ಅಳಂದ: ತಾಲೂಕಿನ ಗಡಿಭಾಗದ ಆಳಂಗಾ ಮತ್ತು ತಡೋಳಾ ಗ್ರಾಮದ ರೈತರು ಬೆಳದ ತೊಗರಿ ಖರೀದಿ ಕೇಂದ್ರಗಳಲ್ಲಿ ಖರೀದಿ ಮಾಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಅಖೀಲ ಭಾರತ ಕಿಸಾನ ಸಭಾ ತಾಲೂಕು ಘಟಕ ಮತ್ತು ಕೆಪಿಸಿಸಿ ಕಿಸಾನ ಘಟಕದ ಮುಖಂಡರು ಪಟ್ಟಣದತಹಶೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಎರಡು ಗ್ರಾಮಗಳಿಗೆ ಸಂಬಂಧಿಸಿದ ತೊಗರಿಯನ್ನು ಕೂಡಲೇ ಖರೀದಿಸಿ ರೈತರಿಗೆ ಅನುಕೂಲ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇನ್ನುಳಿದ ಕೆಲ ಗ್ರಾಮದ ತೊಗರಿ ಖರೀದಿ ಕೇಂದ್ರಗಳಲ್ಲಿ ಸರಣಿಯಂತೆ ಖರೀದಿಸದೆ ರೈತರಿಗೆ ತೊಂದರೆ ನೀಡಲಾಗುತ್ತಿದೆ.
ಸಂಬಂಧಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬಿ.ಆರ್. ಪಾಟೀಲ ಸೂಕ್ತ ಕ್ರಮ ತೆಗೆದುಕೊಂಡು ರೈತರ ತೊಗರಿ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ಹಾಜರಿದ್ದ ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಅವರಿಗೆ ಸೂಚಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರು ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದು ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಕಿಸಾನ ಸಘಟಕದ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ,
ಕೆಡಿಪಿ ಮಾಜಿ ಸದಸ್ಯ ವಿಠuಲ ಶಿಂಧೆ, ಕೆಪಿಸಿಸಿ ಕಿಸಾನ ಘಟಕದ ಜಿಲ್ಲಾ ಕಾರ್ಯಕದರ್ಶಿ ರವೀಂದ್ರ ಪಾಟೀಲ, ಬಾಲಚಂದ್ರ ಸೂರ್ಯವಂಶಿ, ಖಂಡಪ್ಪ ಬೆಳ್ಳೆ, ಆಳಂಗಾ ಗ್ರಾಪಂ ಅಧ್ಯಕ್ಷ ಪ್ರತಾಪ ಕುಲಕರ್ಣಿ, ದಯಾನಂದ ಶೇರಿಕಾರ ಇದ್ದರು.