Advertisement

ರಫೇಲ್‌ ವಿವಾದಕ್ಕೆ ತಿರುವು; ಪತ್ರಿಕಾ ವರದಿ ಅರ್ಧ ಸತ್ಯ:ನಿರ್ಮಲಾ

11:49 PM Feb 08, 2019 | |

ನವದೆಹಲಿ: ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಮತ್ತೂಂದು ಸುತ್ತಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ‘ರಕ್ಷಣಾ ಸಚಿವಾಲಯದ ಸಮಾಲೋಚನಾ ಸಮಿತಿ ರಫೇಲ್‌ ಕುರಿತು ಫ್ರಾನ್ಸ್‌ ಜತೆ ಮಾತುಕತೆ ನಡೆಸುತ್ತಿರುವಾಗಲೇ, ಪ್ರಧಾನಮಂತ್ರಿ ಕಾರ್ಯಾಲಯವು ‘ಪರ್ಯಾಯ ಮಾತುಕತೆ’ ನಡೆಸುತ್ತಿತ್ತು. ಈ ಮೂಲಕ ವಿಮಾನದ ದರ ನಿಗದಿ ವೇಳೆ ಪಿಎಂಒ ಹಸ್ತಕ್ಷೇಪ ಮಾಡಿತ್ತು. ಇದಕ್ಕೆ ಅಂದಿನ ರಕ್ಷಣಾ ಕಾರ್ಯದರ್ಶಿ ಜಿ.ಮೋಹನ್‌ ಕುಮಾರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂಬ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಶುಕ್ರವಾರ ಸರ್ಕಾರವನ್ನು ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.

Advertisement

ನಿರ್ಮಲಾ ತಿರುಗೇಟು: ಮೋದಿ ದೇಶದ ರಕ್ಷಣಾ ವ್ಯವಸ್ಥೆಯನ್ನೇ ನಾಶ ಮಾಡುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ಆರೋಪಿಸಿರುವ ಪ್ರತಿಪಕ್ಷಗಳು, ಮೋದಿ ಕೂಡಲೇ ರಾಜೀನಾಮೆ ನೀಡಬೇಕು, ಪ್ರಕರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿವೆ. ಪ್ರತಿಪಕ್ಷಗಳ ಕೋಲಾಹಲ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಮುಗಿದುಹೋದ ವಿಷಯವನ್ನಿಟ್ಟುಕೊಂಡು ಸುಖಾಸುಮ್ಮನೆ ಎಳೆದಾಡಲಾಗುತ್ತಿದೆ. ಮಾಧ್ಯಮ ವರದಿಯು ರಕ್ಷಣಾ ಕಾರ್ಯದರ್ಶಿಯ ಆಕ್ಷೇಪವನ್ನು ಮಾತ್ರ ಪ್ರಕಟಿಸಿದೆ. ಅವರ ಆಕ್ಷೇಪಕ್ಕೆ ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌ ನೀಡಿದ್ದ ಪ್ರತಿಕ್ರಿಯೆ ಪ್ರಕಟಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ಅಂದು ಪರ್ರಿಕರ್‌ ಪ್ರತಿಕ್ರಿಯೆ ನೀಡಿ, ‘ಪಿಎಂಒ, ಫ್ರಾನ್ಸ್‌ ಅಧ್ಯಕ್ಷರ ಕಚೇರಿಯು ಒಪ್ಪಂದದ ಪ್ರಗತಿ ಪರಿಶೀಲಿಸುತ್ತಿರುವಂತೆ ಕಾಣುತ್ತಿದೆ. ನೀವು ಕೂಲ್‌ ಆಗಿರಿ. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿ ವಿವಾದ ಪರಿಹರಿಸಿಕೊಳ್ಳಿ’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next