Advertisement

ನಮ್ಮ ಭಾವನೆಗೆ ತಕ್ಕಂತೆ ಬದಲಾಗುವ ಹಾಡಿನ  ಟ್ಯೂನ್‌!

01:11 AM Mar 27, 2022 | Team Udayavani |

ಖುಷಿಯಾಗಿದ್ದಾಗ, ಯಾವುದಾದರೂ ಕೆಲಸದಲ್ಲಿ ನಿರತರಾಗಿದ್ದಾಗ, ವರ್ಕೌಟ್ ಮಾಡುತ್ತಿರುವಾಗ, ಬೇಸರದಲ್ಲಿದ್ದಾಗ, ಮಲಗಿದ್ದಾಗ… ನಮ್ಮ ಭಾವನೆಗಳು ಬೇರೆಬೇರೆಯಾಗಿರುತ್ತವೆ. ಹಾಗಾಗಿಯೇ ನಾವು ಆಯಾಯ ಸಂದರ್ಭಗಳಲ್ಲಿ ವಿಭಿನ್ನ ಲಯ, ರಾಗ ಸಂಯೋಜನೆಯ ಹಾಡುಗಳನ್ನು ಆಲಿಸಲು ಇಷ್ಟಪಡುತ್ತೇವೆ. ನಮಗಿಷ್ಟವಾದ ಒಂದು ಹಾಡು ಈ ಎಲ್ಲ ಸಂದರ್ಭಗಳಿಗೂ ಸೂಕ್ತವಾಗಿದ್ದರೆ ಹೇಗೆ…? ನಮ್ಮ ಬದಲಾಗುವ ಭಾವನೆಗಳಿಗೆ ತಕ್ಕಂತೆ ನಾವು ಕೇಳುತ್ತಿರುವ ಮ್ಯೂಸಿಕ್‌ ತನ್ನಿಂತಾನೇ ಬದಲಾದರೆ ಹೇಗಿರುತ್ತದೆ?, ಇದು ಕಲ್ಪನಾತೀತವೇ?. ಖಂಡಿತವಾಗಿಯೂ ಅಲ್ಲ. ಈವರೆಗೆ ನಾವೆಲ್ಲರೂ ಏನು ಅಸಾಧ್ಯ ಅಂದುಕೊಂಡಿದ್ದೆವೋ ಅದನ್ನು ಸಾಧ್ಯವಾಗಿಸುವಲ್ಲಿ ತಂತ್ರಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇದಕ್ಕೆಂದೇ ಒಂದು ಅದ್ಭುತ ತಂತ್ರಜ್ಞಾನ ವನ್ನು ಆವಿಷ್ಕರಿಸಲಾಗಿದ್ದು ಯಾವುದೇ ಸಂದರ್ಭದಲ್ಲೂ ಕೂಡ ನೀವು ಇಷ್ಟಪಡುವ ಹಾಡನ್ನು ನಿಮ್ಮ ಭಾವನೆಗಳಿಗೆ ತಕ್ಕ ಸ್ವರ ಮತ್ತು ರಾಗ ಸಂಯೋಜನೆಯಲ್ಲಿ ಆಲಿಸಬಹುದಾಗಿದೆ.

Advertisement

ಹೃದಯ ಬಡಿತಕ್ಕೆ ಸ್ಪಂದನೆ
ನಮ್ಮ ಹೃದಯದ ಬಡಿತವನ್ನು ಆಲಿಸಿ, ನಮ್ಮ ಮನಸ್ಸನ್ನು ಅರ್ಥೈಸಿಕೊಂಡು ನಾವು ಹೇಳದೆಯೇ ನಮಗೆ ಬೇಕಾದ ರೀತಿಯಲ್ಲಿ ಹಾಡನ್ನು ಪ್ಲೇ ಮಾಡುವ ತಂತ್ರಜ್ಞಾನವೊಂದನ್ನು ಇತ್ತೀಚೆಗಷ್ಟೇ ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪೆನಿಯಾದ ಆ್ಯಪಲ್‌ನ  ಕೈವಶವಾದ ಲಂಡನ್‌ನ ಮ್ಯೂಸಿಕ್‌ ಕಂಪೆನಿ ಸಂಶೋಧಿಸಿದೆ.

ನಮಗಿಷ್ಟವಾದ ಒಂದೇ ಹಾಡನ್ನು ಮೂರು ವಿಧವಾಗಿ ವೇದಿಕೆ ಮೇಲೆ ಹಾಡುವುದು ಕಷ್ಟವಲ್ಲ. ಆದರೆ ನಾವು ಹೇಳದೆಯೇ ನಮ್ಮ ಮನಃಸ್ಥಿತಿಯನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಹಾಡನ್ನು ಪ್ಲೇ ಮಾಡುವುದು ಸುಲಭವಲ್ಲ. ಆದರೆ ಈ ತಂತ್ರಾಂಶದ ಮೂಲಕ ನಿಮ್ಮ ಹೃದಯದ ಬಡಿತಕ್ಕೆ ತಕ್ಕುದಾಗಿ ನಿಮ್ಮ ಯಾವುದೇ ಪ್ರಯತ್ನವಿಲ್ಲದೆ ಮಧುರ ಮತ್ತು ಸಂಗೀತ ಬದ್ಧವಾದ ಒಂದೇ ಹಾಡನ್ನು ಆಯಾಯ ಸನ್ನಿವೇಶ ಮತ್ತು ನಿಮ್ಮ ಭಾವನೆಗಳಿಗನುಸಾರವಾಗಿ ಕೇಳಬಹುದು. ಇದರಿಂದ ನಿಮ್ಮ ಮನಸ್ಸಿಗೂ ಒಂದಿಷ್ಟು ನೆಮ್ಮದಿ, ನಿರಾಳತೆ ಸಿಗಲು ಸಾಧ್ಯ. ಬ್ರಿಟಿಷ್‌ ಕಂಪೆನಿಯಾಗಿರುವ ಎಐ ಮ್ಯೂಸಿಕ್‌ ಇಂತಹ ವಿನೂತನ ಮತ್ತು ಅಚ್ಚರಿಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌)ಯ ಸಹಾಯದಿಂದ ಇದು ಮಾನವನ ಹೃದಯದ ಮಾತನ್ನು ಅರ್ಥ ಮಾಡಿಕೊಳ್ಳುತ್ತದೆ. ಯಾವುದೇ ಆಜೆnಯಿಲ್ಲದೆ ಹಾಡುಗಳ ಲಯ ಮತ್ತು ರಾಗವನ್ನು ಬದಲಾಯಿಸುತ್ತದೆ.

ಎಐ ಮ್ಯೂಸಿಕ್‌
ಇನ್‌ಫಿನಿಟ್‌ ಮ್ಯೂಸಿಕ್‌ ಎಂಜಿನ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ಮ್ಯೂಸಿಕ್‌ ಕಂಪೆನಿಯು 2016ರಲ್ಲಿ ಲಂಡನ್‌ನಲ್ಲಿ ಪ್ರಾರಂಭವಾಯಿತು. ಇದು ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ  (ಎಐ)ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಸದ್ಯ ಇದು ಆ್ಯಪಲ್‌ ಸಂಸ್ಥೆಯ ಅಧೀನದಲ್ಲಿದೆ. ಎಐ ಮ್ಯೂಸಿಕ್‌ ಕಂಪೆನಿಯು ಯಾವುದೇ ಆಜ್ಞೆಯಿಲ್ಲದೆ ಬಳಕೆದಾರರ ಮನೋಭಾವನೆಯನ್ನು ಗ್ರಹಿಸಿ ಅದಕ್ಕೆ ಅನುಗುಣವಾಗಿ ಹಾಡುಗಳ ರಾಗ ಸಂಯೋಜನೆಯನ್ನು ಬದಲಾಯಿಸುವ ಸಂಗೀತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಸಫ‌ಲವಾಗಿದೆ.

ಏನಿದು ಕೃತಕ ಬುದ್ಧಿಮತ್ತೆ?
ಅಮೆಜಾನ್‌ ಅಲೆಕ್ಸಾ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇದೆ. ನೀವು ಆಜ್ಞೆಯನ್ನು ನೀಡಿದ ತತ್‌ಕ್ಷಣ ಅಲೆಕ್ಸಾ ನಿಮ್ಮ ಕೋರಿಕೆಯಂತೆ ಅಚ್ಚುಮೆಚ್ಚಿನ ಹಾಡು ಅಥವಾ ಆಜೆnಯನ್ನು ಆಲಿಸಿ ಅದನ್ನು ಅನುಸರಿಸುತ್ತದೆ. ಇವೆಲ್ಲವೂ ಎಐ ಅಂದರೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ ತಂತ್ರಜಾnನದ ಮೂಲಕ ನಡೆಯುತ್ತದೆ. ಈ ತಂತ್ರಜ್ಞಾನದ ಮೂಲಕವೇ ಸುಧಾರಿತ ಕಂಪ್ಯೂಟರ್‌ ಸಿಸ್ಟಮ್‌ಗಳ ತಯಾರಿಯೂ ನಡೆಯುತ್ತವೆ. ಈ ತಂತ್ರಜ್ಞಾನವು ಮಾನವನ ಮೆದುಳಿನಂತೆ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲುದಾಗಿದೆ. ಅಷ್ಟು ಮಾತ್ರವಲ್ಲದೆ ಯಾವುದೇ ಆಜ್ಞೆಯಿಲ್ಲದೆ, ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ತಂತ್ರಜ್ಞಾನ ಸಮರ್ಥವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ನಿರ್ಧಾರಗಳು ಸರಿಯಾಗಿಯೇ ಇರುತ್ತವೆ.

Advertisement

ಏನು ಪ್ರಯೋಜನ?
-ತಮಗಿಷ್ಟವಾದ ಹಾಡನ್ನು ಎಲ್ಲಿ, ಯಾವಾಗ ಬೇಕಾದರೂ ಕೇಳಬಹುದು. ಅದಕ್ಕಾಗಿ ಯಾವುದೇ ರೀತಿಯಲ್ಲೂ  ಶ್ರಮ ಪಡಬೇಕಿಲ್ಲ.

-ಹೃದಯದ ಬಡಿತವನ್ನು ಆಲಿಸಿ ಹಾಡು ಪ್ಲೇ ಆಗುವುದರಿಂದ ಯಾವುದೇ ಸಂದರ್ಭದಲ್ಲೂ ಒಂದೇ ಹಾಡನ್ನು ಕೇಳಬಹುದು.

-ಬೇರೆಬೇರೆ ಸಂದರ್ಭದಲ್ಲಿ ಬೇರೆಬೇರೆ ಹಾಡುಗಳಿಗೆ ಹುಡುಕಾಡಬೇಕಾದ ಅಗತ್ಯವಿರುವುದಿಲ್ಲ.

-ಸಂಗೀತದ ಕುರಿತು ಯಾವುದೇ ಅರಿವು ಇಲ್ಲದೇ ಇದ್ದರೂ ಕೂಡ ಸಂಗೀತವನ್ನು ನಿಮಗೆ ಬೇಕಾದ ಟ್ಯೂನ್‌ಗೆ ಬದಲಾಯಿಸಿಕೊಳ್ಳಬಹುದು.

ಇನ್‌ಫಿನಿಟ್‌ ಮ್ಯೂಸಿಕ್‌ ಎಂಜಿನ್‌
ಇದು ಸಂಗೀತ ಉದ್ಯಮದಲ್ಲಿ ಸದ್ಯ ಬಳಕೆಯಲ್ಲಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸುಧಾರಿತ ಮತ್ತು ನವೀಕೃತ ಆವೃತ್ತಿಯಾಗಿದೆ. ಇದರಲ್ಲಿ ಒಂದು ಹಾಡಿಗೆ ಮೂರ್‍ನಾಲ್ಕು ವಿಧಗಳಲ್ಲಿ ರಾಗ ಮತ್ತು ಲಯ ವಿನ್ಯಾಸ ಮಾಡಲಾಗಿದೆ. ಡೀಪ್‌ ಹೌಸ್‌, ಜಾಝ್ ಮತ್ತು ಸ್ಲೋ ಹಾಗೂ ರಿವರ್‌ರಂತಹ ಒಂದೇ ಹಾಡಿನ ಬಹು ಆವೃತ್ತಿಗಳು ಇದರಲ್ಲಿರಲಿವೆ. ಹಾಂಡ್‌ವಾಚ್‌, ಫಿಟ್ನೆಸ್ ಬ್ಯಾಂಡ್‌ ಮೂಲಕ ಇದು ನಿಮ್ಮ ಹೃದಯ ಬಡಿತವನ್ನು ಎಐ ಮೂಲಕ ಮೇಲ್ವಿಚಾರಣೆ ಮಾಡಿ ಅನಂತರ ಪ್ಲೇ ಆಗುತ್ತಿರುವ ಹಾಡಿನ ಟ್ಯೂನ್‌ ಅನ್ನು ಅದಕ್ಕನುಸಾರವಾಗಿ ಬದಲಾಯಿಸುತ್ತದೆ.

ಸಂಗೀತ ಕ್ಷೇತ್ರದಲ್ಲಿ  ಎಐ ಬಳಕೆ ಹೇಗೆ?
ಸಂಗೀತ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಹಲವು ವಿಧಗಳಲ್ಲಿ ಬಳಕೆಯಲ್ಲಿದೆ. ಕೃತಕ ಬುದ್ಧಿಮತ್ತೆಯ ಕೆಲವು ತಂತ್ರಜ್ಞಾನಗಳನ್ನು ಕಲಾವಿದರು ಬಳಸುತ್ತಾರೆ. ಇನ್ನು ಕೆಲವು ತಂತ್ರಜ್ಞಾನಗಳನ್ನು ಸಂಗೀತ ಆ್ಯಪ್ಲಿಕೇಶನ್‌ ಗಳಲ್ಲಿ  ಬಳಕೆದಾರರಿಗೆ ನೀಡುತ್ತಿರುವ ಸೇವೆಯನ್ನು ಸುಧಾರಿಸಲು ಬಳಸಲಾಗುತ್ತಿದೆ.  ಎಐ ಮ್ಯೂಸಿಕ್‌ ಇದೀಗ ಎಐ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಇಂದಿನ ಯುವಜನಾಂಗದ ಆವಶ್ಯಕತೆಗನುಗುಣವಾಗಿ ಸಂಗೀತ ಕ್ಷೇತ್ರದಲ್ಲಿ ಮೂರು ವಿಧಗಳಲ್ಲಿ ಬಳಸಲು ಮುಂದಾಗಿದೆ.

ಒಂದೇ ಹಾಡಿಗೆ ನಾಲ್ಕು ಟ್ಯೂನ್‌
ನಾವು ಓಡುತ್ತಿರುವಾಗ ಹೃದಯ ಬಡಿತ ಹೆಚ್ಚಾಗುತ್ತದೆ, ಅಂತೆಯೇ ಮಲಗಿರುವಾಗ ಸಾಮಾನ್ಯವಾಗಿರುತ್ತದೆ. ಹ್ಯಾಂಡ್‌ವಾಚ್‌, ಫಿಟ್ನೆಸ್ ಬ್ಯಾಂಡ್‌ನ‌ಲ್ಲಿ ಅಳವಡಿಸಲಾಗಿರುವ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನದ ಮೂಲಕ ಆ ಕ್ಷಣದ ನಮ್ಮ ಭಾವನೆಯನ್ನು ಅರ್ಥ ಮಾಡಿಕೊಂಡು ಹಾಡಿನ ಟ್ಯೂನ್‌ ಅನ್ನು ಬದಲಾಯಿಸುತ್ತದೆ. ಈ ತಂತ್ರಜ್ಞಾನವು ಹಾಡಿಗೆ ಮಾತ್ರ ಅನ್ವಯಿಸುತ್ತದೆ. ಅದರ ಹಕ್ಕುಸ್ವಾಮ್ಯ ಆ್ಯಪಲ್‌ ಸಂಸ್ಥೆಯ ಬಳಿ ಇದೆ. ಸಂತೋಷದ ಮೂಡ್‌ನಲ್ಲಿದ್ದಾಗ ಡೀಪ್‌ ಹೌಸ್‌ ಟ್ಯೂನ್‌, ವರ್ಕ್‌ಔಟ್‌ ಅಥವಾ ಹೃದಯ ಬಡಿತ ಹೆಚ್ಚಾಗಿರುವಾಗ ಬಾಸ್‌ ಮತ್ತು ಡ್ರಮ್ಸ್‌, ಕಡಿಮೆ ಹೃದಯ ಬಡಿತದಲ್ಲಿ ಸ್ಲೋ ಮತ್ತು ರಿವರ್ಬ್ ಟ್ಯೂನ್‌ ಕೇಳುತ್ತದೆ. ಇದನ್ನು ಹೊರತು ಪಡಿಸಿ ನಾಲ್ಕನೇ ಆವೃತ್ತಿಯೂ ಇದೆ.

ನ್ಯಾಚುರಲ್‌ ಲ್ಯಾಂಗ್ವೇಜ್‌ ಪ್ರೊಸೆಸಿಂಗ್‌
ಇದರಲ್ಲಿ ಹಾಡಿನಲ್ಲಿ ಬಳಸಲಾಗಿರುವ ಶಬ್ದಗಳನ್ನು ಎಐ ಅರ್ಥೈಸಿಕೊಂಡು ಕಾರ್ಯ ನಿರ್ವಹಿಸುತ್ತದೆ. ಇದರ ಜತೆಯಲ್ಲಿ ಈ ಪ್ರಕ್ರಿಯೆಯಲ್ಲಿ ಹಾಡಿನ ಬಗ್ಗೆ ಇಂಟರ್‌ನೆಟ್‌ನಲ್ಲಿ ನಡೆದಿರುವ ಚರ್ಚೆ, ಹಾಡಿನ ಗಾಯಕರು ಯಾರು? ಮತ್ತಿತರ ವಿಚಾರಗಳನ್ನು ತಿಳಿದುಕೊಳ್ಳಲಾಗುತ್ತದೆ. ಇವೆರಡನ್ನೂ ಸಂಯೋಜಿಸಿ ಕೆಲವೊಂದು ಕೀವರ್ಡ್‌ಗಳ ಮೂಲಕ ಹಾಡನ್ನು ಪ್ಲೇ ಮಾಡಲಾಗುತ್ತದೆ.

ಆಡಿಯೋ ಮಾದರಿ
ಇಲ್ಲಿ ಎಐ ತಂತ್ರಜ್ಞಾನವು ಮಾತಿನ ಬದಲಿಗೆ ಹಾಡಿನ ಆಡಿಯೋವನ್ನು ಸಂಶೋಧಿಸುವ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ಹಾಡಿನ ಟ್ಯೂನ್‌, ಲಯ, ಕ್ಯಾಡೆನ್ಸ್‌ ಅನ್ನು ಅರ್ಥ ಮಾಡಿಕೊಂಡು ಅದನ್ನು ಬಳಕೆದಾರರಿಗೆ ಶಿಫಾರಸು ಮಾಡುತ್ತದೆ.

ಯಾವುದರಲ್ಲಿ ಬಳಸಲಾಗುತ್ತದೆ?
ಟೆಕ್‌ ಕಂಪೆನಿ ಆ್ಯಪಲ್‌ ಈ ತಂತ್ರಜ್ಞಾನವನ್ನು  ನಾಲ್ಕು ರೀತಿಯಲ್ಲಿ ಗ್ರಾಹಕರಿಗೆ ಒದಗಿಸುತ್ತದೆ. ಇಯರ್‌ಫೋನ್‌, ಆ್ಯಪಲ್‌ ಮ್ಯೂಸಿಕ್‌ ಪ್ಲಾಟ್‌ಫಾರ್ಮ್ ಗಳು, ಧರಿಸಬಹುದಾದ ಹ್ಯಾಂಡ್‌ಬ್ಯಾಂಡ್‌, ಹ್ಯಾಂಡ್‌ವಾಚ್‌, ಫಿಟ್ನೆಸ್ ಪ್ಲಸ್‌, ಆ್ಯಪಲ್‌ ಟಿವಿಯ ಮೂಲಕ ಈ ಸೇವೆಯನ್ನು ನಾವು ಪಡೆದುಕೊಳ್ಳಬಹುದು.

ಎಐಯಿಂದ ಹೇಗೆ ಬದಲಾಗುತ್ತದೆ ಸಂಗೀತದ ಟ್ಯೂನ್‌?
ಹೃದಯದ ಬಡಿತವನ್ನು ಆಲಿಸಿ ಅದರಿಂದ ಉಂಟಾಗುವ ತರಂಗಗಳನ್ನು ಅರ್ಥೈಸಿಕೊಂಡು ಮೊಬೈಲ್‌ಗೆ ಸಿಗ್ನಲ್‌ಗಳನ್ನು ಕಳುಹಿಸುತ್ತದೆ. ಯಾವಾಗ ಹೃದಯ ಬಡಿತವನ್ನು ಎಐ ಓದಲು  ಶುರುಮಾಡುತ್ತದೋ ಆಗಲೇ ಸಂಗೀತವನ್ನು ಕಂಪೋಸ್‌ ಮಾಡಲು ಪ್ರಾರಂಭಿಸುತ್ತದೆ. ಕೃತಕ ಬುದ್ಧಿಮತ್ತೆಯಿಂದ ಸಂಗೀತ ಸಿದ್ಧವಾಗಿ ನೀವು ಆಲಿಸತೊಡಗಿದಾಗ ನಿಮ್ಮ ಹೃದಯ ಬಡಿತವೂ ಸಾಮಾನ್ಯವಾಗುತ್ತದೆ. ಇದನ್ನು ದಿನದ 24 ಗಂಟೆಯೂ ಚಲಾಯಿಸಬಹುದು. ಯಾಕೆಂದರೆ ಇದು ನಮ್ಮ ಭಾವನೆಗಳನ್ನು ಆಧರಿಸಿ ಸಂಗೀತದ ಟ್ಯೂನ್‌ ಅನ್ನೂ ಬದಲಾಯಿಸುತ್ತಿರುತ್ತದೆ.

-ವಿದ್ಯಾ ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next