ಅಫ್ಘಾನಿಸ್ತಾನ ತಾಲಿಬಾನ್ ಬಂಡುಕೋರರ ವಶವಾದ ನಂತರ ನೆರೆಯ ದೇಶಗಳು ಕೂಡಾ ಎಚ್ಚೆತ್ತುಕೊಂಡಿದ್ದು, ಇದೀಗ ಅಕ್ರಮ ವಲಸಿಗರು ಒಳ ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಟರ್ಕಿ ಇರಾನ್ ಗಡಿಯುದ್ದಕ್ಕೂ ಸುಮಾರು 295 ಕಿಲೋ ಮೀಟರ್ ಉದ್ದದಷ್ಟು ಬೃಹತ್ ಗೋಡೆಯನ್ನು ನಿರ್ಮಿಸುತ್ತಿದೆ. ಈಗಾಗಲೇ ಗೋಡೆ ಕಟ್ಟುವ ಕೆಲಸ ಪೂರ್ಣಗೊಳ್ಳತೊಡಗಿದೆ ಎಂದು ಟರ್ಕಿ ರಕ್ಷಣಾ ಸಚಿವ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ನಿರಾಶ್ರಿತರು ಟರ್ಕಿ ಒಳಗೆ ನುಸುಳದಂತೆ ತಡೆಗಟ್ಟಲು ಗೋಡೆಯನ್ನು ನಿರ್ಮಿಸುತ್ತಿದ್ದೇವೆ. ಇದರಲ್ಲಿ ಬಹುತೇಕ ಭಾಗದ ಕೆಲಸ ಪೂರ್ಣಗೊಂಡಿದೆ. ಸುಮಾರು 150 ಕಿಲೋ ಮೀಟರ್ ಉದ್ದದವರೆಗೂ ಕಂದಕ ನಿರ್ಮಾಣ ಮಾಡಲಾಗಿದೆ. ಹೆಚ್ಚುವರಿಯಾಗಿ ಗಡಿಪ್ರದೇಶದಲ್ಲಿನ ಶಿಬಿರಗಳನ್ನು ಬಲವರ್ಧನೆಗೊಳಿಸಲಾಗಿದೆ. ಅಷ್ಟೇ ಅಲ್ಲ ಅಫ್ಘಾನಿಸ್ತಾನದ ನಿರಾಶ್ರಿತರು ಟರ್ಕಿ ಗಡಿ ಪ್ರವೇಶಿಸದಂತೆ ತಡೆಯಲು ಹೆಚ್ಚಿನ ಭದ್ರತೆಯನ್ನೂ ಕೈಗೊಳ್ಳಲಾಗಿದೆ. ಗಡಿಯಲ್ಲಿ ಹಗಲು, ರಾತ್ರಿ ಬಿಗಿ ಪಹರೆ ನಡೆಸಲಾಗುತ್ತಿದೆ.
ಗಡಿಯಲ್ಲಿ ಅಕ್ರಮ ವಲಸಿಗರು ಒಳನುಸುಳುವುದನ್ನು ತಡೆಗಟ್ಟಲು ಅತ್ಯಾಧುನಿಕ ಸೆನ್ಸಾರ್ ಗಳನ್ನು ಅಳವಡಿಸಲಾಗಿದೆ. ನಮ್ಮೆಲ್ಲಾ ಸೈನಿಕರು, ನಾಗರಿಕರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಲಿದ್ದಾರೆ ಎಂಬುದು ಟರ್ಕಿಯ ಸಂದೇಶವಾಗಿದೆ. ಅಫ್ಘಾನ್ ವಲಸಿಗರು ಅಪಾರ ಸಂಖ್ಯೆಯಲ್ಲಿ ಇರಾನ್ ಮೂಲಕ ಟರ್ಕಿಯೊಳಗೆ ಪ್ರವೇಶಿಸುತ್ತಿದ್ದಾರೆ. ಈ ಬೃಹತ್ ಗೋಡೆ, ಕಂದಕ ನಿರ್ಮಾಣದಲ್ಲಿ ಅಕ್ರಮ ವಲಸಿಗರ ಆಗಮನಕ್ಕೆ ತಡೆಯೊಡ್ಡಲಿದೆ ಎಂಬುದು ಟರ್ಕಿ ಅಧ್ಯಕ್ಷ ರಿಸಿಪ್ ತಯ್ಯಿಪ್ ಎರ್ಡೊಗಾನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ಅಟ್ಟಹಾಸಕ್ಕೆ ನಲುಗಿರುವ ಅಫ್ಘಾನ್ ಜನರು, ಪ್ರತಿದಿನ ಒಂದು ಸಾವಿರಕ್ಕೂ ಅಧಿಕ ಮಂದಿ ಅಕ್ರಮವಾಗಿ ಪೂರ್ವ ಗಡಿಪ್ರದೇಶದಿಂದ ಟರ್ಕಿಯೊಳಕ್ಕೆ ಪ್ರವೇಶಿಸುತ್ತಿದ್ದಾರೆ ಎಂದು ವರದಿ ವಿವರಿಸಿದೆ. ಟರ್ಕಿಯಲ್ಲಿ ಪ್ರಸ್ತುತ 4 ಮಿಲಿಯನ್ ನಿರಾಶ್ರಿತರಿದ್ದಾರೆ. ಇದರಲ್ಲಿ 200,000 ಸಿರಿಯಾ ದೇಶದವರು, 6,00,000 ಮಂದಿ ಅಫ್ಘಾನಿಸ್ತಾನದ ನಿರಾಶ್ರಿತರು ಸೇರಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣ ವಶಕ್ಕೆ ಟರ್ಕಿ ಸಿದ್ಧತೆ?
ಕಾಬೂಲ್ ನಲ್ಲಿರುವ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆಯಲು ಟರ್ಕಿ ಯೋಚಿಸುತ್ತಿದ್ದ, ಈ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಅಲ್ಲದೇ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭದ್ರತೆ ನೀಡಲು ಟರ್ಕಿ 600 ಮಂದಿ ಸೈನಿಕರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿತ್ತು. ಒಂದು ವೇಳೆ ತಾಲಿಬಾನ್ ಮನವಿ ಮಾಡಿಕೊಂಡರೆ ಬೆಂಬಲ ನೀಡಲು ಸಿದ್ಧ ಎಂದು ಟರ್ಕಿ ಘೋಷಿಸಿದೆ.
ಗುರುದ್ವಾರದಲ್ಲಿ ಹಲವರ ಆಶ್ರಯ
ಹಿಂದೂಗಳುಮತ್ತು ಸಿಖ್ ಸಮುದಾಯದ 50ಮಂದಿ ಹಿಂದೂಗಳು ಮತ್ತು 270ಕ್ಕಿಂತಲೂ ಅಧಿಕಮಂದಿಸಿಖ್ ಸಮುದಾಯದವರು ಕಾಬೂಲ್‌ನ ಕರ್ತೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯಪಡೆದಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾಹೇಳಿದ್ದಾರೆ. ಕಾಬೂಲ್ ನಲ್ಲಿರುವ ಗುರುದ್ವಾರ ಸಮಿತಿಯ ಮುಖ್ಯಸ್ಥರ ಜತೆಗೆನಿ ಕಟಸಂಪರ್ಕದಲ್ಲಿ ಇರುವುದಾಗಿಯೂ ತಿಳಿಸಿದ್ದಾರೆ. ತಾಲಿಬಾನ್ ಸಂಘಟನೆಯ ಮುಖಂಡರು ಅವರನ್ನು ಭೇಟಿಯಾಗಿದ್ದಾರೆ ಮತ್ತು ಅವರಿಗೆ ತೊಂದರೆ ನೀಡದೆ, ರಕ್ಷಣೆ ಕೊಡವುದಾಗಿ ಹೇಳಿದ್ದಾರೆಎಂದು ಸಿರ್ಸಾ ತಿಳಿಸಿದ್ದಾರೆ. ಎರಡೂ ಸಮುದಾಯಗಳ ಜನರು ಅಲ್ಲಿನ ರಾಜಕೀಯ ಸಂದಿಗ್ಧ ಪರಿಸ್ಥಿತಿಯ ಹೊರತಾಗಿಯೂ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಜನರು ಭೀತಿಗೆ ಒಳಗಾಗಿದ್ದಾರೆ:
ತಿರುಮೂರ್ತಿ ಅಫ್ಘಾನಿಸ್ತಾನದ ಮಹಿಳೆಯರು ಮತ್ತು ಮಕ್ಕಳು ಹೆದರಿಕೆಯಲ್ಲಿಯೇ ಬದುಕುವಂತಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ರಾಯಭಾರಿ ಟಿ.ಎಸ್.ತಿರುಮೂರ್ತಿ ಆತಂಕವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾಮಂಡಳಿಯ ಸಭೆಯಲ್ಲಿಮಾತನಾಡಿದ ಅವರು, ಆಫ್ಘಾನ್‌ನ ನೆರೆಯ ದೇಶವಾಗಿರುವ ನಾವು, ಅಲ್ಲಿನ ಸ್ಥಿತಿಯಬಗ್ಗೆ ಕಳವಳಹೊಂದಿದ್ದೇವೆ.ಈ ಬಿಕ್ಕಟ್ಟು ಉಂಟಾಗುವ ಮೊದಲು ಭಾರತ 34ಪ್ರಾಂತ್ಯಗಳೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುವ ಹೊಣೆಯನ್ನು ಹೊತ್ತುಕೊಂಡಿದೆ. ಆ ದೇಶದಲ್ಲಿ ಶಾಂತಿಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಂಬಂಧಿತರು ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆಎಂದು ತಿರುಮೂರ್ತಿಹೇಳಿದ್ದಾರೆ.