ಬ್ರಹ್ಮದತ್ತ ಎಂಬಾತ ಬೆನಾರಸ್ ಎಂಬ ನದಿ ಬಯಲಿನ ರಾಜ್ಯವನ್ನು ಆಳುತ್ತಿದ್ದನು. ಆಗ ಬೋಧಿಸತ್ವನು ಒಬ್ಬ ಕುಂಬಾರನ ಮಗನಾಗಿ ಆ ಊರಿನಲ್ಲಿ ಜನಿಸಿನು. ಪ್ರತಿದಿನವೂ ಮಡಕೆ ತಯಾರಿಕೆಗೆ ಬೇಕಾದ ಮಣ್ಣು ಸಂಗ್ರಹಿಸುತ್ತ ಅಪ್ಪನಿಗೆ ಸಹಾಯ ಮಾಡುತ್ತಿದ್ದನು.
ಈ ಬೆನಾರೆಸ್ ನದಿಯ ಬಳಿ ಒಂದು ವಿಶಾಲವಾದ ಕೆರೆಯಿದ್ದಿತು. ಆ ಊರಿನಲ್ಲಿ ಭಾರೀ ಮಳೆ ಸುರಿದಾಗ ಕೆರೆಯೂ, ನದಿಯೂ ಒಂದಾಗಿಬಿಡುತ್ತಿತ್ತು. ಆದರೆ, ನೀರು ಭಾರೀ ಕಡಿಮೆಯಾದಾಗ ಕೆರೆ, ನದಿ ಪ್ರತ್ಯೇಕವಾಗಿ ಕಾಣುತ್ತಿತ್ತು. ಇಲ್ಲಿ ವಾಸಿಸುತ್ತಿದ್ದ ಮೀನು ಮತ್ತು ಆಮೆಗೆ, ಯಾವಾಗ ಕೆರೆಯಲ್ಲಿ ನೀರು ತುಂಬುವುದು ಮತ್ತು ಯಾವಾಗ ಕೆರೆ ಖಾಲಿಯಾಗುವುದು ಎಂಬ ಬಗ್ಗೆ ಸಹಜವಾಗಿಯೇ ಜ್ಞಾನ ವಿದ್ದಿತು. ಹಾಗಂತ ಕೆರೆಯ ನೀರೇನೂ ಪೂರ್ತಿ ಖಾಲಿಯಾದ ಉದಾಹರಣೆ ಇರಲಿಲ್ಲ.
ಹೀಗೊಂದು ದಿನ, ಮೀನು ಮತ್ತು ಆಮೆಗೆ ಭವಿಷ್ಯದಲ್ಲಿ ಬರಗಾಲ ಪರಿಸ್ಥಿತಿ ಎದುರಾಗುವ ಸೂಚನೆ ದೊರೆಯಿತು. ಕೆರೆಯಲ್ಲಿ ನೀರು ಚೆನ್ನಾಗಿರುವಾಗಲೇ ಅವುಗಳು ತಮ್ಮ ತಮ್ಮ ಬಂಧು-ಬಾಂಧವರೊಡನೆ, ಈಜುತ್ತ ನದಿಯನ್ನು ಸೇರಿಕೊಂಡವು. ಆದರೆ, ಆಮೆಯ ಬಂಧುಗಳ ಪೈಕಿ ಒಂದು ಆಮೆ ಮಾತ್ರ ಹೀಗೆ ಈಜುತ್ತ ನದಿ ಸೇರಲು ಒಪ್ಪಲಿಲ್ಲ.
“”ನಾನು ಇಲ್ಲಿಯೇ ಹುಟ್ಟಿದ್ದೇನೆ, ಇಲ್ಲಿಯೇ ನಾನು ಬೆಳೆದಿದ್ದೇನೆ. ಇದು ನನ್ನ ಹಿರಿಯರ ಮನೆ. ಆದ್ದರಿಂದ, ಈ ಕೆರೆಯನ್ನು ಬಿಟ್ಟು ನಾನು ಬರಲಾರೆ” ಎಂದು ಅಳುತ್ತ ಕುಳಿತಿತು.
ಕೆಲಕಾಲದಲ್ಲೇ ಭಾರೀ ಬರಗಾಲ ಆ ಊರನ್ನು ಆವರಿಸಿತು. ಕೆರೆಯಲ್ಲಿ ನೀರು ಕಡಿಮೆಯಾದಂತೆ, ಆಮೆಯು ಮಣ್ಣಿನಲ್ಲಿ ಬಿಲ ಕೊರೆದು ಆದಷ್ಟು ಒಳ ಹೊಕ್ಕು ವಾಸಿಸಲು ಶುರು ಮಾಡಿತು. ಅಲ್ಲಿಗೆ ಬೋಧಿಸತ್ವನು ಮಣ್ಣಿಗಾಗಿ ಆಗಾಗ ಬರುವುದಿತ್ತು. ಒಂದು ದಿನ ತನ್ನ ಹಾರೆಯೊಂದಿಗೆ ಬಂದ ಬೋಧಿಸತ್ವನಿಗೆ ಮಣ್ಣು ಅಗೆಯುತ್ತಿರುವಾಗ ಆಮೆಯ ಚಿಪ್ಪು ಕಾಣಿಸಿತು. ಆಮೆಯು ಬೇಸರದಿಂದ ಬೋಧಿಸತ್ವನಿಗೆ ಹೇಳಿತು. “”ನನ್ನ ಮನೆ, ನನ್ನ ಕೆರೆ ಎಂದು ಪ್ರೀತಿಯಿಂದ ನಾನು ಇಲ್ಲಿಯೇ ಉಳಿದುಕೊಂಡದ್ದಕ್ಕೆ ನನಗೆ ಈ ಶಿಕ್ಷೆ ಅಲ್ಲವೆ?” ಎಂದು ದುಃಖೀ ಸಲಾರಂಭಿಸಿತು.
ಬೋಧಿಸತ್ವ ಹೇಳಿದ, “”ನನ್ನ ಮನೆ, ನನ್ನದು ಎಂಬ ಮಮಕಾರ ಸಲ್ಲದು ಅಲ್ಲವೆ? ಆದ್ದರಿಂದ ಎಲ್ಲಿ ಬದುಕು ಸಾಧ್ಯವೋ ಅಲ್ಲಿಗೇ ನೀನು ಹೋಗಬೇಕು ಅಲ್ಲವೇ”. ಆದರೆ, ಆಮೆಯು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆಯನ್ನೇ ಹೊಂದಿರಲಿಲ್ಲ. ಬೋಧಿಸತ್ವನ ಬಳಿ ವಾದ ಮಾಡುತ್ತಲೇ ಮುಂದುವರೆಯಿತು.
ಹೀಗೆ ಹಲವು ದಿನಗಳು ಕಳೆದ ಬಳಿಕ ಆಮೆಯು ಸಾವನ್ನಪ್ಪಿತು. ಬೋಧಿಸತ್ವನು ಅಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಹೇಳಿದ, “”ಪ್ರಕೃತಿಯು ಮುನಿದಾಗ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವುದೇ ಬದುಕಿಗೆ ಉಳಿದಿರುವ ದಾರಿ. ಈ ಜೀವನ ಮುಖ್ಯವೇ ಹೊರತು, ಕೇವಲ ನಂಬಿಕೆಗಳಲ್ಲ”.
(ಸಂಗ್ರಹ)