Advertisement
ನನ್ನ ಪ್ರಕಾರ, ಬದುಕಿನ ಬಹುದೊಡ್ಡ ಯೂನಿವರ್ಸಿಟಿ ಅಂದ್ರೆ ಹಾಸ್ಟೆಲ್! ಅದು ಎಂಟು ದಿಕ್ಕುಗಳಿಂದ ನೂರಾರು ತೊರೆಗಳು ಬಂದು ಸೇರುವ ಕಡಲಿದ್ದಂತೆ. ಮೊದ ಮೊದಲಿಗೆ ಹಾಸ್ಟೆಲ್‌ಗೆ ಕಾಲಿಟ್ಟಾಗ, ಕಗ್ಗಾಡಲ್ಲಿ ಸಿಲುಕಿದಂತೆ ಕಂಗಾಲಾಗಿದ್ದೆ. ಪರಿಚಿತರಿಲ್ಲದೇ ಚಿಂತೆಯಲ್ಲಿ ನಿದ್ದೆಗೆಟ್ಟಿದ್ದೆ. ಇದನ್ನು ಕೇಳಿ ನನ್ನ ಅಪ್ಪ- ಅಮ್ಮನ ಕಣ್ಣುಗಳು ಸಣ್ಣವಾಗಿದ್ದವು. ದಿನ ಕಳೆದಂತೆ ಇದೂ ಮನೆ ಅಂತನ್ನಿಸಿಬಿಟ್ಟಿತು. ಕುಟುಂಬದಂತೆ ಪ್ರೀತಿ ತೋರುವ ಗೆಳೆಯರ ಗುಂಪು ಹುಟ್ಟಿಕೊಂಡಿತು. ಎಲ್ಲಿಗೇ ಹೋದರೂ ಗುಂಪಿನಲ್ಲೇ ಹೋಗುವುದು, ಸದಾ ಸದ್ದು ಮಾಡುವ ಗುಂಪು ಚರ್ಚೆಗಳು ಮಜಾ ಕೊಟ್ಟವು.
ಆ ಟ್ವಿಸ್ಟ್‌ಗೂ ಕಾರಣ ಹಾಸ್ಟೆಲ್! ಈ ಜೀವನ ಒಂದು ಜೇನುಗೂಡು. ಇಲ್ಲಿರುವ ಸಮಸ್ಯೆಗಳೇ ನಮ್ಮೆಲ್ಲರನ್ನೂ ಒಗ್ಗೂಡಿಸಿ, “ನಾವೆಲ್ಲರೂ ಒಂದೇ’ ಎಂಬ ಭಾವ ಹುಟ್ಟಿಸಿತು. ಯಾರೊಬ್ಬರಿಗೆ ಕಷ್ಟ ಎದುರಾದರೂ, ನಮಗೇ ಆಗಿದ್ದು ಎಂಬಂತೆ, ಸಮಸ್ಯೆ ನಿವಾರಿಸಿಕೊಳ್ಳುತ್ತಿದ್ದೆವು. ಯಾರಾದರೂ ಅಪ್ಪ- ಅಮ್ಮ, ಮಗನನ್ನು ನೋಡಲು ಬಂದರೆ, ನಮ್ಮ ಅಪ್ಪ- ಅಮ್ಮನೇ ಬಂದಿದ್ದಾರೆ ಎಂಬಂಥ ಸತ್ಕಾರ. ನೋವಿನಲ್ಲೂ ನಗುವುದನ್ನು ಕಲಿತೆವು. ಪರಸ್ಪರ ಬಿಡಿಸಲಾಗದ ಬಾಂಧವ್ಯ ನಮ್ಮದಾಯಿತು. ಗುಂಪುಗೂಡಿಯೇ ಊಟ- ಉಪಹಾರ. ಒಟ್ಟಿಗೆ ಪ್ರವಾಸ. ಯಾರಿಗಾದರೂ ಹಣದ ತೊಂದರೆ ಎದುರಾದರೆ, ನಾವೆಲ್ಲರೂ ನೆರವಾಗುತ್ತಿದ್ದೆವು. ಅನಿವಾರ್ಯತೆ ಇದ್ದಾಗ ಬಟ್ಟೆ, ಶೂ, ಬೆಲ್ಟ್, ಕೋಟ್‌ಗಳೆಲ್ಲ ವಿನಿಮಯವಾಗಿದ್ದೂ ಇದೆ.
Related Articles
ಪರೀಕ್ಷೆ ಸನಿಹ ಬಂತು. ಹಾಸ್ಟೆಲ್‌ನಲ್ಲಿ ಒಂದು ಜಾಣ ನಿಶ್ಶಬ್ದ ಆವರಿಸಿತು. ತಪಸ್ಸಿಗೆ ಕುಳಿತಂತೆ ಪುಸ್ತಕದ ಮುಂದೆ ಕುಳಿತೆವು. ಗುಂಪು ಚರ್ಚೆಗಳು ಕಬ್ಬಿಣದ ಕಡಲೆಯನ್ನೂ ಮೆತ್ತಗೆ ಮಾಡಿಬಿಟ್ಟವು. ಕ್ಲಾಸ್‌ರೂಮ್‌ನ ಪಾಠಕ್ಕಿಂತ, ಗುಂಪು ಚರ್ಚೆಯಲ್ಲಿ ಕಲಿತಿದ್ದೇ ಹೆಚ್ಚು ಎಂಬಂಥ ಸಂತೃಪ್ತಿಭಾವ. ಒಟ್ಟಿನಲ್ಲಿ ಹಾಸ್ಟೆಲ್ಲೇ ನಮಗೆಲ್ಲ ಎರಡನೇ ವಿಶ್ವವಿದ್ಯಾಲಯ ಆದಂತೆ. ಎಲ್ಲರೂ ಆತ್ಮವಿಶ್ವಾಸದಲ್ಲಿ ಪರೀಕ್ಷೆ ಎದುರಿಸಿದ್ದೆವು.
Advertisement
ಫಲಿತಾಂಶ ಬಂದಾಗ ಬೇರೆಯವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟರು. ಹಾಸ್ಟೆಲ್‌ನ ಬ್ಯಾಚ್, ಒಳ್ಳೆಯ ಅಂಕಗಳಿಂದ ಪಾಸ್ ಆಗಿತ್ತು. “ವರ್ಸ್ಟ್ ಬ್ಯಾಚ್’ ಎಂದು ತೀರ್ಪು ಕೊಟ್ಟವರು ಕೊನೆಗೂ ಸೋಲೊಪ್ಪಿಕೊಂಡಿದ್ದರು. “ನಿಮ್ಮ ಒಗ್ಗಟ್ಟು ನಮ್ಮೆಲ್ಲರ ಮನಗೆದ್ದಿದೆ. ನಿಮ್ಮ ಸಾಧನೆಯಿಂದ ನಮ್ಮ ಕಾಲೇಜಿಗೆ ಒಳ್ಳೆಯ ಹೆಸರು ಬಂದಿದೆ. ಓದು- ಬರಹ ಅಷ್ಟೇ ಅಲ್ಲ, ಸಾಹಿತ್ಯ- ಕ್ರೀಡೆ- ಸಂಗೀತದಲ್ಲೂ ಟ್ಯಾಲೆಂಟ್ ತೋರಿಸಿದ್ದೀರಿ. ನೀವೇ ಈ ಕಾಲೇಜಿನ ದಿ ಬೆಸ್ಟ್ ಬ್ಯಾಚ್’ ಅಂದಾಗ, ನಾವೆಲ್ಲ ಖುಷಿಯಲ್ಲಿ ಶಿಳ್ಳೆ ಹಾಕಿದ್ದೇ ಹಾಕಿದ್ದು.
ಹೊಂದಾಣಿಕೆ, ಒಗ್ಗಟ್ಟು ಇದ್ದುಬಿಟ್ಟರೆ ಯಶಸ್ಸು ಸುಲಭದಲ್ಲಿ ಕೈಗೆಟುಕುತ್ತೆ ಎಂಬುದಕ್ಕೆ ನಮ್ಮ ಹಾಸ್ಟೆಲ್ ಜೀವನ ಅದ್ಭುತ ನಿದರ್ಶನ.
ಬಸವರಾಜ ಆರ್. ಪೂಜಾರ, ಉಡುಪಿ