ಮಾದನಹಿಪ್ಪರಗಿ: ದುಷ್ಟಗುಣ ದೂರ ಮಾಡಿ ಸದ್ಗುಣ ಹೊಂದಿ, ತನ್ನನ್ನು ತಾನು ಜಯಿಸುವ ಸಂಕೇತವೇ ವಿಜಯದಶಮಿ ಎಂದು ಶಿವಲಿಂಗೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ಹೇಳಿದರು.
ಉಪಗ್ರಾಮವಾದ ವಾಡಿಯ ಕಾಳಿಕಾ ದೇವಿ ಮಠದಲ್ಲಿ ಮುಂಜಾನೆ 6 ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನಸ್ಸಿನಲ್ಲಿರುವ ರಾಕ್ಷಸಿ ಗುಣಗಳನ್ನು ಹೊಡೆದೋಡಿಸಿ. ದ್ವೇಷ ಅಸೂಯೆ ಗುಣಗಳನ್ನು ಅದುಮಿಟ್ಟು ಕ್ಷಮಾಗುಣ ಅಳವಡಿಸಿಕೊಂಡು ಎಲ್ಲರೂ ಒಂದಾಗಿ ಬಾಳುವುದು ಮಹಾನವಮಿ ಹಬ್ಬ ಎಂದರು.
ಒಬ್ಬರಿಗೊಬ್ಬರು ಬನ್ನಿ ಕೊಡುವ ಸಂಪ್ರದಾಯ ಅನಾದಿಕಾಲದಿಂದಲೂ ಬಂದಿದೆ. ನಾವೆಲ್ಲರೂ ಒಂದು ಎಲ್ಲರನ್ನು ಪ್ರೀತಿಸೋಣ ಬೆಳೆಯೋಣ ಎಂಬ ಧ್ಯೇಯ ನಮ್ಮದಾಗಬೇಕು ಎಂದರು.
ಮೈಂದರಗಿಯ ಮಹಾಂತೇಶ್ವರ ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಹಿಂದಿನ ಮತ್ಸರ ಮರೆತು ಒಬ್ಬರೊಗೊಬ್ಬರು ಬಂಗಾರ ಕೊಟ್ಟು ಅಪ್ಪಿಕೊಳ್ಳುವುದೇ ದಸರಾ ಹಬ್ಬದ ವಿಶೇಷ ಎಂದರು.
ಕಾಳಿಕಾ ದೇವಿ ಮಠ ಹಾಗೂ ಇಬ್ರಾಹಿಂಪುರ ಮಠದ ಮಹಾಂತ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಬಸಲಿಂಗಯ್ನಾ ಸ್ವಾಮಿ, ಶಿವಾನಂದ ಪಾಟೀಲ, ಸಿದ್ಧರಾಮ ಅರಳಿಮರ, ಬಸವರಾಜ ಓನಮಶೆಟ್ಟಿ, ಶಾಂತಮಲ್ಲಪ್ಪ ಕಬಾಡಗಿ, ಗಣೇಶ ಓನಮಶೆಟ್ಟಿ, ಶರಣಬಸಪದಪ್ಪ ಜಿಡ್ಡಿಮನಿ, ಶಾಂತಮಲ್ಲ ಸಂಬಾಳೆ, ಕಲ್ಲಪ್ಪ ಸಿಂಗಸೆಟ್ಟಿ, ಶಿವಲಿಂಗಪ್ಪ ಮೈಂದರಗಿ, ಮಲ್ಲಿನಾಥ ಮೈಂದರಗಿ, ವಿಶ್ವನಾಥ ಪರೇಣಿ ಇದ್ದರು.