Advertisement

ಬಾರದ ತೊಗರಿ ಹಣ; ಕೂಡಿ ಬರುತ್ತಿಲ್ಲ ಕಂಕಣ!

12:11 PM May 25, 2018 | |

ಬೀದರ: ಸರ್ಕಾರ ಬದಲಾದರೂ ತೊಗರಿ ಮಾರಾಟ ಮಾಡಿದ ಹಲವು ರೈತರಿಗೆ ಇನ್ನೂ ಹಣ ಸಿಕ್ಕಿಲ್ಲ. ಬಜೆಟ್‌ ಕೊರತೆ ನೆಪವೊಡ್ಡಿ ಮೂರ್‍ನಾಲ್ಕು ತಿಂಗಳಿಂದ ವಿಳಂಬ ಮಾಡಲಾಗುತ್ತಿದ್ದು, ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರು ತಮ್ಮ ಮಕ್ಕಳ ಮದುವೆ ಸಮಾರಂಭಗಳನ್ನೇ ಮುಂದೂಡುವಂತಾಗಿದೆ.

Advertisement

ವೈಜ್ಞಾನಿಕ ಬೆಲೆ ದೊರೆಯದ ಕಾರಣ ತೊಗರಿ ಕಣಜ ಎಂದೆ ಕರೆಯಿಸಿಕೊಳ್ಳುತ್ತಿದ್ದ ಹೈಕ ಭಾಗದಲ್ಲಿ ಈಗ ರೈತರು ಪರ್ಯಾಯ ಬೆಳೆಯತ್ತ ಮುಖ ಮಾಡುತ್ತಿದ್ದಾರೆ. ತೊಗರಿ ಬೆಳೆಗಾರರಿಗೆ ಅನುಕೂಲವಾಗಲೆಂದು ಸರ್ಕಾರವೇ ಮಧ್ಯ
ಪ್ರವೇಶಿಸಿ ಕಳೆದೆರಡು ವರ್ಷಗಳಿಂದ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದೆ. ಆದರೆ, ನಿಗದಿತ ಸಮಯಕ್ಕೆ ಖರೀದಿಯ ಹಣ ಪಾವತಿ ಮಾಡದಿರುವುದು ರೈತರನ್ನು ಕಂಗಾಲಾಗಿಸಿದೆ.

ಗಡಿ ಜಿಲ್ಲೆ ಬೀದರನಲ್ಲಿ 34,806 ರೈತರಿಂದ ಒಟ್ಟಾರೆ 3.79 ಲಕ್ಷ ಕ್ವಿಂಟಲ್‌ ತೊಗರಿ ಖರೀದಿ ಮಾಡಲಾಗಿದೆ. ಕೇಂದ್ರದ 5,450 ಹಾಗೂ ರಾಜ್ಯ ಸರ್ಕಾರದ 550 ರೂ. ಸಹಾಯಧನ ಸೇರಿ ಕ್ವಿಂಟಲ್‌ಗೆ 6 ಸಾವಿರ ರೂ. ನಿಗದಿ ಮಾಡಲಾಗಿದ್ದು, ಅದರಂತೆ ಜಿಲ್ಲೆಗೆ 226 ಕೋಟಿ ರೂ. ಹಣ ಬರಬೇಕಿದೆ. ಆದರೆ, ಈವರೆಗೆ ಕೇವಲ 26,272 ರೈತರ 181 ಕೋಟಿ ರೂ. ಮಾತ್ರ ಪಾವತಿಯಾಗಿದೆ. ಇನ್ನೂ 77,912 ಕ್ವಿಂಟಲ್‌ ತೊಗರಿಯ 46.74 ಕೋಟಿ ರೂ. ಹಣ ಪಾವತಿ ಮಾಡಬೇಕಿದೆ. ಅನುದಾನದ ಕೊರತೆ, ಮಹಾಮಂಡಳದ ನಿಷ್ಕಾಳಜಿತನದಿಂದ ರೈತರು ತಮ್ಮ ಹಣಕ್ಕಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ನವೆಂಬರ್‌ ಮತ್ತು ಡಿಸೆಂಬರ್‌ ನಲ್ಲಿ ತೊಗರಿಯ ರಾಶಿ ಪ್ರಕ್ರಿಯೆ ನಡೆಸಿದ್ದ ರೈತರು ಜನವರಿಯಲ್ಲಿ ಬೆಳೆದಿದ್ದ ತೊರಿಯನ್ನು ಮಹಾಮಂಡಳಕ್ಕೆ ಮಾರಾಟ ಮಾಡಿದ್ದಾರೆ.

ಹಗಲಿರುಳು ಎನ್ನದೇ ತೊಗರಿ ಖರೀದಿ ಕೇಂದ್ರದ ಮುಂದೆ ಸಾಲಿನಲ್ಲಿ ನಿಂತು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಖರೀದಿ ಮಾಡಿದ 15 ದಿನದಲ್ಲಿ ಹಣ ಪಾವತಿಯಾಗಬೇಕು. ಆದರೆ, ತೊಗರಿ ಖರೀದಿಸಿ ನಾಲ್ಕು ತಿಂಗಳು ಕಳೆದಿದ್ದರೂ ಹಲವರಿಗೆ ಹಣ ನೀಡಿಲ್ಲ. ಈ ಹಣವನ್ನೇ ನಂಬಿಕೊಂಡು ಮಕ್ಕಳ ಮದುವೆ ದಿನ ನಿಗದಿ ಮಾಡಿದವರು ಸಮಾರಂಭವನ್ನೇ ಮುಂದೂಡುವಂಥ ಅನಿವಾರ್ಯತೆಗೆ ಸಿಲುಕಿದ್ದಾರೆ.

Advertisement

ಇನ್ನೊಂದು ವಾರ ಕಳೆದರೆ ಮುಂಗಾರು ಹಂಗಾಮು ಆರಂಭವಾಗಲಿದ್ದು, ಬೀಜ, ಗೊಬ್ಬರ ಖರೀದಿ ಸೇರಿದಂತೆ ಕೃಷಿ ಚಟುವಟಿಕೆಗಾಗಿ ರೈತರ ಬಳಿ ಬಿಡಿಗಾಸು ಇಲ್ಲದಂತಾಗಿದೆ. ಹಣ ಪಾವತಿಗೆ ಸಂಬಂಧಿಸಿದಂತೆ ವಿಚಾರಿಸಿದರೆ ಅಧಿಕಾರಿಗಳು ರೈತರಿಗೆ ಸಮರ್ಪಕ ಮಾಹಿತಿ ನೀಡದೇ ದಬಾಯಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ತೊಗರಿ ಮಾರಿದರೆ ಸಮಯಕ್ಕೆ ಹಣವಾದರೂ ಸಿಗುತ್ತಿತ್ತು. ಆದರೆ, ಈಗ ಕೃಷಿ, ಕುಟುಂಬ ನಿರ್ವಹಣೆಗಾಗಿ ದಲ್ಲಾಳಿಗಳ ಬಳಿ ಸಾಲಕ್ಕಾಗಿ ಕೈ ಚಾಚಬೇಕಾದಂತಹ ಪರಿಸ್ಥಿತಿಗೆ ಸರ್ಕಾರ ರೈತರನ್ನು ದೂಡಿದೆ ಎಂದು ರೈತ ವರ್ಗ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಕಡಲೆ ಹಣವೂ ಬಾಕಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ಬೀದರ ಜಿಲ್ಲೆಯ ರೈತರಿಂದ 1.52 ಲಕ್ಷ
ಕ್ವಿಂಟಲ್‌ ಕಡಲೆಯನ್ನು ಖರೀದಿ ಮಾಡಲಾಗಿದ್ದು, ಮಾರಾಟ ಮಾಡಿದ ರೈತರಿಗೆ ಈಗ ಹಣ ಪಾವತಿಗೆ ಚಾಲನೆ ನೀಡಲಾಗಿದೆ. 66.82 ಕೋಟಿ ರೂ. ಒಟ್ಟಾರೆ ಪಾವತಿ ಮಾಡಬೇಕಾಗಿದೆ. ಅದರಲ್ಲಿ 33.20 ಕೋಟಿ ರೂ.
ಹಣ ಪಾವತಿಗೆ ಈಗ ಚಾಲನೆ ಕೊಡಲಾಗಿದೆ.

ಸಹಕಾರ ಮಾರಾಟ ಮಹಾಮಂಡಳದಿಂದ ತೊಗರಿ ಖರೀದಿಯ ಹಣ ರೈತರಿಗೆ ಪಾವತಿ ಮಾಡಬೇಕಿದ್ದು, ಬಜೆಟ್‌ ಕೊರತೆಯಿಂದ ವಿಳಂಬವಾಗಿದೆ. ಈವರೆಗೆ ಜಿಲ್ಲೆಯ ರೈತರಿಗೆ 181 ಕೋಟಿ ರೂ. ಹಣವನ್ನು ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. ಇನ್ನುಳಿದಂತೆ 77,912 ಕ್ವಿಂಟಲ್‌ ತೊಗರಿಯ 46.74 ಕೋಟಿ ರೂ. ಈ ತಿಂಗಳ ಅಂತ್ಯದಲ್ಲಿ ಪಾವತಿ ಆಗಲಿದೆ. ಕಡಲೆ ಖರೀದಿ ಹಣ ಸಹ ಪಾವತಿಗೆ ಚಾಲನೆ ನೀಡಲಾಗಿದೆ.
 ಪ್ರಭಾಕರ ಎನ್‌., ಜಿಲ್ಲಾ ವ್ಯವಸ್ಥಾಪಕರು, ರಾಜ್ಯ ಸಹಕಾರ ಮಾರಾಟ ಮಹಾಮಂಡಳ

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next