Advertisement
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ವಿವಿಧ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯ ನಿರ್ಮಾಣಗೊಂಡು ಏಳು ದಶಕಗಳೇ ಕಳೆದಿವೆ. ಜಲಾಶಯದಲ್ಲಿ ಹೂಳು ಹೆಚ್ಚುತ್ತಿದ್ದು, ನಿಗದಿತ ಪ್ರಮಾಣದ ನೀರು ಸಂಗ್ರಹವಿಲ್ಲದೆ ಪ್ರತಿವರ್ಷ ಬೇಸಗೆ ವೇಳೆ ನೀರಿನ ತೀವ್ರ ಕೊರತೆ ಎದುರಿಸುವಂತಾಗಿದ್ದು, ಎರಡನೇ ಬೆಳೆಗೆ ನೀರಿಗಾಗಿ ಪ್ರತೀ ವರ್ಷವೂ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎನ್ನುವಂತಾಗಿದೆ.
Related Articles
Advertisement
ಸಮಾನಾಂತರ ಜಲಾಶಯ ಮಂತ್ರಪಠಣ: ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಕುಸಿತವಾಗುತ್ತಿದ್ದರಿಂದ ಆಂಧ್ರದ ಮುಖ್ಯಮಂತ್ರಿ ಯಾಗಿದ್ದ ಎನ್.ಟಿ.ರಾಮರಾವ್ 80ರ ದಶಕದಲ್ಲಿಯೇ ಫಡ್‌ಫ್ಲೋ ಕೆನಾಲ್ ಪ್ರಸ್ತಾವ ಮಾಡಿದ್ದರಾದರೂ ಅಂದಿನ ರಾಜ್ಯ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮುಂದೆ ನೀರಿನ ಬೇಡಿಕೆ ಸರಿದೂಗಿಸಲು ಸಮಾನಾಂತರ ಜಲಾಶಯ ಚಿಂತನೆ ಮೊಳಕೆಯೊಡೆದಿತ್ತು. ಕಳೆದ ಒಂದೂವರೆ ದಶಕಗಳಿಂದಲೂ ಇದು ಸುದ್ದಿಯಲ್ಲಿದೆಯಾದರೂ ಇಂದಿಗೂ ಅದು ಸಾಕಾರ ರೂಪ ಪಡೆದುಕೊಂಡಿಲ್ಲ.
ಕೊಪ್ಪಳ ಜಿಲ್ಲೆ ನವಲಿ ಬಳಿ ಸುಮಾರು 18 ಸಾವಿರ ಎಕ್ರೆ ಪ್ರದೇಶದಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಸುಮಾರು 32 ಟಿಎಂಸಿ ಅಡಿಯಷ್ಟು ಹೂಳು ತುಂಬಿದ್ದು, ನೀರು ಸಂಗ್ರಹ ಕೊರತೆ ಸರಿದೂಗಿಸಲು ಸುಮಾರು 35 ಟಿಎಂಸಿ ಅಡಿ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಯೋಜಿಸಲಾಗಿದೆ. ವಿಸ್ತೃತ ಯೋಜನಾ ವರದಿಗೆ ಸಂಪುಟ ಒಪ್ಪಿಗೆ ನೀಡಿದೆಯಾದರೂ ನಿರೀಕ್ಷಿತ ಕಾರ್ಯ ಆಗುತ್ತಿಲ್ಲ. ಇದರ ನಡುವೆ ಆಂಧ್ರ-ತೆಲಂಗಾಣ ರಾಜ್ಯಗಳು ಸಮಾನಾಂತರ ಜಲಾಶಯಕ್ಕೆ ವಿರೋಧ ತೋರುತ್ತಿದ್ದು, ಪರ್ಯಾಯ ಕಾಲುವೆಗಳ ನಿರ್ಮಾಣಕ್ಕೆ ಆಗ್ರಹಿಸುತ್ತಿವೆ.
ಸಮಾನಾಂತರ ಜಲಾಶಯ ನಿರ್ಮಾಣ ನಿಟ್ಟಿನಲ್ಲಿ ಆಂಧ್ರ-ತೆಲಂಗಾಣ ರಾಜ್ಯಗಳ ಮನವೊ ಲಿಕೆ, ಯೋಜನೆ ಅನುಷ್ಠಾನದ ಇಚ್ಛಾಶಕ್ತಿ-ಬದ್ಧತೆ ತೋರದ ಸರಕಾರಗಳು, ರಾಜಕೀಯ ಪಕ್ಷಗಳು ಚುನಾವಣೆ ಬಂದಾಗಲೊಮ್ಮೆ ತಮ್ಮ ಸರಕಾರ ಬಂದರೆ ಸಮಾನಾಂತರ ಜಲಾಶಯಕ್ಕೆ ಒತ್ತು ನೀಡುತ್ತೇವೆ ಎಂದು ಅಬ್ಬರಿಸುತ್ತವೆ. ಅಧಿಕಾರಕ್ಕೇ ರಿದ ಅನಂತರ ಮರೆತು ಮತ್ತೆ ಚುನಾವಣೆ ಬಂದಾಗ ತಾಲೀಮು ಶುರುವಿಟ್ಟುಕೊಳ್ಳುತ್ತಿವೆ. ಈ ವರ್ಷವೂ ಸಹ ತುಂಗಭದ್ರಾ ಎಡದಂಡೆ ನಾಲೆ ರೈತರು ಎರಡನೇ ಬೆಳೆಗೆ ಮಾರ್ಚ್ ಅಂತ್ಯದವರೆಗಾದರೂ ನೀರು ನೀಡಬೇಕೆಂದು ಹೋರಾಟಕ್ಕಿಳಿದಿದ್ದು, ಇದು ಪ್ರತೀ ವರ್ಷದ ಸಂಘರ್ಷ ಎನ್ನುವಂತಾಗಿದೆ. ಮತ್ತೆ ಚುನಾವಣೆ ಬಂದಿದ್ದು, ಸಮಾನಾಂತರ ಜಲಾಶಯ ಪುನಃ ಭಾಷಣ-ಪ್ರಚಾರಗಳಲ್ಲಿ ಪ್ರಜ್ವಲಿಸಲಿದೆ.
ನಿಲ್ಲದ ಹೂಳೆತ್ತುವ ಪ್ರಹಸನತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಗೊಂಡಿರುವ ಹೂಳೆತ್ತುವ ನಿಟ್ಟಿನಲ್ಲಿ ಕೆಲವು ಯತ್ನಗಳು ನಡೆದವಾದರೂ ಯಾವ ಪ್ರಯೋಜನವೂ ಆಗಲಿಲ್ಲ. ಜಲಾಶಯದಲ್ಲಿನ ಸುಮಾರು 32 ಟಿಎಂಸಿ ಅಡಿಯಷ್ಟು ಹೂಳು ಎತ್ತುವುದು ಸುಲಭವಲ್ಲ. ಜಲಾಶಯದಿಂದ ತೆಗೆದ ಹೂಳು ಸಂಗ್ರಹಕ್ಕೆ ಸುಮಾರು 50-60 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಸುಮಾರು 15 ಅಡಿಯಷ್ಟು ಎತ್ತರ ಪ್ರದೇಶದಲ್ಲಿ ಹೂಳು ಸಂಗ್ರಹಿಸಬೇಕಾಗುತ್ತದೆ. ಇದಕ್ಕಾಗಿ 10-12 ಸಾವಿರ ಕೋಟಿ ರೂ.ಗಳ ವೆಚ್ಚವಾಗುತ್ತದೆ. ಹೂಳೆತ್ತುತ್ತೇವೆಂದು ಕೆಲವು ರಾಜಕಾರಣಿಗಳು ಅಲ್ಲಿಯೇ ಠಿಕಾಣಿ ಹೂಡುವ ಪ್ರಹಸನ ತೋರಿದ್ದರು. ಹೂಳೆ ತೆಗೆಯುತ್ತೇವೆಂದು ತೋರಿದ ಉತ್ಸಾಹವನ್ನು ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರಕಾರದಲ್ಲಿದ್ದುಕೊಂಡು ಒತ್ತಡ ತಂದಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತೇನೋ. -ಅಮರೇಗೌಡ ಗೋನವಾರ