ಸುಮಾರು ಮೂರು ವರ್ಷಗಳ ಹಿಂದೆ ಕನ್ನಡದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ‘ತಿಥಿ’ ಚಿತ್ರ ನಿಮಗೆ ನೆನಪಿರಬಹುದು. ಮಂಡ್ಯ ಸೊಗಡಿನಲ್ಲಿ ತೆರೆಗೆ ಬಂದಿದ್ದ ಈ ಚಿತ್ರದ ಡೈಲಾಗ್‌ಗಳು ಸಾಕಷ್ಟು ಜನಪ್ರಿಯವಾಗಿದ್ದವು. ಈಗ ಇಂಥದ್ದೇ ಮತ್ತೂಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು ‘ಫುಲ್ ಟೈಟ್ ಪ್ಯಾತೆ’. ಈಗಾಗಲೇ ತನ್ನ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಿರುವ ಈ ಚಿತ್ರ ಇದೇ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ.
ಹಾಗಾದರೆ, ‘ಫುಲ್ ಟೈಟ್ ಪ್ಯಾತೆ’ ಅಂದ್ರೇನು? ಚಿತ್ರದಲ್ಲಿ ಅಂಥದ್ದೇನಿದೆ? ಎಂಬುದರ ಬಗ್ಗೆ ಮಾಹಿತಿ ನೀಡಲು ಬಿಡುಗಡೆಗೂ ಮುನ್ನ ಪತ್ರಕರ್ತರ ಮುಂದೆ ಬಂದಿದ್ದ ಚಿತ್ರತಂಡ, ಈ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಬಿಚ್ಚಿಟ್ಟಿತು. ‘ಸಾಮಾನ್ಯವಾಗಿ ಅನೇಕರು ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಕುಡಿತಕ್ಕೆ ಶರಣಾಗುತ್ತಾರೆ. ಆದರೆ ಕುಡಿತವೇ ಅನೇಕ ಸಮಸ್ಯೆಗಳಿಗೆ ಕಾರಣ ಎನ್ನುವ ಅರಿವು ಅವರಿಗಿರುವುದಿಲ್ಲ. ಅಂತಹವರಿಗೆ ಕುಡಿತವೇ ಜೀವನವಲ್ಲ, ಅದಕ್ಕಿಂತ ಸುಂದರವಾದ ಬೇರೊಂದು ಜೀವನವಿದೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸುತ್ತಿದ್ದೇವೆ’ ಎನ್ನುತ್ತದೆ ಚಿತ್ರತಂಡ.
ಕೆಲ ವರ್ಷಗಳ ಹಿಂದೆ ನಡೆದ ನೈಜ ಘಟನೆಯನ್ನು ಆಧರಿಸಿ ಚಿತ್ರತಂಡ ಈ ಚಿತ್ರವನ್ನು ತೆರೆಗೆ ತರುತ್ತಿದೆ. ಇನ್ನೊಂದು ವಿಶೇಷವೆಂದರೆ, ಇದು ಕೂಡ ‘ತಿಥಿ’ ಚಿತ್ರದಂತೆ ಪಕ್ಕಾ ಮಂಡ್ಯ ಶೈಲಿಯ ಚಿತ್ರವಾಗಿದ್ದು, ಇಡೀ ಚಿತ್ರದಲ್ಲಿ ಮಂಡ್ಯ, ಮಳವಳ್ಳಿ ಭಾಷಾ ಸೊಗಡನ್ನು ಕಾಣಬಹುದಂತೆ.
‘ಫುಲ್ ಟೈಟ್ ಪ್ಯಾತೆ’ ಚಿತ್ರದ ಬಿಡುಗಡೆಗೂ ಮುನ್ನ ಚಿತ್ರದ ಪ್ರಮೋಶನ್ ಭಾಗವಾಗಿ ಚಿತ್ರತಂಡ, ಚಿತ್ರದ ಟ್ರೇಲರ್ ಮತ್ತು ಆಡಿಯೋವನ್ನು ಬಿಡುಗಡೆ ಮಾಡಿತು. ನಟ ಲೂಸ್‌ಮಾದ ಯೋಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ‘ಫುಲ್ ಟೈಟ್ ಪ್ಯಾತೆ’ ಚಿತ್ರದ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿ ಹೊಸಬರ ಈ ಚಿತ್ರಕ್ಕೆ ಶುಭ ಹಾರೈಸಿದರು.
ಎಸ್.ಎಲ್.ಜಿ ಪುಟ್ಟಣ್ಣ ‘ಫುಲ್ ಟೈಟ್ ಪ್ಯಾತೆ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬ್ರದರ್ ಪಿಕ್ಚರ್ ಹೌಸ್ ಬ್ಯಾನರ್‌ನಲ್ಲಿ ಮಂಡ್ಯದ ಒಂದಷ್ಟು ಸಮಾನ ಮನಸ್ಕರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಮಹೇಶ್ ಛಾಯಾಗ್ರಹಣ, ಜಗದೀಶ್ ಮತ್ತು ಗಿರೀಶ್ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ರೇಂಜು, ಸಾಜೀವ್ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ ಎಂದು ಚಿತ್ರತಂಡ ಹೇಳುತ್ತಿರುವ ‘ಫುಲ್ ಟೈಟ್ ಪ್ಯಾತೆ’ ಚಿತ್ರ ಎಷ್ಟರ ಮಟ್ಟಿಗೆ ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುತ್ತದೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.