Advertisement

ತುಂಗಭದ್ರಾ ಜಲಾಶಯ ಹೂಳು ತೆರವು ಅಸಾಧ್ಯ

04:57 PM Feb 19, 2018 | Team Udayavani |

ಸಿಂಧನೂರು: ತುಂಗಭದ್ರಾ ಜಲಾಶಯದಲ್ಲಿ 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದೆ. ಅದರಲ್ಲಿ 33 ಟಿಎಂಸಿ ಅಡಿ ಹೂಳು ತುಂಬಿದೆ. ಹೂಳು ತೆಗೆಯಲು ಅಸಾಧ್ಯವಾಗಿರುವುದರಿಂದ ಅದರ ಪರ್ಯಾಯವಾಗಿ ಸಮಾನಾಂತರ ನವಲಿ ಜಲಾಶಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ರವಿವಾರ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 765 ಕೋಟಿ ರೂ. ವೆಚ್ಚದ 1,527 ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಡಿಎಪಿಆರ್‌ ಕೂಡ ಮಾಡಲಾಗಿದೆ. ಇದಕ್ಕೆ 5ರಿಂದ 6ಸಾವಿರ ಕೋಟಿ ರೂಪಾಯಿ ಖರ್ಚಾಗುವುದು ಎಂದರು. 

ಸ್ತ್ರೀ ಶಕ್ತಿ ಗುಂಪುಗಳಿಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಸಿಂಧನೂರು ತಾಲೂಕಿನಲ್ಲಿ 150 ಸ್ತ್ರೀ ಶಕ್ತಿ ಗುಂಪುಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗಿದೆ ಎಂದು ಹೇಳಿದರು. 

ಶಾಸಕ ಹಂಪನಗೌಡ ಬಾದರ್ಲಿ ಪ್ರಾಸ್ತಾವಿಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ನಿರೀಕ್ಷೆಗೆ ಮೀರಿ ಅನುದಾನ ನೀಡಿದ್ದಾರೆ. ಆ ಅನುದಾನದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ. ಶೇ.65ರಷ್ಟು ಕಾಮಗಾರಿಗಳು ಮುಗಿದಿದ್ದು ಇನ್ನೂ ಶೇ.35ರಷ್ಟು ಬಾಕಿ ಇವೆ ಎಂದರು.
 
ನಗರದ ಜನತೆಗೆ ನಿರಂತರ ಶುದ್ಧ ಕುಡಿಯುವ ನೀರಿನ ಯೋಜನೆಯಡಿ 6500 ಮನೆಗಳಿಗೆ ದಿನ ಬಿಟ್ಟು ದಿನ ನೀರು ಪೂರೈಸಲಾಗುವುದು. ಮೂರು ತಿಂಗಳ ನಂತರ ಇನ್ನುಳಿದ ಮನೆಗಳು ಸೇರಿದಂತೆ ಒಟ್ಟು 13 ಸಾವಿರ ಮನೆಗಳಿಗೆ ನಿರಂತರ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದರು.

ಸಾರಿಗೆ ಇಲಾಖೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಂ. ರೇವಣ್ಣ ಮಾತನಾಡಿದರು. ಆರೋಗ್ಯ
ಇಲಾಖೆ ಸಚಿವ ರಮೇಶ ಕುಮಾರ, ಸಂಸದ ಬಿ.ವಿ. ನಾಯಕ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಶಾಸಕರಾದ ಹಂಪಯ್ಯ ನಾಯಕ, ಪ್ರತಾಪಗೌಡ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯರಾದ ಎನ್‌.ಎಸ್‌. ಬೋಸರಾಜು, ಬಸವರಾಜ ಪಾಟೀಲ್‌ ಇಟಗಿ, ಶರಣಪ್ಪ ಮಟ್ಟೂರು, ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ್‌, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕಾಳಿಂಗಪ್ಪ ವಕೀಲ, ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ವಸಂತಕುಮಾರ್‌, ಜಿಲ್ಲಾ ಧಿಕಾರಿ ಗೌತಮ್‌ ಬಗಾದಿ, ಜಿಪಂ ಸಿಇಒ ಅಭಿರಾಂ ಜಿ. ಶಂಕರ್‌, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

Advertisement

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಕೇತಿಕವಾಗಿ ಸ್ತ್ರೀ ಶಕ್ತಿ ಗುಂಪುಗಳಿಗೆ ಸುತ್ತು ನಿಧಿ , ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ನಗರಸಭೆಯಿಂದ ವಸತಿ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು. 

ರಾಜ್ಯದ ಎಲ್ಲ ಶಾಲಾ-ಕಾಲೇಜುಗಳ ಹೆಣ್ಣು ಮಕ್ಕಳ ಶಿಕ್ಷಣದ ಸಂಪೂರ್ಣ ಶುಲ್ಕವನ್ನು ಸರ್ಕಾರವೇ ಭರಿಸಲಿದೆ.
ಹೆಣ್ಣೊಂದು ಕಲಿತರೆ ಕುಟುಂಬವೇ ಶಿಕ್ಷಣ ಕಲಿತಂತೆ. ನೂರಕ್ಕೆ ನೂರರಷ್ಟು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ. ಹೆಣ್ಣು ಸಮಾಜದ ಕಣ್ಣಾಗಿದ್ದು, ಮಗುವಿನ ಎಲ್ಲ ಆಗು ಹೋಗುಗಳನ್ನು ನೋಡಿಕೊಳ್ಳುವವಳೇ ಮಹಿಳೆ. ಆದ್ದರಿಂದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ. 
 ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next