Advertisement
ತಾಲೂಕಿನಾದ್ಯಂತ ವಾತಾವರಣದಲ್ಲಿ ವೈಪರೀತ್ಯ ಕಂಡು ಬಂದಿದ್ದು, ಮುಂಜಾನೆ ಇಬ್ಬನಿ ಹೆಚ್ಚಾಗಿ ನಂತರ ಬಿಸಿಲಿನ ಕಾವು ಏರುತ್ತಿದೆ. ಪ್ರತೀ ವರ್ಷ ಮೇ ಅಂತ್ಯದಲ್ಲಿ ಕಾಣುವಂತಿದ್ದ ವಾತಾವರಣ ಈ ಬಾರೀ ಮಾರ್ಚ್ ಮೊದಲ ವಾರದಲ್ಲಿಯೇ ಕಂಡು ಬರುವಂತಾಗಿದೆ. ಮಲೆನಾಡಿನ ಬರಗಾಲದ ಮುನ್ಸೂಚನೆಯಂತೆ ಗೋಚರಿಸುವಂತಿದೆ. ನದಿ ಪ್ರದೇಶಗಳಲ್ಲಿ ಒಳ ಹರಿವು ಇಲ್ಲದೇ ತುಂಗಾ ನದಿ ಹಳ್ಳದಂತೆ ಗೋಚರಿಸುತ್ತಿದೆ.
ಭಾಗದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದು ಖಚಿತ ಎಂಬ ವಾತವರಣದ ಮುನ್ಸೂಚನೆಯ ಬಗ್ಗೆ ರೈತರು ಚಿಂತಿಸುವಂತಾಗಿದೆ.
ತುಂಗೆಯ ಮಡಿಲು ಬರಿದಾಗಲು ಕಾರಣ ಏನು ಎಂಬುದರ ಬಗ್ಗೆ ಮಲೆನಾಡಿಗರೇ ಯೋಚಿಸಬೇಕಾಗಿದೆ. ಮಲೆನಾಡಿನಲ್ಲಿ ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ, ಅಭಿವೃದ್ಧಿಯ ಹೆಸರಿನಲ್ಲಿ ಮಾಡುತ್ತಿರುವ ನೈಸರ್ಗಿಕ ಕಾಡುಗಳ ಮಾರಣ ಹೋಮ, ತುಂಗೆ ಹಾಗೂ ಮಾಲತಿ ನದಿಯ ದಡಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ನೈಸರ್ಗಿಕ ಅರಣ್ಯಕ್ಕೆ ಬೆಂಕಿ ಇಟ್ಟು ಲಾಭ ಮಾಡುವ ದೃಷ್ಟಿಯಿಂದ ಬೆಳೆಸುತ್ತಿರುವ ಅಕೇಶಿಯ ಹಾಗೂ ನೀಲಗಿರಿ ಪ್ಲಾಂಟೇಶನ್‌ಗಳು ಮಲೆನಾಡಿನ ಭೂ ಗರ್ಭದ ಅಂತರ್ಜಲವನ್ನೇ ಬರಿದಾಗಿಸಿದೆ ಎಂಬುದು ತಜ್ಞರ ಅನಿಸಿಕೆಯಾಗಿದೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್ ಅಕೇಶಿಯಾ ಬೆಳೆಯಲು ನಿಷೇಧ ಹೇರಿದ್ದರೂ ಮುಂದುವರಿದಿರುವ ನಾಟಾ ವ್ಯವಹಾರವು ದುಡ್ಡು ಮಾಡುವ ದಂಧೆಯಾಗಿದೆ. ಜೊತೆಗೆ ಅಗತ್ಯಕ್ಕಿಂತ ಅತಿಯಾಗಿ ಪಂಪ್‌ಸೆಟ್‌ಗಳ ಬಳಕೆಯಿಂದ ನದಿಯಿಂದ ನೀರೆತ್ತುತ್ತಿರುವುದು ಹೆಚ್ಚಾಗುತ್ತಿದೆ ಎಂದು ಪರಿಸರವಾದಿಗಳ ಅಭಿಪ್ರಾಯ ಕೇಳಿಬಂದಿದೆ.
ಒಟ್ಟಾರೆ ಮಲೆನಾಡಿನಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡು ಬರಗಾಲದ ಮುನ್ಸೂಚನೆ ಕಂಡುಬರುತ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚಿಂತಿಸುವ ಅವಶ್ಯಕತೆಯಿದೆ. ಮಲೆನಾಡಿಗರು ಸಹ ನೀರಿನ
ಉಪಯೋಗದ ಬಗ್ಗೆ ಜಾಗೃತಿ ವಹಿಸಿ ಬಳಕೆ ಮಾಡಬೇಕಾದ ತುರ್ತು ಅಗತ್ಯವಿದೆ.
Related Articles
ಸಂದೇಶ್ ಜವಳಿ, ಪಪಂ ಅಧ್ಯಕ್ಷ
Advertisement
ತಾಲ್ಲೂಕಿನ ಗ್ರಾಪಂ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಇಲ್ಲಿಯ ತನಕ ಯಾವುದೇ ದೂರು ಕೇಳಿ ಬಂದಿಲ್ಲ. ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಳಕೆ ಹಾಗೂ ವ್ಯರ್ಥ ಮಾಡುವ ವಿಚಾರದಲ್ಲಿ ಪಿಡಿಒ ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಚರ್ಚಿಸಲಾಗಿದೆ.ಧನರಾಜ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಂಚಂದ್ರ ಕೊಪ್ಪಲು