ಗುಬ್ಬಿ: ನನ್ನ ಪುತ್ರ ತೇಜು ಮೇಲೆ ನಡೆದ ಹಲ್ಲೆ ಹಾಗೂ ಇಡಗೂರು ಚೂರಿ ಇರಿತ ಪ್ರಕರಣ ಈ ಎರಡೂ ಘಟನೆಗಳಿಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕಾರಣ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಆರೋಪಿಸಿದರು.
ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ತಮ್ಮ ಸ್ವಗ್ರಾಮ ಅಂಕಳಕೊಪ್ಪ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತುರುವೇಕೆರೆ ವಿಧಾನಸಭಾ ಕ್ಷೇತ್ರವಾದ ನನ್ನ ಕ್ಷೇತ್ರವು ಅಭಿವೃದ್ಧಿಯ ಕಡೆ ಸಾಗುತ್ತಿರುವುದನ್ನು ಕಂಡ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹತಾಶೆಗೆ ಒಳಗಾಗಿ ತನ್ನ ಇರುವಿಕೆ ತೋರ್ಪಡಿಸಿಕೊಳ್ಳಲು ಸಿ.ಎಸ್.ಹೋಬಳಿಯಲ್ಲಿ ರಕ್ತಪಾತ ನಡೆಸಿ ಪ್ರಬುದ್ಧತೆ ನಡೆಸಲು ಮುಂದಾಗಿದ್ದು, ಅದಕ್ಕೆ ಪೂರಕವಾಗಿ ನೆಟ್ಟಿಕೆರೆ ಕ್ರಾಸ್ ಬಳಿ ಘಟನೆ ನಡೆದಿದೆ ಎಂದರು.
ಹೈಡ್ರಾಮಾ: ಬೆಂಗಳೂರಿನಿಂದ ಅಂಕಳಕೊಪ್ಪ ಗ್ರಾಮಕ್ಕೆ ಬರುತ್ತಿದ್ದ ತಮ್ಮ ಮಗ ತೇಜು ಕಾರು ಹಿಂಬಾಲಿಸಿ ಬಂದ ಕೃಷ್ಣಪ್ಪ ಬೆಂಬಲಿಗರ ಗುಂಪು ಹೆಬ್ಬೂರು ಬಳಿ ಜಗಳ ಆರಂಭಿಸಿ ನೆಟ್ಟೆಕೆರೆ ಕ್ರಾಸ್‌ವರೆಗೆ ಹಿಂಬಾಲಿಸಿ ಮಾರಕಾಸ್ತ್ರ ತೋರಿಸಿ ಬೆದರಿಕೆಯೊಡ್ಡಿ ದ್ದಾರೆ. ಈ ಘಟನೆಗೆ ಕೃಷ್ಣಪ್ಪ ಪೋಷಿಸಿರುವ ರೌಡಿಸಂ ಗುಂಪು ಕಾರಣ. ರಾಜಕಾರಣದಿಂದ ಹೊರತಾದ 21 ವರ್ಷದ ನನ್ನ ಪುತ್ರನ ಮೇಲೆ ತೋರಿದ ಪೌರುಷ ಹೇಡಿತನದ ಇನ್ನೊಂದು ಮುಖ ಎಂದು ಛೇಡಿಸಿದರು. ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ರಾಜಕಾರಣ ದ್ವೇಷಕ್ಕೆ ಅಮಾಯಕರ ಮೇಲೆ ಹಲ್ಲೆ ನಡೆಸುವುದು ಮಾಡುವ ಕೃಷ್ಣಪ್ಪ ಇಡಗೂರು ಪ್ರಕರಣಲ್ಲೂ ಹೈಡ್ರಾಮಾ ರಚಿಸಿದ್ದಾರೆಂದರು.
ವಿಳಂಬ ಬೇಡ:
ತನ್ನದೇ ಪಟಾಲಂನ ರೌಡಿ ಶೀಟರ್ ಆನಂದ್‌ನ ಬಳಸಿ ಚೂರಿ ಇರಿತ ನಾಟಕ ನಡೆಸಿದ್ದಾರೆ. ರೌಡಿ ಶೀಟರ್ ಆಗಿರುವ ಆತ ಬೆಂಗಳೂರಿನಲ್ಲಿ 8 ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಜತೆಗೆ ತಮ್ಮ ಮಗನ ಮೇಲೆ ಹಲ್ಲೆಗೆ ಮುಂದಾದ ಅವ್ವೆàರಹಳ್ಳಿ ಕೃಷ್ಣನ ಇತಿಹಾಸವೂ ಬೆಂಗಳೂರಿನ ಕ್ರಿಮಿನಲ್ ಹಿನ್ನೆಲೆಯುಳ್ಳದ್ದಾಗಿದೆ. ಇವರು ಕೃಷ್ಣಪ್ಪ ಅವರ ಬಂಟರು. ಎಂ.ಟಿ.ಕೃಷ್ಣಪ್ಪ ಅವರ ಮೇಲಿರುವ 150 ಕೇಸುಗಳು ಎಲ್ಲರಿಗೂ ತಿಳಿದಿದೆ ಎಂದರು. ತಮ್ಮ ಮಗನ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಮಾಡಿದ್ದಲ್ಲಿ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತೇನೆ ಎಂದು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.