ಕೆಜಿಎಫ್: ನಗರದ ಕುವೆಂಪು ಬಸ್ ನಿಲ್ದಾಣದ ದ್ವಾರಬಾಗಿಲ ಮೇಲೆ ತಮಿಳಿನಲ್ಲಿ ಬರೆಯಲಾಗಿದ್ದ ನಾಮಫಲಕಕ್ಕೆ ಕನ್ನಡ ಚಳವಳಿ ವಾಟಾಳ್ ಪಕ್ಷದಅಧ್ಯಕ್ಷ ನಾಗರಾಜ್ ಕಪ್ಪು ಮಸಿ ಬಳಿದಿದ್ದನ್ನು ತಮಿಳು ಸಂಘ ವಿರೋಧಿಸಿದ್ದ ರಿಂದ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.
ಭಾನುವಾರ ನಗರದ ತಮಿಳು ಸಂಘದ ಪದಾಧಿಕಾರಿಗಳು ಸಭೆ ನಡೆಸಿ ವಾಟಾಳ್ ನಾಗರಾಜ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮರಳಿ ತಮಿಳು ಭಾಷೆಯಲ್ಲಿ ಬರೆಯಬೇಕು ಎಂದು ನಗರಸಭೆ ಅಧ್ಯಕ್ಷರಿಗೆ ಹಾಗೂ ಪೌರಾಯುಕ್ತರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವಕ್ಕಳ್ ಮುನಿಸ್ವಾಮಿ ನಗರಸಭೆ ಸದಸ್ಯರು, ತಮಿಳು, ಕನ್ನಡ ಸಂಘದ ಪದಾಧಿಕಾರಿಗಳ ವಿಶೇಷ ಸಭೆ ನಡೆಸಿದರು.
ಈ ಸಭೆಯಲ್ಲಿ ಮಾಜಿ ಶಾಸಕ ಎಸ್. ರಾಜೇಂದ್ರನ್ ಮಾತನಾಡಿ, ಕೆಜಿಎಫ್ ನಗರದಲ್ಲಿ ಕನ್ನಡ ಹಾಗೂ ತಮಿಳು ಭಾಷೆ ಮಾತನಾಡುವವರು ಅಣ್ಣ ತಮ್ಮಂದಿರಂತೆ ಇದ್ದೇವೆ. ಆದರೆ, ವಾಟಾಳ್‌ನಾಗರಾಜ್ ಕೆಜಿಎಫ್ ನಗರಕ್ಕೆ ಆಗಮಿಸಿ ಸಾಮರಸ್ಯವನ್ನು ಕದಡುವ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಶಾಸಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು ದೂರು ನೀಡಲಿ: ನಗರಸಭೆ ಮಾಜಿ ಅಧ್ಯಕ್ಷ ರಮೇಶ್‌ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವಾಟಾಳ್ ನಾಗರಾಜ್ ಅವರ ಪ್ರಚಾರ ಕಳೆಗುಂದಿದ್ದು, ಅವರ ವರ್ಚಸ್ಸು ವೃದ್ಧಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಜಿಎಫ್ ನಗರಕ್ಕೆ ಆಗಮಿಸಿ, ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ನಗರಸಭೆ ಅಧಿಕಾರಿಗಳು ದೂರು ನೀಡಬೇಕು ಎಂದು ಆಗ್ರಹಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾಜಿ ಜಯಪಾಲ್‌ಮಾತನಾಡಿ,ಕೆಜಿಎಫ್ನಗರದಲ್ಲಿ ಯಾವುದೇ ತಂಟೆ ತಕರಾರು ಇಲ್ಲದೆ ಅಣ್ಣ ತಮ್ಮಂದಿರಂತೆಜೀವನನಡೆಸುತ್ತಿದ್ದೇವೆ.
ಇಂತಹ ಸಂದರ್ಭದಲ್ಲಿ ಕನ್ನಡ ತಮಿಳರ ಮಧ್ಯೆ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡಿದ್ದು ಅಕ್ಷಮ್ಯ ಅಪರಾಧವಾಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಸಭೆಯಲ್ಲಿ ಆಶ್ವಾಸನೆ ನೀಡಿ, ಸಂಜೆ ನಗರಸಭೆ ಬಸ್ ನಿಲ್ದಾಣದ ಮೇಲೆ ತಮಿಳು ನಾಮಫಲಕ ಕುವೆಂಪು ಬಸ್ ನಿಲ್ದಾಣ ಎಂದು ಬರೆಯಿಸಿದ ನಂತರ ಹರ್ಷಗೊಂಡ ತಮಿಳರು ವಳ್ಳಲ್ ಮುನಿಸ್ವಾಮಿಗೆ ಜೈಕಾರ ಹಾಕಿದರು.