ಹೊಳಲ್ಕೆರೆ: ತಾಲೂಕಿನ ತುಪ್ಪದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಜಿಪಂ ಅಧ್ಯಕ್ಷರಿಗೆಮನವಿ ಸಲ್ಲಿಸಿದರು. ನಮ್ಮ ಊರಿನಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲ, ಎಲ್ಲೆಡೆ ದುರ್ವಾಸನೆ.ರಸ್ತೆಗಳು ಕಿತ್ತು ಹೋಗಿವೆ, ಚರಂಡಿ ಸ್ವಚ್ಛಗೊಳಿಸುವಂತೆ ಪಿಡಿಒಗೆ ಮನವಿ ಮಾಡಿದರೆ ನಮ್ಮ ಮೇಲೆಯೇ ದೌರ್ಜನ್ಯ ಮಾಡುವುದು, ಪೊಲೀಸರನ್ನು ಕರೆಸಿ ಹೆದರಿಸುವುದು ಮಾಡುತ್ತಾರೆ ಎಂದು ಪಿಡಿಒ ವಿರುದ್ಧ ಆರೋಪಗಳ ಸುರಿಮಳೆಗೈದರು.
ಬಸ್ ನಿಲ್ದಾಣದ ಮುಖ್ಯ ರಸ್ತೆಯ ಚರಂಡಿಯಲ್ಲಿ ತ್ಯಾಜ್ಯ ತುಂಬಿದೆ.ಮಳೆಗಾಲವಾಗಿದ್ದು ಚರಂಡಿ ನೀರು ರಸ್ತೆ ಮೇಲೆ ಹರಿದು ಮನೆಯೊಳಗೆ ನುಗ್ಗುತ್ತದೆ. ಇಲ್ಲಿನ ಪಿಡಿಒ ಯಾವುದೇ ಕೆಲಸ ಮಾಡುತ್ತಿಲ್ಲ. ಗ್ರಾಮಕ್ಕೂ ಬರುತ್ತಿಲ್ಲ. ದೂರು ಸಲ್ಲಿಸಿದರೂಕ್ರಮ ಕೈಗೊಳ್ಳುವುದಿಲ್ಲ. ಆದ್ದರಿಂದ ಇವರ ವಿರುದ್ಧ ಕ್ರಮ ಕೈಗೊಂಡುವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಕೋರಿದರು.
ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸದ ಪಿಡಿಒ ಕೆಲಸ ಬಿಟ್ಟು ಹೊಗಬೇಕು. ಜನರಿಲ್ಲದೆ ಹಳ್ಳಿಗಳಿಲ್ಲ. ಜನರ ಬವಣೆಗಳಿಗೆ ಸ್ಪಂದಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಳಿಕ ದಾಖಲೆಗಳನ್ನು ಪರಿಶೀಲಿಸಿದರು.
ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಎಲ್ಲಿ ನಡೆಯುತ್ತಿವೆ, ಎಷ್ಟು ಮಾನವ ದಿನಗಳನ್ನು ಸೃಜಿಸಲಾಗಿದೆ, ಬದು ನಿರ್ಮಾಣ ಯಾರ ಜಮೀನಿನಲ್ಲಿ ನಡೆಯುತ್ತಿದೆ ಎಂಬ ಮಾಹಿತಿಯೇ ಕಡತದಲ್ಲಿಲ್ಲ. ಫಲಾನುಭವಿಗಳ ಸಹಿಯೂ ಇಲ್ಲ. ಕಾರ್ಮಿಕರ ಖಾತೆಗೆ ಮೂರ್‍ನಾಲ್ಕು ವಾರದ ಕೂಲಿ ಹಣ ಜಮಾ ಆಗಿದೆ. ಕಡತಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಪ್ರಕಾಶ್, ಸದಸ್ಯ ಕೆ.ಸಿ. ಮಹೇಶ್ವರಪ್ಪ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ತ್ರಿವೇಣಿ ಶಿವಪ್ರಸಾದ್ ಗೌಡ, ಸದಸ್ಯೆ ಜಯಪ್ರತಿಭಾ ನವೀನ್ ಇದ್ದರು.