ಗಂಗಾವತಿ : ಗಂಗಾವತಿ ತಾಲ್ಲೂಕಿನ ರಾಂಪುರ ಮಲ್ಲಾಪೂರ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆಯ ಅಕ್ವಾಡೆಕ್ಟ್ ನಲ್ಲಿ ಸೋರಿಕೆ ಕಂಡುಬಂದಿದೆ. ಆತಂಕದಲ್ಲಿ ರೈತರಿದ್ದಾರೆ.
ಕಳೆದ ವರ್ಷ ಇದೇ ಜಾಗದ ಬಲಭಾಗದಲ್ಲಿ ಸೋರಿಕೆ ಕಂಡು ಬಂದಿತ್ತು ಆಗ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಸಿಮೆಂಟ್ ಮೂಲಕ ಗ್ರೌಂಡಿಂಗ್ ಮಾಡಿ ಸೋರಿಕೆಯನ್ನು ತಡೆದಿದ್ದರು. ಜುಲೈ ಹದಿನೆಂಟ ರಂದು ಕಾಲುವೆಗೆ ನೀರು ಹರಿಸಲಾಗಿದ್ದು ಸದ್ಯ ಕಾಲುವೆಯಲ್ಲಿ 4ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಭರದಿಂದ ಭತ್ತದ ನಾಟಿ ಕಾರ್ಯ ನಡೆದಿದೆ.ಈ ಮಧ್ಯೆ ರಾಂಪುರ ಹತ್ತಿರ ಎಡಭಾಗದಲ್ಲಿ ಸೋರಿಕೆ ಕಂಡುಬಂದಿದೆ.
2009 ರಲ್ಲಿ ಇದೇ ಜಾಗದಲ್ಲಿ ಕಾಲುವೆ ಒಡೆದು ಅಪಾರ ಪ್ರಮಾಣದಲ್ಲಿ ನಷ್ಟ ವಾಗಿತ್ತು. ಕಾಲುವೆಯಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ದುರಸ್ತಿ ಮಾಡುವಂತೆ ಜಲಸಂಪನ್ಮೂಲ ಬೇಸಿಗೆ ಸಂದರ್ಭದಲ್ಲಿ ಕಾಲುವೆಯಲ್ಲಿ ನೀರು ಇಲ್ಲದ ವೇಳೆದ ದುರಸ್ತಿ ಮಾಡುವಂತೆ ಈ ಭಾಗದ ಜಲಸಂಪನ್ಮೂಲ ಇಲಾಖೆಯ ಅಭಿಯಂತರರಿಗೆ ರೈತರು ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.
ಇದನ್ನೂ ಓದಿ :ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್
ಇದೀಗ ಎಡದಂಡೆ ಕಾಲುವೆಯ ನೀರು ರಾಯಚೂರು ತಲುಪುವ ಹಂತದಲ್ಲಿತ್ತು ಈಗ ರಾಂಪುರ ಹತ್ತಿರ ಸೋರಿಕೆ ಕಂಡು ಬಂದಿರುವುದು ರೈತರ ಆತಂಕ ಹೆಚ್ಚು ಮಾಡಿದೆ.ಸ್ಥಳದಲ್ಲಿ ಗ್ಯಾಂಗ್ ಮ್ಯಾನ್ ಗಳಿದ್ದು ಇನ್ನಷ್ಟು ಸೋರಿಕೆ ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಇದುವರೆಗೂ ಸ್ಥಳಕ್ಕೆ ಹಿರಿಯ ಅಭಿಯಂತರರು ಕಿರಿಯ ಅಭಿಯಂತರರು ಭೇಟಿ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಕಾಲುವೆಯ ಉಸ್ತುವಾರಿ ನೋಡುತ್ತಿರುವ ಅಭಿಯಂತರ ಅಮರೇಶ ಎನ್ನುವವರು ರೈತರ ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಈಗ ಸೋರಿಕೆಯಾಗಿದೆ ಈ ಹಿಂದೆ 2ಬಾರಿಯೂ ಅವರ ಅವಧಿಯಲ್ಲೇ ಸೋರಿಕೆಯಾಗಿದ್ದು ಇದರಿಂದಾಗಿ ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಂಪುರ ಗ್ರಾಮದ ರೈತ ಗೌರೀಶ್ ಬಾಗೋಡಿ ಆಗ್ರಹಿಸಿದ್ದಾರೆ.