ಒಂದು ನಗರದಲ್ಲಿ ಒಬ್ಬ ಶ್ರೀಮಂತ ಹೆಂಗಸಿದ್ದಳು. ಅವಳಿಗೆ ಒಬ್ಬನೇ ಮಗನಿದ್ದ. ಪ್ರಾಪ್ತ ವಯಸ್ಸಿಗೆ ಬಂದಿದ್ದ ಮಗನಿಗೆ ಮದುವೆ ಮಾಡಬೇಕೆಂದು ಹೆಂಗಸು ಯೋಚಿಸಿ ಸೂಕ್ತ ಕನ್ಯೆಯರನ್ನು ಹುಡುಕಲು ಆರಂಭಿಸಿದಳು. ಆದರೆ ಅವನು ಯಾವ ಕನ್ಯೆಯರನ್ನೂ ಒಪ್ಪಿಕೊಳ್ಳಲಿಲ್ಲ. ಅವರಲ್ಲಿ ಏನಾದರೂ ದೋಷವನ್ನು ಕಂಡು ನಿರಾಕರಿಸುತ್ತಿದ್ದ. ಕಡೆಗೆ ಹೆಂಗಸು ಅವನಿಗೆ ಬೇಕಾದ ಹುಡುಗಿಯನ್ನು ಅವನೇ ಹುಡುಕಿಕೊಳ್ಳುವಂತೆ ಹೇಳಿದಳು. ಅವನು ಹಳ್ಳಿಗೆ ಹೋದ. ಅಲ್ಲಿ ಕಡು ಬಡವರ ಮನೆಯ ತನಿಷಾ ಎಂಬ ಹುಡುಗಿಯನ್ನು ನೋಡಿದ. ಅವಳ ಅಂದಚಂದಕ್ಕೆ ಮರುಳಾದ. ತನಿಷಾ ಎಳೆಯ ಮಗುವಾಗಿದ್ದಾಗ ಆಕಾಶದಿಂದ ಒಬ್ಬ ಅಪ್ಸರೆ ಕೆಳಗಿಳಿದಳು. ಮಗು ತನಿಷಾ ಹೋಗಿ ಅವಳ ಕಾಲುಗಳನ್ನು ಹಿಡಿದುಕೊಂಡಳು. ಆಗ ಅಪ್ಸರೆ ತನ್ನ ಎಲ್ಲ ಚೆಲುವನ್ನೂ ಅವಳಿಗೆ ಧಾರೆಯೆರೆದು ಮಾಯವಾದಳು. ಅಪ್ಸರೆಯ ಸೌಂದರ್ಯವನ್ನು ಹೊಂದಿದ ತನಿಷಾಳನ್ನು ಶ್ರೀಮಂತ ಹೆಂಗಸು ಮಾತ್ರ ಸೊಸೆಯಾಗಿ ಮಾಡಿಕೊಳ್ಳಲು ಒಪ್ಪಿಕೊಳ್ಳಲಿಲ್ಲ. “ಅಂದವಿದ್ದರೆ ಸಾಲದು. ಬುದ್ಧಿವಂತಿಕೆಯೂ ಬೇಕು. ಇದಕ್ಕೊಂದು ಪರೀಕ್ಷೆ ಒಡ್ಡುತ್ತೇನೆ. ನಮ್ಮ ಮನೆಯಲ್ಲಿ ಹಳೆಯ ಕಾಲದ ಒಂದು ಬೆಳ್ಳಿಯ ಗಿಂಡಿ ಇದೆ. ಇದನ್ನು ತೊಳೆದು ಬೆಳ್ಳಗೆ ಮಾಡಿ ತಂದು ತೋರಿಸಬೇಕು. ಈ ಪರೀಕ್ಷೆಯಲ್ಲಿ ಸೋತರೆ ನನ್ನ ಸೊಸೆಯಾಗಲು ಸಾಧ್ಯವಿಲ್ಲ’ ಎಂದು ಹೇಳಿ ಗಿಂಡಿಯನ್ನು ತಂದುಕೊಟ್ಟಳು.
ತನಿಷಾ ಬೆಳ್ಳಿಯ ಗಿಂಡಿಯನ್ನು ಹಳ್ಳದ ಬಳಿಗೆ ತಂದಳು. ಆಗ ಒಂದು ಕೊಕ್ಕರೆ ಬಂದು ಗಿಂಡಿಯ ಮೇಲೆರಗಿ ಕಚ್ಚಿಕೊಂಡು ಹಾರತೊಡಗಿತು. ಆಗ ತನಿಷಾ, “”ಕೊಕ್ಕರೆ ಕೊಕ್ಕರೆ, ನನ್ನ ಗಿಂಡಿಯನ್ನು ಕೊಟ್ಟುಬಿಡು. ಅದರಿಂದ ನನಗೆ ಸಿರಿವಂತನಾದ ಗಂಡ ಸಿಕ್ಕುತ್ತಾನೆ, ಸುಖವಾಗಿ ಬದುಕುತ್ತೇನೆ” ಎಂದು ಅಂಗಲಾಚಿ ಬೇಡಿಕೊಂಡಳು. ಆಗ ಕೊಕ್ಕರೆಯು, “”ನಾನು ಆಹಾರ ಕಾಣದೆ ತಿಂಗಳುಗಳು ಕಳೆದಿವೆ. ಒಂದು ಹಿಡಿ ಬಾರ್ಲಿ ತಂದುಕೊಟ್ಟರೆ ಗಿಂಡಿಯನ್ನು ಮರಳಿಸುತ್ತೇನೆ” ಎಂದು ಹೇಳಿ ಗಿಂಡಿಯೊಂದಿಗೆ ಮರದ ಮೇಲೆ ಕುಳಿತಿತು. ತನಿಷಾ ಬಾರ್ಲಿಯನ್ನು ಹುಡುಕುತ್ತ ಹೊಲದ ಬಳಿಗೆ ಬಂದಳು. ಬಾರ್ಲಿಯ ಗಿಡಗಳು ಒಣಗಿ ನಿಂತಿದ್ದವು. “”ಬಾರ್ಲಿ ಗಿಡವೇ, ಒಂದು ಹಿಡಿ ಕಾಳು ಕೊಡುತ್ತೀಯಾ? ಬಡ ಹುಡುಗಿ ನಾನು, ಶ್ರೀಮಂತ ಗಂಡನ ಕೈಹಿಡಿದು ಸುಖವಾಗಿರುತ್ತೇನೆ” ಎಂದು ಕೋರಿದಳು.
ಬಾರ್ಲಿ ಗಿಡ ದುಃಖದಿಂದ ಕಂಬನಿಗರೆಯಿತು. “”ಒಬ್ಬ ಬಡ ಹುಡುಗಿಗೆ ನೆರವಾಗುವುದು ನನಗೂ ಸಂತೋಷವೇ ಆದರೂ ಮಳೆ ಬಾರದೆ ಎಷ್ಟು ಕಾಲವಾಗಿದೆ ಗೊತ್ತಾ? ನೀರಿಲ್ಲದೆ ಒಣಗಿ ಹೋದ ನಾನು ನಿನಗೆ ಎಲ್ಲಿಂದ ಕಾಳು ಕೊಡಲಿ? ದೇವರನ್ನು ಕೇಳಿ ಮಳೆ ಸುರಿಯುವಂತೆ ಮಾಡು” ಎಂದು ಹೇಳಿತು. ಧರ್ಮಗುರುಗಳು ಕೂಗಿ ಕರೆದರೆ ದೇವರು ಮಳೆ ಸುರಿಸಬಹುದು ಎಂದು ಯೋಚಿಸಿ ತನಿಷಾ ಒಬ್ಬ ಗುರುವಿನ ಬಳಿಗೆ ಹೋಗಿ ನಡೆದ ಕತೆ ಹೇಳಿದಳು. “”ಬಾರ್ಲಿ ಗಿಡಗಳ ಮೇಲೆ ಮಳೆ ಸುರಿಯುವಂತೆ ಮಾಡಿ ಬಡ ಹುಡುಗಿಗೆ ಸುಖ ಸಿಗುವಂತೆ ನೆರವಾಗಿ” ಎಂದು ಬೇಡಿದಳು. ಗುರುವು, “”ಬಡ ಹುಡುಗಿಗೆ ಸಹಾಯ ಮಾಡುವುದು ನನಗೂ ಇಷ್ಟವೇ. ಆದರೆ ದೇವರನ್ನು ಪ್ರಾರ್ಥಿಸಲು ಧೂಪದ ಹೊಗೆ ಹಾಕಬೇಕು. ಧೂಪದ ಮಯಣ ಸಿಗದೆ ಬಹು ಕಾಲವಾಗಿದೆ. ಅದನ್ನು ತಂದುಕೊಡು” ಎಂದು ಕೇಳಿದ.
ತನಿಷಾ ಧೂಪ ಮಾರುವವನ ಅಂಗಡಿಗೆ ಹೋಗಿ ಎಲ್ಲ ವಿಷಯ ಹೇಳಿ ಬಡ ಹುಡುಗಿಯ ಮದುವೆಗೆ ನೆರವಾಗುವಂತೆ ಬೇಡಿದಳು. ಅಂಗಡಿಯವನು, “”ಅದಕ್ಕಿಂತ ದೊಡ್ಡ ಪುಣ್ಯದ ಕೆಲಸ ಬೇರೇನಿಲ್ಲ ನಿಜ. ಆದರೆ ಧೂಪದ ಮಯಣ ತರಲು ಕಾಡಿಗೆ ಹೋಗಬೇಕಿದ್ದರೆ ಕಾಲುಗಳಿಗೆ ದಪ್ಪಚರ್ಮದ ಪಾದರಕ್ಷೆ ಬೇಕು. ಎಲ್ಲಿಂದಾದರೂ ಪಾದರಕ್ಷೆ ತಂದುಕೊಡು. ನಾನು ಕೂಡಲೇ ನಿನಗೆ ಮಯಣ ತಂದುಕೊಡುತ್ತೇನೆ” ಎಂದು ಹೇಳಿದ. ತನಿಷಾ ಪಾದರಕ್ಷೆ ಹೊಲಿಯುವವನ ಬಳಿಗೆ ಹೋಗಿ ಈ ಸಂಗತಿ ಹೇಳಿದಳು. ಬಡ ಹುಡುಗಿಯ ಮದುವೆಗೆ ಸಹಾಯವಾಗಬೇಕೆಂದು ಕೇಳಿಕೊಂಡಳು.
ಪಾದರಕ್ಷೆ ಹೊಲಿಯುವವನು, “”ಬಡವರಿಗೆ ನೆರವಾಗಲು ನನಗೂ ಮನಸ್ಸಿದೆ. ಆದರೆ ಚರ್ಮ ಸಿಗದ ಕಾರಣ ಪಾದರಕ್ಷೆ ಹೊಲಿಯಲು ದಾರಿಯಿಲ್ಲ. ಎಲ್ಲಾದರೂ ಒಂಟೆಯ ಚರ್ಮ ಸಿಕ್ಕಿದರೆ ತಂದುಕೊಡು. ಪಾದರಕ್ಷೆ ಹೊಲಿದುಕೊಡುತ್ತೇನೆ” ಎಂದು ಹೇಳಿದ. ತನಿಷಾ ಒಂಟೆಯ ಬಳಿಗೆ ಬಂದಳು. ಆಹಾರವಿಲ್ಲದೆ ಕೃಶವಾಗಿದ್ದ ಒಂಟೆಯ ಮುಂದೆ ನಿಂತು ಆವರೆಗೆ ನಡೆದುದನ್ನು ಹೇಳಿದಳು. “”ಒಂದು ಜೊತೆ ಪಾದರಕ್ಷೆ ಹೊಲಿಯುವಷ್ಟು ಚರ್ಮವನ್ನು ಕೊಡಬಲ್ಲೆಯಾ? ಅದರಿಂದ ಬಡ ಹುಡುಗಿಯೊಬ್ಬಳು ಶ್ರೀಮಂತರ ಮನೆ ಸೇರಿ ಸುಖವಾಗಿರಬಹುದು” ಎಂದು ಕೇಳಿದಳು. ಒಂಟೆಯು, “”ಬಡವರಿಗೆ ಉಪಕಾರ ಮಾಡುವ ಮನಸ್ಸು ನನಗೂ ಇದೆ. ಆದರೆ ಆಹಾರ ಕಾಣದೆ ದೀರ್ಘ ಕಾಲವಾಯಿತು. ನನಗೆ ಸ್ವಲ್ಪವೂ ಶಕ್ತಿಯಿಲ್ಲ. ಯಾರಾದರೂ ರೈತರ ಬಳಿಗೆ ಹೋಗಿ ಒಂದಿಷ್ಟು ಒಣಹುಲ್ಲು ಕೇಳಿ ತಂದುಕೊಡು. ಅದನ್ನು ತಿಂದರೆ ಶಕ್ತಿ ಬರುತ್ತದೆ, ನಿನಗೆ ಚರ್ಮವನ್ನು ಕೊಡುತ್ತೇನೆ” ಎಂದು ಹೇಳಿತು.
ತನಿಷಾ ಹಣ್ಣು ಮುದುಕನಾಗಿ ಹಾಸಿಗೆ ಹಿಡಿದಿದ್ದ ಒಬ್ಬ ರೈತನ ಬಳಿಗೆ ಹೋದಳು. ನಡೆದುದನ್ನೆಲ್ಲ ವಿವರವಾಗಿ ಹೇಳಿದಳು. “”ಒಂಟೆಗಾಗಿ ಒಂದು ಹಿಡಿ ಒಣಹುಲ್ಲು ಕೊಡುತ್ತೀಯಾ? ಬಡ ಹುಡುಗಿಯೊಬ್ಬಳು ಗಂಡನ ಮನೆಯಲ್ಲಿ ಸುಖವಾಗಿರಲು ಸಹಾಯ ಮಾಡುತ್ತೀಯಾ?” ಕೇಳಿದಳು. ಮುದುಕನು ನಿತ್ರಾಣನಾಗಿ, “”ಬಡ ಹುಡುಗಿಗೆ ನೆರವಾಗುವುದಕ್ಕಿಂತ ಪುಣ್ಯದ ಕೆಲಸ ಇನ್ನೇನಿದೆ? ಆದರೆ ನನಗೆ ಎದ್ದು ಕುಳಿತುಕೊಳ್ಳಲೂ ಶಕ್ತಿಯಿಲ್ಲ. ನೀನು ನನ್ನ ಕೆನ್ನೆಗೆ ಒಂದು ಮುತ್ತು ಕೊಡುತ್ತೀಯಾ? ಅದರಿಂದ ಶಕ್ತಿ ಪಡೆದು ಯುವಕನಾಗಿ ನಿನಗೆ ಬೇಕಾದಷ್ಟು ಹುಲ್ಲು ಕೊಡುತ್ತೇನೆ” ಎಂದು ಹೇಳಿದ. ತನಿಷಾ ಮರು ಮಾತಾಡದೆ ಅವನ ಕೆನ್ನೆ ಒಂದು ಮುತ್ತು ನೀಡಿದಳು.
ಮರುಕ್ಷಣವೇ ರೈತ ಚೈತನ್ಯ ಪಡೆದು ಯುವಕನಾಗಿ ಎದ್ದುನಿಂತ. ಪ್ರತಿಫಲವೆಂದು ತನಿಷಾಳಿಗೆ ಒಂದು ಹೊರೆ ಒಣಹುಲ್ಲು ನೀಡಿದ. ಅದನ್ನು ತಂದು ಒಂಟೆಯ ಮುಂದಿಟ್ಟಳು. ಅದು ಹುಲ್ಲು ತಿಂದು ಶಕ್ತಿ ಪಡೆದು ಎದ್ದು ಬಂದು ಅವಳಿಗೆ ಪಾದರಕ್ಷೆಗಳಿಗೆ ಬೇಕಾಗುವಷ್ಟು ಚರ್ಮವನ್ನು ಕೊಟ್ಟಿತು. ಅವಳು ಅದನ್ನು ತಂದು ಪಾದರಕ್ಷೆ ಹೊಲಿಯುವವನಿಗೆ ಒಪ್ಪಿಸಿದಳು. ಅವನು ಧೂಪದ ಮಯಣ ತರುವವನ ಕಾಲಿಗೆ ಹೊಂದುವ ಪಾದರಕ್ಷೆ ತಯಾರಿಸಿ ಕೊಟ್ಟ. ಅದನ್ನು ಧರಿಸಿ ಧೂಪ ಮಾರುವವನು ಮಯಣ ತಂದು ತನಿಷಾಳಿಗೆ ನೀಡಿದ. ಧರ್ಮಗುರುವು ಧೂಪದ ಹೊಗೆ ಹಾಕಿ ದೇವರನ್ನು ಪ್ರಾರ್ಥಿಸಿದ.
ಧರ್ಮಗುರುವಿನ ಮೊರೆ ಕೇಳಿದ ದೇವರು ಮರುಕ್ಷಣವೇ “ಧೋ’ ಎಂದು ಮಳೆ ಸುರಿಸಿದ. ಮಳೆಯ ನೀರಿನಿಂದ ಬಾರ್ಲಿಯ ಹುಲ್ಲು ಹಸುರಾಗಿ ಜೀವಕಳೆ ಪಡೆದು ತೂಗಾಡುವ ತೆನೆಗಳಿಂದ ಕಾಳು ತೆಗೆದು ತನಿಷಾಳ ಕೈಯಲ್ಲಿರಿಸಿತು. ಅವಳು ತಂದ ಬೊಗಸೆ ತುಂಬ ಕಾಳು ಕಂಡು ಕೊಕ್ಕರೆ ಬೆಳ್ಳಿಯ ಗಿಂಡಿಯನ್ನು ಕೆಳಗೆ ಹಾಕಿತು. ಗಿಂಡಿಯನ್ನು ಫಳಫಳ ಹೊಳೆಯುವಂತೆ ಬೆಳಗಿ ತನಿಷಾ ಶ್ರೀಮಂತರ ಹೆಂಗಸಿನ ಮುಂದೆ ತಂದಿಟ್ಟಳು. ಅದನ್ನು ನೋಡಿ ಹೆಂಗಸಿಗೆ ಸಂತಸದಿಂದ ಮನವರಳಿತು. “”ಭೇಷ್! ಹಿಡಿದ ಕೆಲಸವನ್ನು ಕಡೆಯವರೆಗೂ ಬಿಡದೆ ಸಾಧಿಸುವ ಛಲ ನಿನ್ನಲ್ಲಿರುವ ಕಾರಣ ನೀನು ಬಹು ಬುದ್ಧಿವಂತಳೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನನ್ನ ಮಗನಿಗೆ ನೀನೇ ತಕ್ಕ ಹೆಂಡತಿ ಎಂದು ಒಪ್ಪಿಕೊಳ್ಳುತ್ತೇನೆ” ಎಂದು ಹೇಳಿ ಸೊಸೆಯಾಗಿ ಸ್ವೀಕರಿಸಿದಳು.
ಪ. ರಾಮಕೃಷ್ಣ ಶಾಸ್ತ್ರಿ