ಬೆಂಗಳೂರು: ತೊಗರಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೋರಲು ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಶೀಘ್ರ “ತಜ್ಞರ ನಿಯೋಗ’ ಕೊಂಡೊಯ್ಯಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಮಾರುತಿ ಮಾನ್ಪಡೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಕುಸಿತದಿಂದ ತೊಗರಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ರೈತರ ಸಂಕಷ್ಟ ನಿವಾರಣೆಗಾಗಿ ತೊಗರಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ವಿಶೇಷ ಸಾಲ ಸೌಲಭ್ಯ ನೀಡುವಂತೆ ಪ್ರಧಾನಿ ಅವರ ಮೇಲೆ ನಿಯೋಗದ ಮೂಲಕ ರಾಜ್ಯ ಸರ್ಕಾರ ಒತ್ತಡ ತರಬೇಕು.
ಅದೇ ರೀತಿ ತೊಗರಿ ಬೆಳೆಗಾರರ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ ವಿದೇಶದಿಂದ ತೊಗರಿಬೇಳೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ತೊಗರಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ಬಗ್ಗೆ ಇತ್ತೀಚೆಗೆ ಕಲುಬುರ್ಗಿಯಲ್ಲಿ ನಡೆದ ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ನಿರ್ಣಯಗಳ ಜಾರಿಗಾಗಿ ರಸ್ತೆ ರೋಕ್ ಚಳವಳಿ ಕೂಡ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೂ, ಸರ್ಕಾರ ಗಮನ ಹರಿಸಿಲ್ಲ ಎಂದು ದೂರಿದರು. ಪ್ರಸ್ತುತ ರಾಜ್ಯದ ರೈತರ ಬಳಿ ಇರುವ ಸುಮಾರು 7 ಲಕ್ಷ ಟನ್ ತೊಗರಿಬೇಳೆಯನ್ನು ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡಿ ಖರೀದಿಸಬೇಕು.
ಇಲ್ಲದಿದ್ದರೆ ರೈತರು ತಮ್ಮ ಹೋರಾಟವನ್ನು ದೆಹಲಿವರೆಗೂ ವಿಸ್ತರಿಸಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ತೊಗರಿ ಬೆಳೆಗಾರರ ಸಂಕಷ್ಟ ಪರಿಹಾರಕ್ಕಾಗಿ ಕೇಂದ್ರಕ್ಕೆ ತಜ್ಞರ ನಿಯೋಗ ಕಳುಹಿಸಬೇಕು. ರಾಜ್ಯ ಸರ್ಕಾರ ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ರೈತರು ಬೆಳೆದ ತೊಗರಿಬೇಳೆಗೆ 7500 ರೂ. ಕನಿಷ್ಠ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.