. ಆದಷ್ಟು ಬೇಗ ಈ ಕೋವಿಡ್ ತೊಲಗಿ ಮಕ್ಕಳ ಜತೆ ಬೆರೆಯುವ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ. -ಶಾಂತಿಲಕ್ಷೀ ಎಸ್‌. ಉಡುಪ, ಜೆರಿಮೆರಿ

Advertisement

Udayavani is now on Telegram. Click here to join our channel and stay updated with the latest news.

Next