Advertisement

Tungabhadra Dam: ಇಂದಿನಿಂದ ಗೇಟ್‌ ಅವಳವಡಿಕೆ; 2 ಬೃಹತ್‌ ಕ್ರೇನ್‌ ಆಗಮನ

11:34 PM Aug 14, 2024 | Team Udayavani |

ಕೊಪ್ಪಳ/ಹೊಸಪೇಟೆ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್‌ಗೇಟ್‌ ಚೈನ್‌ ಲಿಂಕ್‌ ಮುರಿದ ಹಿನ್ನೆಲೆಯಲ್ಲಿ ತಾತ್ಕಾಲಿಕ ತಡೆಗೆ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಾಣಕ್ಕೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಬುಧವಾರ ಪೂಜೆ ನೆರವೇರಿಸಿದ್ದು, ಗೇಟ್‌ ಅಳವಡಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರುವಾರದಿಂದ ಗೇಟ್‌ ಅಳವಡಿಕೆ ಕಾರ್ಯ ಆರಂಭವಾಗಲಿದ್ದು, ಎರಡು ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

Advertisement

ಹೊಸ ಗೇಟ್‌ ಅಳವಡಿಕೆಗೆ ಬುಧವಾರ ಎರಡು ಕ್ರೇನ್‌ಗಳು ಆಗಮಿಸಿದ್ದು, ಮೊದಲು ಗೇಟ್‌ನ ಅಳವಡಿಕೆ ಹೇಗೆ ನಡೆಸಬೇಕು, ಕ್ರೇನ್‌ಗಳ ಸಂಚಾರದ ವಿಧಾನಗಳ ತಿಳಿಯಲು ಟ್ರಯಲ್‌ ಪರೀಕ್ಷೆ ಮಾಡಲಾಯಿತು. ಎಂಜಿನಿಯರ್‌ಗಳ ಜತೆಗೂ ಚರ್ಚೆ ನಡೆಸಲಾಯಿತು. ತಜ್ಞರ ತಂಡ ಗೇಟ್‌ ಅಳವಡಿಕೆ ಪೂರ್ವದಲ್ಲಿ ಗೇಟ್‌ ಅಳವಡಿಕೆಗೆ ಬೇಕಿರುವ ಪ್ರೇಮ್‌ ಸೇರಿದಂತೆ ಇತರ ವೆಲ್ಡಿಂಗ್‌ಗೆ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಿ ವ್ಯವಸ್ಥೆ ಮಾಡಿಟ್ಟುಕೊಂಡಿದ್ದಾರೆ.

ಜಿಂದಾಲ್‌ನಲ್ಲಿ ಮೂರು ಗೇಟ್‌ಗಳು ಸಿದ್ಧಗೊಳ್ಳುತ್ತಿದ್ದು, ಅದರಲ್ಲಿ 1 ಗೇಟ್‌, ಹಿಂದೂಸ್ಥಾನ್‌ ಹಾಗೂ ನಾರಾಯಣ ಎಂಜಿನಿಯರಿಂಗ್‌ ವರ್ಕ್ಸ್  ನಿಂದ  ತಲಾ ಒಂದು ಗೇಟ್‌ ಆ. 15ರಂದು ಡ್ಯಾಂಗೆ ಆಗಮಿಸಲಿದೆ. ಆ ಬಳಿಕ ಅಳವಡಿಕೆ ಕಾರ್ಯ ಶುರುವಾಗಲಿದೆ. ಬುಧವಾರ ಅಳವಡಿಕೆಗೆ ಬೇಕಾದ ತಾಂತ್ರಿಕ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿ ವಲಯದಿಂದ ಮಾಹಿತಿ ಲಭ್ಯವಾಗಿದೆ.

4 ದಿನದಲ್ಲಿ 21 ಟಿಎಂಸಿ ಹೊರಕ್ಕೆ
ತುಂಗಭದ್ರಾ ಜಲಾಶಯದಿಂದ ಪ್ರತಿದಿನ 1.20 ಲಕ್ಷ ಕ್ಯೂಸೆಕ್‌ ನೀರು ನದಿಗೆ ಹರಿಸುತ್ತಿರುವುದರಿಂದ ಕೇವಲ ನಾಲ್ಕು ದಿನದಲ್ಲಿ 21 ಟಿಎಂಸಿಯಷ್ಟು ನೀರು ಹರಿದು ಹೋಗಿದೆ. ಆ. 10ರಂದು 104 ಟಿಎಂಸಿ ನೀರು ಸಂಗ್ರಹವಾಗಿತ್ತು. ಬುಧವಾರಕ್ಕೆ ಡ್ಯಾಂನಲ್ಲಿ 83 ಟಿಎಂಸಿ ನೀರು ಮಾತ್ರ ಉಳಿದಿತ್ತು. ಮಲೆನಾಡು ಪ್ರದೇಶದಲ್ಲಿ ಮತ್ತೆ ಮಳೆ ಆಗುತ್ತಿರುವುದರಿಂದ ನದಿಗೆ 32 ಸಾವಿರ ಕ್ಯೂಸೆಕ್‌ನಷ್ಟು ಒಳ ಹರಿವು ಹೆಚ್ಚಾಗಿದೆ.

ಕಾಲಕಾಲಕ್ಕೆ ಡ್ಯಾಂ ನಿರ್ವಹಣೆ ಆಗಲಿ
ತುಂಗಭದ್ರಾ ಡ್ಯಾಂ ಅನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕಿದೆ. ಸರಕಾರ ಈಗಾಗಲೇ ತುರ್ತು ಕ್ರಮ ಕೈಗೊಂಡಿದೆ. ಸ್ಥಳದಲ್ಲಿನ ಎಂಜಿನಿಯರ್‌ ಹಾಗೂ ಗೇಟ್‌ ಅಳವಡಿಕೆ ಮಾಡುವ ತಜ್ಞರ ಜತೆಗೆ ಚರ್ಚೆ ಮಾಡಿದ್ದೇನೆ. 2-3 ದಿನದಲ್ಲಿ ಗೇಟ್‌ ಅಳವಡಿಕೆ ಕಾರ್ಯ ಮುಗಿಯುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ.
-ಸುತ್ತೂರು ಶ್ರೀ ಶಿವರಾತ್ರೀಶ್ವರ ,ದೇಶಿಕೇಂದ್ರ ಸ್ವಾಮೀಜಿ

Advertisement
Advertisement

Udayavani is now on Telegram. Click here to join our channel and stay updated with the latest news.

Next