Advertisement

ಸ್ತ್ರೀ ಕಥನ ಕೌಶಲಕ್ಕೆ ಬಹುಮಾದರಿಗಳು

01:45 AM Jan 25, 2021 | Team Udayavani |

ಮಾಳ (ಕಾರ್ಕಳ ): ಬರವಣಿಗೆ ಎಂಬುದು ಅನುಭವದ ಒಂದು ಜಗತ್ತು, ಮಹಿಳಾ ಸಾಹಿತ್ಯ ಎಂಬುದು ಆ ಅನುಭವದ ಜಗತ್ತನ್ನು ಮತ್ತೂಂದು ಮಗ್ಗುಲಿನತ್ತ ವಿಸ್ತರಿಸುವ ಪ್ರಯತ್ನ. ಅಜ್ಜಿ ಕತೆಗಳಿಂದ ತೊಡಗಿ ಆಧುನಿಕ ಮಹಿಳಾ ಸಾಹಿತ್ಯದವರೆಗೆ ಸ್ತ್ರೀ ಕಥನ ಕೌಶಲಕ್ಕೆ ಬಹು ಮಾದರಿ ಗಳಿವೆ ಎಂದು ಲೇಖಕಿ ನೇಮಿಚಂದ್ರ ಹೇಳಿದರು.

Advertisement

“ತುಷಾರ’ ಮಾಸಪತ್ರಿಕೆಯು ಜ. 23 ಮತ್ತು 24ರಂದು ಕಾರ್ಕಳ- ಮಾಳ (ಮಣ್ಣಪಾಪು)ದಲ್ಲಿ ಯುವ ಲೇಖಕಿಯರಿಗಾಗಿ ಆಯೋಜಿಸಿದ “ಕೇಳುಸಖೀ’ ಶಿಬಿರದ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಸ್ವ-ಅನುಭವವನ್ನು ಕತೆಗಳನ್ನಾಗಿಸುವುದು ಒಂದು ಸರಳವಾದ ಕಲೆ. ಆದರೆ, ವ್ಯಕ್ತಿಚಿತ್ರ, ಪುರಾಣ, ಇತಿಹಾಸಗಳಂಥ ವಿಷಯಗಳನ್ನು ಇರಿಸಿಕೊಂಡು ಕಥನಗಳನ್ನು ಕಟ್ಟುವುದಕ್ಕೆ ಸಂಶೋಧನ ದೃಷ್ಟಿ ಬೇಕಾಗುತ್ತದೆ. ಸುತ್ತಮುತ್ತ, ಜಗತ್ತಿನ ಎಲ್ಲೆಡೆ ಕತೆ-ಕಥನಕ್ಕೆ ಬೇಕಾದ ವಸ್ತುಗಳಿರುತ್ತವೆ, ಅವುಗಳನ್ನು ಕಾಣುವ ಒಳಗಣ್ಣು ಬೇಕು ಎಂದು ಅವರು ಕಿವಿಮಾತು ಹೇಳಿದರು.

ಕೆಡುಕುಗಳ ನಡುವೆ ಒಳಿತು :

ಎಲ್ಲ ಕೆಡುಕುಗಳ ನಡುವೆಯೂ ಒಳಿತುಗಳು ಇರುತ್ತವೆ. ಅಂಥ ಒಳಿತನ್ನು ನೋಡುವ ದೃಷ್ಟಿ ಬೆಳೆಸಿ ಕೊಳ್ಳಬೇಕು. ಸಾಹಿತ್ಯ ಎಂಬುದು ಒಳಿತನ್ನು ಎಲ್ಲರಿಗೆ ಎತ್ತಿ ತೋರಿಸುವ ಪ್ರಯತ್ನ ಎಂದು ಮುಖ್ಯ ಅತಿಥಿ ಎ. ಪಿ. ಮಾಲತಿ ಹೇಳಿದರು.

ಬದುಕಿನೊಳಗಿನ ಕತೆ ಗಮನಿಸಲು ಕೌಶಲ ಅಗತ್ಯ :

Advertisement

ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ “ತರಂಗ’, “ತುಷಾರ’ದ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ತಮ್ಮ ಬದುಕಿನ ವಿವಿಧ ಅನುಭವಗಳನ್ನು ತೆರೆದಿಡುತ್ತ, ಎಲ್ಲರ ಬದುಕಿನೊಳಗೂ ಒಂದೊಂದು ಕತೆ ಇರುತ್ತದೆ. ಆ ಕತೆಯನ್ನು ಗಮನಿಸಲು ಮತ್ತು ನಿರೂಪಿಸಲು ಸಾಧ್ಯವಾಗುವ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದರು.

ಅಭಿವ್ಯಕ್ತಿಯ ಮನಃಸ್ಥಿತಿಗೆ ಕರೆ :

“ಕೇಳುಸಖೀ’ ಶಿಬಿರವನ್ನು ಉದ್ಘಾಟಿಸಿದ ಮಣಿಪಾಲ ವಿ.ವಿ.ಯ ಪ್ರಾಧ್ಯಾಪಕಿ ಡಾ| ನೀತಾ ಇನಾಂದಾರ್‌, “ಹೆಣ್ಣುಮಕ್ಕಳು ಮುಕ್ತವಾಗಿ ಅಭಿವ್ಯಕ್ತಿಸುವ ಮನಸ್ಥಿತಿಯನ್ನು  ಬೆಳೆಸಿಕೊಳ್ಳಬೇಕು, ಅದು ಕತೆ-ಕಥನ ಗಳ ಮೂಲಕ ಸಾಧ್ಯವಾಗುತ್ತಿದೆ’ ಎಂದರು.

ಬೆಳಗಾವಿ, ಧಾರವಾಡ, ಬೆಂಗಳೂರು, ಹಾಸನ, ಮೈಸೂರು, ಉತ್ತರ ಕನ್ನಡ, ಮಡಿಕೇರಿ, ಉಡುಪಿ, ಮಂಗಳೂರು ಮುಂತಾದ ಜಿಲ್ಲೆಗಳಿಂದ ಸುಮಾರು 30 ಮಂದಿ ಲೇಖಕಿಯರು ಈ ಶಿಬಿರದಲ್ಲಿ ಭಾಗವಹಿಸಿದ್ದರು.

ನೇಮಿಚಂದ್ರ ಮತ್ತು ಎ. ಪಿ. ಮಾಲತಿ ಅವರು ಶಿಬಿರದ ನಿರ್ದೇಶಕರಾಗಿದ್ದರು. ಹಿರಿಯ ಲೇಖಕಿ ರಜನಿ ನರಹಳ್ಳಿ ಉಪಸ್ಥಿತರಿದ್ದು  ತಮಗೆ ಬರವಣಿಗೆ ಆರಂಭಿಸಲು ಸ್ಫೂರ್ತಿ ಲಭಿಸಿದ ಸಂದರ್ಭವನ್ನು ಹಂಚಿಕೊಂಡರು.  ಸಾಹಿತ್ಯಾಂಜಲಿ ಕ್ಯಾಲಿಫೋರ್ನಿ ಯಾದ ಪರವಾಗಿ ಅಭಿನವ ನ. ರವಿ ಕುಮಾರ, ಪ್ರಾಚಿ ಫೌಂಡೇಶನ್‌ನ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.

ಉದ್ಯೋಗಪರ್ವ ಓದಿ: ರಾಜಕಾರಣಿಗಳಿಗೆ ಸಲಹೆ :

ರಾಜಕೀಯದಂಥ ವಿಚಾರಗಳು ಇಂದು ಇರುತ್ತವೆ, ನಾಳೆ ಅಪ್ರಸ್ತುತವಾಗುತ್ತವೆ. ಆದರೆ ಸಾಹಿತ್ಯ, ಸಂಸ್ಕೃತಿಗಳಿಗೆ ಸಂಬಂಧಿಸಿದ ವಿಚಾರಗಳಿಗೆ ಕಾಲಾತೀತವಾಗಿರುವ ಮೌಲ್ಯವಿರುತ್ತದೆ. ರಾಜಕೀಯ ರಹಿತವಾದ, ನಿಷ್ಪಕ್ಷಪಾತವಾದ ದೃಷ್ಟಿಕೋನವನ್ನು ಬೆಳೆಸಿಕೊಂಡರೆ ಉತ್ತಮ ಲೇಖಕರಾಗಲು ಸಾಧ್ಯವೆಂದು ಡಾ| ಸಂಧ್ಯಾ ಎಸ್‌. ಪೈಯವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಹಾಭಾರತ, ರಾಮಾಯಣಗಳಂಥ ಕತೆಗಳು ಇಂದಿಗೂ ಪ್ರಸ್ತುತ. ಅವುಗಳಲ್ಲಿ ಹೇಳಿದಷ್ಟೂ ಮುಗಿಯದ ಸಂಗತಿಗಳಿವೆ. ಮಹಾಭಾರತದ ಉದ್ಯೋಗಪರ್ವದ ರಾಜನೀತಿಯನ್ನು ಇಂದಿನ ರಾಜಕಾರಣಿಗಳು ಓದಿ ನೋಡಬೇಕು ಎಂದರು. ಲೇಖಕಿಯರನ್ನು ಬೆಳೆಸಿದ ಮಣಿಪಾಲದ ಪತ್ರಿಕೆಗಳು “ಉದಯವಾಣಿ’, “ತರಂಗ’, “ತುಷಾರ’ ಪತ್ರಿಕೆಗಳು ತಮ್ಮನ್ನು ಬರೆಯಲು ಪ್ರೋತ್ಸಾಹಿಸಿ ಬೆಳೆಸಿವೆ ಎಂದು ಲೇಖಕಿಯರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next