Advertisement

ತುರುವೇಕೆರೆ: ಪ್ರಪಂಚಕ್ಕೆ ಭಾರತವೇ ದೇವರ ಮನೆ: ಸ್ವಾಮೀಜಿ

05:55 PM Apr 04, 2024 | Team Udayavani |

■ ಉದಯವಾಣಿ ಸಮಾಚಾರ
ತುರುವೇಕೆರೆ: ಪ್ರತಿಯೊಂದು ಮನೆಗೆ ದೇವರ ಮನೆ ಹೇಗೆ ಇರುತ್ತದೋ, ಹಾಗೆಯೇ ಪ್ರಪಂಚಕ್ಕೆ ಭಾರತವೇ ದೇವರ ಮನೆ ಇದ್ದ ಹಾಗೆ ಎಂದು ಶಿವಗಂಗಾ ಕ್ಷೇತ್ರದ ಮೇಲಣಗವಿ ಮಠದ ಡಾ.ಮಲಯಶಾಂತಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಶ್ರೀವೀರಶೈವ ಸಮಾಜ, ಬಸವೇಶ್ವರ ಯುವಕ ಸಂಘ, ಪಾರ್ವತಿ ಮಹಿಳಾ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪುಣ್ಯಭೂಮಿ: ಭಾರತ ಸಂಸ್ಕೃತಿಯ ನೆಲೆವೀಡು. ಇಲ್ಲಿ ದೈವೀ ಶಕ್ತಿ ಇದೆ. ಗುರು ಹಿರಿಯರು ಸೇರಿದಂತೆ ಎಲ್ಲರಿಗೂ ಗೌರವ ಕೊಡುವ ಪದ್ಧತಿ ಇದೆ. ಇದು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು ಸಾವಿರಾರು ತಪಸ್ವಿಗಳು ನೆಲೆಸಿದ ಪುಣ್ಯ ಭೂಮಿ. ಯೋಗಪುರುಷರು ಜನಿಸಿದ ಕ್ಷೇತ್ರ. ಹಾಗಾಗಿ ಈ ಪುಣ್ಯ ಭೂಮಿ ಪ್ರಪಂಚದ ದೇವಾಲಯವಾಗಿದೆ ಎಂದು ಶ್ರೀಗಳು ಹೇಳಿದರು.

ಮಾರ್ಗದರ್ಶಕರು: ಶ್ರೀರೇಣುಕಾಚಾರ್ಯರು ಎಲ್ಲಾ ಮುನಿವರ್ಯರಿಗೂ ಶಿಖರವಿದ್ದಂತೆ. ಎಲ್ಲ ಮಹಾಪುರುಷರಿಗೂ ಅವರು ಮಾರ್ಗದರ್ಶಕರಾಗಿದ್ದರು. ರೇಣುಕಾಚಾರ್ಯರು ಮಾನವತಾವಾದಿಯಾಗಿದ್ದರು. ಅವರು ಜಾತಿ ಬೇಧ ಮಾಡದೇ ಮನುಕುಲ ಶ್ರೇಯಸ್ಸಿಗೆ ದುಡಿದವರಾಗಿದ್ದರು. ರೇಣುಕಾಚಾರ್ಯರು ಸಾವಿರಾರು ವರ್ಷಗಳ ಹಿಂದೆ ಮಾಡಿದ್ದ ಸಾಧನೆ ಇಂದಿಗೂ ಎಲ್ಲರೂ ನೆನೆಯುವಂತೆ ಮಾಡಿದೆ.

ಸರ್ವರ ಹಿತ ಕಾಯುವ ಮನಸ್ಥಿತಿ ಇದ್ದ ರೇಣುಕಾಚಾರ್ಯರ ಮಾರ್ಗದರ್ಶನದಲ್ಲಿ ಎಲ್ಲ ಮಠಾಧಿಪತಿಗಳು ನಡೆಯುವಂತಾಗಬೇಕು ಎಂದು ಸಲಹೆ ನೀಡಿದರು.

Advertisement

ನಾಶ ಎಂಬುದಿಲ್ಲ: ಯೋಗಶಕಿಯ್ತಿಂದ ಜನ ಹೆಚ್ಚು ಆರೋಗ್ಯವಂತರಾಗಿ ಹೆಚ್ಚು ವರ್ಷಗಳ ಕಾಲ ನಿರೋಗಿಯಾಗಿ ಬದುಕಬಹುದು. ಯಾರು ಯೋಗದೊಂದಿಗೆ ಪರಮಾತ್ಮನ ಸೇವೆ ಮಾಡುವನೋ ಅವನೇ ಸುಖಿ ಜೀವಿ. ಲಿಂಗ ಪೂಜೆ ಮಾಡುವವನು ಜಗತ್ತೇ ನನ್ನದು. ಎಲ್ಲರೂ ಸುಖ ಸಂತೋಷದಿಂದ ಇರಲಿ ಎಂದು ಆಶಿಸುವವನು ಆಗಿರುತ್ತಾನೆ. ದೇವಾನು ದೇವತೆಗಳೇ ಲಿಂಗಪೂಜೆ ಮಾಡುತ್ತಿದ್ದರು. ಮೊದಲ ಪೂಜೆಯೇ ಲಿಂಗಪೂಜೆಯಾಗಿತ್ತು. ಲಿಂಗಪೂಜೆ ಮಾಡುವವನಿಗೆ ನಾಶ ಎಂಬುದೇ ಇರುವುದಿಲ್ಲ ಎಂದರು.

ಪ್ರದಾನ: ಶಿವಗಂಗಾ ಮೇಲಣಗವಿ ಮಠದಿಂದ ಕೊಡ ಮಾಡುವ ಶಿವಗಂಗಾ ಪ್ರಶಸ್ತಿಯನ್ನು ಮುಂಬರುವ ವರ್ಷದಲ್ಲಿ ಕಾಡ ಸಿದ್ದೇಶ್ವರ ಮಠವನ್ನು ಜನ ಸಾಮಾನ್ಯರ ಹತ್ತಿರಕ್ಕೆ ತಂದು ಎಲ್ಲರ ಬದುಕಿಗೆ ದಾರಿ ದೀಪವಾಗಿ ಸೇವೆ ಮಾಡುತ್ತಿರುವ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶೀಕೇಂದ್ರ ಮಹಾಸ್ವಾಮಿಗಳಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟಿಸಿದರು.

ಹಿತ ಕಾಯುವ ಧರ್ಮ: ಭಕ್ತರಿಗೆ ಆಶೀರ್ವಚನ ನೀಡಿದ ಡಾ.ಕರಿವೃಷಭ ದೇಶೀಕೇಂದ್ರ ಮಹಾಸ್ವಾಮೀಜಿ, ವೀರಶೈವ ಧರ್ಮ ಆಲದ ಮರವಿದ್ದಂತೆ. ನಾಲ್ಕು ಸಾವಿರ ವರ್ಷಗಳ ಇತಿಹಾಸವಿರುವ ವೀರಶೈವ ಧರ್ಮ ಸರ್ವರ ಹಿತ ಕಾಯುವ ಧರ್ಮವಾಗಿದೆ ಎಂದರು.

ಸಮಾರಂಭದಲ್ಲಿ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಸಮಾಜದ ಮುಖಂಡರಾದ ಗುರುಚನ್ನಬಸವಾರಾಧ್ಯ, ಎಸ್‌.ಎಂ.ಕುಮಾರಸ್ವಾಮಿ, ಮುಖ್ಯ ಶಿಕ್ಷಕ ನಟೇಶ್‌, ಚಂದ್ರಶೇಖರ್‌, ಸುನೀಲ್‌ ಬಾಬು, ಡಾ.ರುದ್ರಯ್ಯ‌ ಹಿರೇಮಠ್, ಅಂಬಿಕಮ್ಮ, ನಿರ್ಮಲಾ, ಗಣೇಶ್‌, ಚಿದಾನಂದ್‌, ರೇಣುಕೇಶ್‌, ವಿಶ್ವನಾಥ್‌, ವಕೀಲ ಧನಪಾಲ್‌, ಮಲ್ಲಿಕಾರ್ಜುನ್‌ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಟೇಶ್‌ ಸ್ವಾಗತಿಸಿದರು. ಸುನೀಲ್‌ ಬಾಬು ನಿರೂಪಿಸಿದರು.

ಶೀಘ್ರ ಕೃಷಿ ಉತ್ಪನ್ನಕ್ಕೆ ಬೆಲೆ ಬರಲಿದೆ
ನಾವು ಏನೇ ಕಾಯಕ ಮಾಡಿದರೂ ಬಹಳ ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಏಕಾಗ್ರತೆ ಇರಬೇಕು. ವ್ಯವಸಾಯ ಎಂಬುದು ಭೂತಾಯಿಯ ಸೇವೆಯಂತೆ. ಆದರೆ, ಈಗ ಭೂತಾಯಿಯ ಸೇವೆ ಮಾಡುವವರಿಗೆ ಬೆಲೆಯೇ ಇಲ್ಲದಂತೆ ಆಗಿದೆ. ಇಡೀ ಜೀವಸಂಕುಲಕ್ಕೆ ಜೀವನಾಧಾರ ಆಗಿರುವ ರೈತರ ಬೆಲೆ ಇನ್ನು ಕೆಲವೇ ದಿನಗಳಲ್ಲಿ ಪ್ರಪಂಚದ ಅರಿವಿಗೆ ಬರಲಿದೆ. ಎಷ್ಟೇ ಹಣ, ಚಿನ್ನ, ಬೆಳ್ಳಿ ಸಂಪಾದಿಸಿದರೂ ಎಲ್ಲರೂ ರೈತರು ಬೆಳೆಯುವ ಆಹಾರವನ್ನೇ ತಿನ್ನಬೇಕು. ಮುಂಬರುವ ದಿನಗಳಲ್ಲಿ ಆಹಾರದ ಬೆಲೆ ಏನು ಎಂಬುದು ಅರಿಗೆ ಬರಲಿದೆ ಎಂದು ಡಾ.ಮಲಯಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next