Advertisement
ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಧನ್ವಂತರಿ ರಸ್ತೆ ಬಳಿಯಿಂದ ಆರಂಭವಾಗುವ ಪಾದಚಾರಿ ಸುರಂಗ ಮಾರ್ಗ ಹಾಗೂ ನಗರ ರೈಲು ನಿಲ್ದಾಣದ ಬಳಿಯಿರುವ ಸುರಂಗ ಮಾರ್ಗಗಳು ಅವ್ಯವಸ್ಥೆಯ ಆಗರವೆನಿಸಿವೆ. ಅನೈರ್ಮಲ್ಯ, ಬೀದಿ ವ್ಯಾಪಾರಿಗಳ ಹಾವಳಿಯಿಂದ ಜನರು ನೆಮ್ಮದಿಯಾಗಿ ನಡೆದಾಡಲು ಸಾಧ್ಯವಾಗದ ಸ್ಥಿತಿಯಿದೆ.
Related Articles
Advertisement
ಅಪಾಯಕಾರಿ ಜಂಪಿಂಗ್: ಸುರಂಗ ಮಾರ್ಗದ ಅವ್ಯವಸ್ಥೆಗೆ ಬೇಸತ್ತ ಪಾದಚಾರಿಗಳು ಪ್ರಮುಖ ನಿಲ್ದಾಣಗಳಿಗೆ ಹೋಗಲು ನಾಲ್ಕೈದು ಅಡಿ ಎತ್ತರದ ಉಕ್ಕಿನ ವಿಭಜಕ ಹತ್ತಿ ಇಳಿಯುತ್ತಾರೆ. ಯುವಕರು, ವಯಸ್ಕರು ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳು ಸಹ ವಿಭಜಕ ಜಿಗಿದು ರಸ್ತೆ ದಾಟುತ್ತಿದ್ದಾರೆ. ಇದರಿಂದಾಗಿ ಹಲವು ಬಾರಿ ಅಪಘಾತ ಸಂಭವಿಸಿವೆ. ಶಾಂತಲಾ ಸಿಲ್ಕ್ಹೌಸ್, ಓಕಳಿಪುರ ಕಡೆಯಿಂದ ವೇಗವಾಗಿ ಬರುವ ವಾಹನಗಳಿಗೆ ದಿಢೀರ್ ಜನರು ಅಡ್ಡಬರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಅನೈರ್ಮಲ್ಯ ವಾತಾವರಣ: ಸ್ಥಳೀಯ ಸಂಸ್ಥೆಗಳು ಪಾದಚಾರಿ ಸುರಂಗಗಳ ನಿರ್ವಹಣೆ ಮಾಡದ ಕಾರಣ, ಹಗಲು ಕತ್ತಲೆ, ರಾತ್ರಿಯೂ ಕತ್ತಲೆ ಎಂಬ ಸ್ಥಿತಿಯಿದೆ. ಬಹುತೇಕ ಕಡೆ ಬಲ್ಬ್ಗಳು ನಿಷ್ಕ್ರಿಯಗೊಂಡಿವೆ. ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯಿಲ್ಲ. ಜತೆಗೆ ಸುರಂಗ ಮಾರ್ಗದ ಗೋಡೆಗಳು ಪಾನ್ ಉಗುಳಿನಿಂದ ವಿಕಾರವಾಗಿವೆ.
ಬೀದಿ ವ್ಯಾಪಾರಿಗಳ ಹಾವಳಿ: ಮೆಜೆಸ್ಟಿಕ್‌ನ ಪಾದಚಾರಿ ಸುರಂಗ ಮಾರ್ಗದ ಎರಡೂ ಬದಿಗಳಲ್ಲಿ ಬಟ್ಟೆ, ಗೃಹ ಬಳಕೆ ವಸ್ತು, ಅಲಂಕಾರಿಕ ವಸ್ತುಗಳು, ಆಟಿಕೆ ಇನ್ನಿತರ ವಸ್ತುಗಳ ಮಾರಾಟ ಮಾಡುವುದರಿಂದ ಪಾದಚಾರಿಗಳು ಓಡಾಡಲು ಸ್ಥಳವೇ ಇಲ್ಲದಂತಾಗಿದೆ. ಮತ್ತೂಂದೆಡೆ ಕೆಲ ವ್ಯಾಪಾರಿಗಳು ಉತ್ಪನ್ನಗಳನ್ನು ಖರೀದಿಸುವಂತೆ ಪ್ರಯಾಣಿಕರ ದುಂಬಾಲು ಬೀಳುವುದು ಕಿರಿಕಿರಿ ಉಂಟುಮಾಡುತ್ತದೆ.
ಸ್ವಚ್ಛತೆಗೆ ಕ್ರಮ ಕೈಗೊಳ್ಳುವರೇ ಮೇಯರ್?: ನಗರದ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ತಿಳಿಸಿರುವ ಮೇಯರ್ ಗಂಗಾಂಬಿಕೆ, ಈಗಾಗಲೇ ಕೆ.ಆರ್.ಮಾರುಕಟ್ಟೆಯ ಪಾದಚಾರಿ ಸುರಂಗ ಮಾರ್ಗ ಪರಿಶೀಲಿಸಿ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದಾರೆ. ಅದೇ ಮಾದರಿಯಲ್ಲಿ ನಗರದ ಹೃದಯ ಭಾಗದಲ್ಲಿರುವ ಈ ಪಾದಚಾರಿ ಸುರಂಗ ಮಾರ್ಗದ ಅವ್ಯವಸ್ಥೆಗಳಿಗೂ ಪರಿಹಾರ ಕಲ್ಪಿಸವರೇ ಎಂದು ಕಾದು ನೋಡಬೇಕಾಗಿದೆ.
ಪಬ್ಲಿಕ್ ಅಪೀಲ್: ರಾಜಧಾನಿಯಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ “ಮೆಟ್ರೋ ಫೋಕಸ್’ ಮೂಲಕ ಸ್ಥಳೀಯ ಸಂಸ್ಥೆಗಳ ಗಮನಕ್ಕೆ ತಂದು, ಪರಿಹಾರ ಕಲ್ಪಿಸುವ ಪ್ರಯತ್ನ “ಉಯದವಾಣಿ’ಯದ್ದು. ಈ ಹಿನ್ನೆಲೆಯಲ್ಲಿ, ತಮ್ಮ ಹೊಣೆ ನಿರ್ವಹಿಸುವಲ್ಲಿ ಸ್ಥಳೀಯ ಸಂಸ್ಥೆಗಳು ವಿಫಲವಾಗಿರುವುದು, ಎಷ್ಟೇ ದೂರು ಕೊಟ್ಟರೂ ತಿರುಗಿ ನೋಡದಿರುವುದು, ಕಾಮಗಾರಿ ಪೂರ್ಣಗೊಳಿಸದಿರುವುದು ಸೇರಿ ಪರಿಹಾರ ದೊರೆಯದ ಯಾವುದೇ ಸಮಸ್ಯೆ ನಿಮ್ಮ ಸುತ್ತ ಇದ್ದರೆ ನೀವೂ ನಮಗೆ ತಿಳಿಸಬಹುದು.
ವಾಟ್ಸ್‌ಆ್ಯಪ್: 88611 96369ಇ-ಮೇಲ್: uvreporting@udayavani.com * ವೆಂ.ಸುನೀಲ್‌ಕುಮಾರ್