Advertisement

ಟರ್ಫ್ ಕ್ಲಬ್‌ ಆರ್‌ಟಿಐ ವ್ಯಾಪ್ತಿಗೆ: ಹೈಕೋರ್ಟ್ ತೀರ್ಪು

10:34 AM Jan 17, 2021 | Team Udayavani |

ಬೆಂಗಳೂರು: ನಗರದ ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್‌ ಸೇರಿದಂತೆ ಸರ್ಕಾರಿ ಭೂಮಿಯನ್ನು ರಿಯಾಯಿತಿ ದರದಲ್ಲಿ ಗುತ್ತಿಗೆ ಪಡೆದಿರುವ ಕ್ಲಬ್‌ ಮತ್ತು ಸಂಸ್ಥೆಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

Advertisement

ಕ್ಲಬ್‌ಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಕೋರಿರುವ ಮಾಹಿತಿ ನೀಡಲು ಆದೇಶಿಸಿದ್ದ ರಾಜ್ಯ ಮಾಹಿತಿ ಆಯೋಗದ ಕ್ರಮ ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್, ಲೇಡಿಸ್‌ ಕ್ಲಬ್‌ ಮತ್ತು ಇನ್ಸ್ಟಿಟ್ಯೂಟ್‌ ಆಫ್ ಎಂಜಿನಿಯರ್‌ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಪಿ.ಬಿ ಭಜಂತ್ರಿ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಸರ್ಕಾರ ಈ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಭೂಮಿ ಗುತ್ತಿಗೆ ನೀಡಿದೆ. ಸರ್ಕಾರಿ ಭೂಮಿ ಸಾರ್ವಜನಿಕರ ಭೂಮಿ ಇದ್ದಂತೆ.
ಇಂತಹ ಭೂಮಿಯನ್ನು ಸರ್ಕಾರ ಮಾರುಕಟ್ಟೆ ಮೌಲ್ಯಕ್ಕಿಂತ ಸಾಕಷ್ಟು ಕಡಿಮೆ ಬಾಡಿಗೆಗೆ ಗುತ್ತಿಗೆ ನೀಡಿದೆ. ಈ ಮೂಲಕ
ಪರೋಕ್ಷವಾಗಿ ರಿಯಾಯಿತಿ ನೀಡಿದ್ದು, ಭೂಮಿ ಗುತ್ತಿಗೆ ಪಡೆದವರು ಜನರಿಗೆ ಉತ್ತರದಾಯಿ ಯಾಗುತ್ತಾರೆ. ಹೀಗಾಗಿ ಈ ಸಂಸ್ಥೆಗಳನ್ನು ಸಾರ್ವಜನಿಕ ಪ್ರಾಧಿಕಾರಗಳಂತೆ ಪರಿಗಣಿಸಬಹುದಾಗಿದೆ. ಅದರಂತೆ ಸಾರ್ವಜನಿಕರು ಆರ್‌ಟಿಐ ಕಾಯ್ದೆಯಡಿ ಮಾಹಿತಿ ಪಡೆಯಬಹುದು ಎಂದು ಆದೇಶಿಸಿದೆ. ಈ ಮೂಲಕ ಮಾಹಿತಿ ನೀಡುವಂತೆ ಆದೇಶಿಸಿದ್ದ ಮಾಹಿತಿ ಆಯೋಗದ ಆದೇಶವನ್ನು ಎತ್ತಿ ಹಿಡಿದಿದೆ.

ಇದನ್ನೂ ಓದಿ:ರಾಮನಗರದ ಆಟೋ ಚಾಲಕನ ಅಂತ್ಯಸಂಸ್ಕಾರಕ್ಕೆ ಕುಮಾರಸ್ವಾಮಿ, ನಿಖಿಲ್

ನಗರದ ವಕೀಲ ಉಮಾಪತಿ ಹಾಗೂ ಡಾ. ಕುದೂರು ವೆಂಕಟೇಶ್‌ ಎಂಬುವರು ಬೆಂಗಳೂರು ಟರ್ಫ್ ಕ್ಲಬ್, ಮೈಸೂರು
ಟರ್ಫ್ ಕ್ಲಬ್, ಲೇಡಿಸ್‌ ಕ್ಲಬ್‌ ಹಾಗೂ ಇನ್ಸ್ಟಿಟ್ಯೂಟ್‌ ಆಪ್‌ ಎಂಜಿನೀಯರ್‌ ಸಂಸ್ಥೆಗಳಿಂದ ಕೆಲ ಮಾಹಿತಿ ಕೋರಿ 2012ರಲ್ಲಿ
ಅರ್ಜಿ ಸಲ್ಲಿಸಿದ್ದರು. ಆದರೆ, ಸಂಸ್ಥೆಗಳು ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ರಾಜ್ಯ ಮಾಹಿತಿ
ಆಯೋಗಕ್ಕೆ 2013ರಲ್ಲಿ ದೂರು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ರಾಜ್ಯ ಮಾಹಿತಿ ಆಯೋಗ 2013ರ ಜುಲೈ 1ರಂದು
ಮಾಹಿತಿ ನೀಡುವಂತೆ ಸಂಸ್ಥೆಗಳಿಗೆ ಆದೇಶಿಸಿತ್ತು. ಮಾಹಿತಿ ಆಯೋಗದ ಈ ಆದೇಶ ಪ್ರಶ್ನಿಸಿ ಅರ್ಜಿದಾರ ಸಂಸ್ಥೆಗಳು ನಾವು ಸಾರ್ವಜನಿಕ ಪ್ರಾಧಿಕಾರಗಳಲ್ಲ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆ-2005ರ ಸೆಕ್ಷನ್‌ 2(ಎಚ್‌) ಅಡಿ ಮಾಹಿತಿ ನೀಡುವ ಭಾದ್ಯತೆ ಹೊಂದಿಲ್ಲ ಎಂದು ವಾದಿಸಿದ್ದವು. ವಾದ ಅಲ್ಲಗಳೆದಿರುವ ನ್ಯಾಯಪೀಠ, ಸಾರ್ವಜನಿಕ ಭೂಮಿಯನ್ನು ರಿಯಾಯಿತಿ ದರದಲ್ಲಿ ಪಡೆದಿರುವ ಸಂಸ್ಥೆಗಳು ಜನರಿಗೆ ಉತ್ತರದಾಯಿಗಳಾಗಿದ್ದು, ಮಾಹಿತಿ ನೀಡುವ ಉತ್ತರದಾಯಿತ್ವವನ್ನು ಹೊಂದಿವೆ. ಆದ್ದರಿಂದ ಅರ್ಜಿದಾರರು ಕೋರಿದ ಮಾಹಿತಿ ನೀಡ ಬೇಕು ಎಂದು ಆದೇಶಿಸಿ, ಅರ್ಜಿ ವಜಾ ಮಾಡಿ ಆದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next