Advertisement

ತುಂಗಾ ಆರತಿ: 108 ಯೋಗ ಮಂಟಪಗಳ ನಿರ್ಮಾಣ ಕಾರ್ಯಕ್ಕೆ ಸಿಎಂ ಶಿಲಾನ್ಯಾಸ

01:07 PM Feb 20, 2022 | Team Udayavani |

ಹರಿಹರ: ತುಂಗಭದ್ರಾ ನದಿಯ ತಟದಲ್ಲಿ “ಉತ್ತರದಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ” ಪ್ರಯುಕ್ತ 108 ಯೋಗ ಮಂಟಪಗಳ ನಿರ್ಮಾಣ ಕಾರ್ಯಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾನುವಾರ ಶಿಲಾನ್ಯಾಸ ನೆರವೇರಿಸಿದರು.

Advertisement

ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮಿಗಳು, ಸಚಿವರಾದ ಭೈರತಿ ಬಸವರಾಜ್, ಮುರುಗೇಶ್ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.

ನಾಗರಿಕತೆ ಮತ್ತು ಸಂಸ್ಕೃತಿ ಎರಡು ಒಟ್ಟಿಗೆ ಬೆಳೆಯಬೇಕು

ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಮ್ಮ ಎಲ್ಲ ನಾಗರಿಕತೆಗಳು ನದಿತಟದಲ್ಲಿಯೇ ಬೆಳೆದಿವೆ. ನಾಗರಿಕತೆ ಮತ್ತು ಸಂಸ್ಕೃತಿ ಎರಡು ಒಟ್ಟಿಗೆ ಬೆಳೆಯಬೇಕು. ನಮ್ಮ ಬದುಕಿನ ಮೂಲ ಜಲ. ಆದ್ದರಿಂದ ಜಲ ರಕ್ಷಣೆ ಹಾಗೂ ಸ್ವಚ್ಛತೆ ನಮ್ಮ ಆದ್ಯತೆಯಾಗಬೇಕು ಎಂದರು.

ನಮ್ಮಲ್ಲಿ ಏನಿದೆಯೋ ಅದು ನಾಗರಿಕತೆ. ನಾವೇನು ಆಗಿದ್ದೇವೆಯೋ ಅದು ಸಂಸ್ಕೃತಿ. ಮಾನವೀಯ ಗುಣಗಳು, ಉದಾರತೆಯ ಗುಣಗಳು ಸಹಿತ ಎಲ್ಲ ಗುಣಗಳು ಸಂಸ್ಕೃತಿಯಾದರೆ, ರಸ್ತೆ, ಕಟ್ಟಡ, ತಂತ್ರಜ್ಞಾನ ಎಲ್ಲವೂ ನಶಗರಿಕತೆ. ನದಿತಟದಲ್ಲಿ ಸಂಸ್ಕೃತಿ ಮತ್ತು ನಾಗರಿಕತೆ ಎರಡನ್ನೂ ಬೆಳೆಸಬೇಕಾಗಿದ್ದು ಇಂಥ ಕಾರ್ಯಕ್ರಮವನ್ನು ವಚನಾನಂದ ಸ್ವಾಮೀಜಿ ಹಮ್ಮಿಕೊಂಡಿದ್ದಾರೆ. ಕಾಶಿಯ ರೀತಿ ಇಲ್ಲಿಯೂ ಅಭಿವೃದ್ಧಿಗಳು ನಡೆಯಬೇಕು ಎಂಬುದು ಶ್ರೀಗಳ ಅಭಿಲಾಷೆ ಆಗಿದೆ ಎಂದರು.

Advertisement

ನನ್ನ ಪ್ರಕಾರ ವಿಜ್ಞಾನ ಮತ್ತು ತತ್ವಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೊಂದು ಪೂರಕವಾದುದು. ಇದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು. ಅಣು ಒಡೆದಾಗ ಒಂದು ಶಕ್ತಿ ಉತ್ಪಾದನೆಯಾಗುತ್ತದೆ. ಅಣುಗಳು ಕೂಡಿದಾಗ ಅಮೋಘ ಶಕ್ತಿ ಉತ್ಪಾದನೆಯಾಗುತ್ತದೆ. ಅದೇ ರೀತಿ ಹರಿಹರ ಕ್ಷೇತ್ರ ಹರಿ ಮತ್ತು ಹರ ಸಂಗಮದ ಶಕ್ತಿ  ಹೊಂದಿದೆ ಎಂದರು.

ತುಂಗಭದ್ರಾರತಿ ಯೋಜನೆಯ ಮೊದಲ ಭಾಗವಾಗಿ 30 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ ರಾಘವೇಂದ್ರ ಮಠದಿಂದ ಹರಿಹರೇಶ್ವರ ದೇವಸ್ಥಾನದ ಮಧ್ಯದ ನದಿ ದಡದುದ್ದಕ್ಕೂ ಯೋಗಾ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ.

ಗಂಗಾ ಆರತಿಯಂತೆ ಪ್ರತಿನಿತ್ಯ ತುಂಗಾಭದ್ರಾ ಆರತಿ, ಪೂಜೆ ನಡೆಸುವ ಉದ್ದೇಶವಿದ್ದು, ಇದು ಉತ್ತರ ಮತ್ತು ದಕ್ಷಿಣ ಕರ್ನಾಟಕ ಒಂದೂಗೂಡಿಸುವ ಮಹತ್ವದ ಯೋಜನೆಯಾಗಲಿದೆ ಎಂದರು. ಗತವೈಭವ ಮರಳಲಿದೆ: ಹರಿಹರೇಶ್ವರ ಸನ್ನಿ ಧಿಯಿರುವ ಹರಿಹರ ಇತಿಹಾಸದಲ್ಲಿ ಹೊಂದಿದ್ದ ಗತ ವೈಭವವನ್ನು ಮರಳಿ ಪಡೆಯುವ ಮತ್ತು ದೇಶದಲ್ಲೇ ಹಿಂದುಗಳ ಪ್ರಮುಖ ಯಾತ್ರಾಸ್ಥಳವನ್ನಾಗಿಸುವ ಗುರಿಯೊಂದಿಗೆ ಈ ಯೋಜನೆ ಆರಂಭಿಸಲಾಗುತ್ತಿದೆ. ಉತ್ತರಕ್ಕೆ ಗಂಗೆಯ ರೀತಿ ದಕ್ಷಿಣ ಭಾರತಕ್ಕೆ ತುಂಗಾ ನದಿ ಪವಿತ್ರ ಎನಿಸಿದೆ. ಗಂಗಾ ಸ್ನಾನ-ತುಂಗಾ ಪಾನ ಎನ್ನುವ ಉಕ್ತಿಯೂ ಇರುವುದರಿಂದ ಗಂಗಾರತಿಯಂತೆ ತುಂಗಾರತಿಯನ್ನು ಏಕೆ ಆರಂಭಿಸಬಾರದು, ಜೊತೆಗೆ ಗಂಗೆಯಂತೆ ತುಂಗಾ ನದಿಯನ್ನೂ ಶುಚಿಗೊಳಿಸಬೇಕೆನ್ನುವ ಮಹತ್ವಾಕಾಂಕ್ಷೆ ಬಂದಾಗ ನಮಾಮಿ ತುಂಗೆ ಯೋಜನೆಗೆ ಚಾಲನೆ ನೀಡಿದೇವು. ಹೇಗೆ ಮನಮೋಹಕ ಗಂಗಾರತಿ ಲಕ್ಷಾಂತರ ಭಕ್ತರ ಹೃನ್ಮನ ಸೆಳೆಯಿತೋ ಹಾಗೆ ತುಂಗಾರತಿ ಕೂಡ ನಾಡಿನ ಭಕ್ತರ ಹೃನ್ಮನ ಸೆಳೆಯಬೇಕು ಎಂದು ವಚನಾನಂದ ಸ್ವಾಮೀಜಿ ಹೇಳಿದರು.

ಪ್ರವಾಸೋದ್ಯಮ, ಉದ್ಯೋಗಾವಕಾಶ ಹೆಚ್ಚಳ

ತುಂಗಾಭದ್ರಾರತಿ ಯೋಜನೆಯಿಂದ ಹರಿಹರ ಸೇರಿದಂತೆ ತುಂಗಾಭದ್ರಾ ನದಿ ಹರಿಯುವ ಎಲ್ಲಾ ಕಡೆಯೂ ಪ್ರವಾಸೋದ್ಯಮ, ಉದ್ಯೋಗಾವಕಾಶ ವೃದ್ದಿಸಲಿದೆ. ವಾರಣಾಸಿ ಕಾರಿಡಾರ್‌ನಲ್ಲಿ ಗಂಗಾ ನದಿ ಹರಿಯುವ ಎಲ್ಲ ಕಡೆಯೂ ಗಂಗಾ ಆರತಿ ನಡೆಯುವಂತೆ ತುಂಗಾಭದ್ರಾ ನದಿ ಹರಿಯುವ ಎಲ್ಲೆಡೆಯೂ ತುಂಗಾರತಿ ನಡೆಯಬೇಕು. ಈ ಮೂಲಕ ಜೀವ ನದಿಯ ಸ್ವಚ್ಛತೆ, ಸುತ್ತಮುತ್ತಲಿನ ನಗರಗಳ ಸರ್ವತೋಮುಖ ಅಭಿವೃದ್ಧಿ ನಮ್ಮ ಗುರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next