ಕೊರಟಗೆರೆ: ಕೆಲಸ ಮಾಡಲು ಜಾಗನೂ ಕೊಟ್ಟು ಅನುದಾನವು ನೀಡುತ್ತೇವೆ ಆದರೂ ಕಾಮಗಾರಿ ಪ್ರಾರಂಭ ಮಾಡಲು ವಿಳಂಬ ಧೂರಣೆ ಏಕೆ.? ಕಾಮಗಾರಿ ತಕ್ಷಣ ಪ್ರಾರಂಭಿಸುವ ಗುತ್ತಿಗೆದಾರರು ಕ್ಯೂನಲ್ಲಿ ಇದ್ದಾರೆ. ತಕ್ಷಣ ಜೆಜೆಎಂ ಕಾಮಗಾರಿ ಪ್ರಾರಂಭಿಸಿ 180 ದಿನದೊಳಗೆ ಕೆಲಸ ಮುಗಿಯದಿದ್ದರೆ ಮುಲಾಜಿಲ್ಲದೇ ಗುತ್ತಿಗೆ ಪರವಾನಗಿ ಕಪ್ಪುಪಟ್ಟಿಗೆ ಸೇರಿಸಿ ದಂಡ ಹಾಕುತ್ತೇನೆ ಹುಷಾರ್ ಎಂದು ಗುತ್ತಿಗೆದಾರನಿಗೆ ಜಿಪಂ ಸಿಇಓ ಪ್ರಭು.ಜಿ ಎಚ್ಚರಿಕೆ ನೀಡಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ, ಮಾವತ್ತೂರು ಮತ್ತು ಅಕ್ಕಿರಾಂಪುರ ಗ್ರಾಪಂ ವ್ಯಾಪ್ತಿಯ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಆಶ್ರಯ ಮನೆ ಮತ್ತು ನರೇಗಾ ಕಾಮಗಾರಿ ಸ್ಥಳಗಳಿಗೆ ಜು. 18ರ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದರು.
ಶಿಕ್ಷಣ ಕಾಶಿ ಎಂದೇ ಪ್ರಸಿದ್ದಿ ಪಡೆದ ಮಧುಗಿರಿ ಶೈಕ್ಷಣಿಕ ಜಿಲ್ಲೆ 3ನೇ ಸ್ಥಾನದಿಂದ 30ನೇ ಸ್ಥಾನಕ್ಕೆ ಕುಸಿದಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿರ್ಲಕ್ಷ್ಯ ತೋರುವ ಬಿಇಓ ಮತ್ತು ಶಿಕ್ಷಕರ ವಿರುದ್ದ ಕಟ್ಟುನಿಟ್ಟಿನ ಕ್ರಮ ಇರುತ್ತೆ. ಫಲಿತಾಂಶದ ವಿಚಾರದಲ್ಲಿ ನಾವು ರಾಜಿಯಾಗುವ ಪ್ರಶ್ನೆಯೇ ಇಲ್ಲ. ಶೇ.70 ರಿಂದ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಿಗೆ ಆಧ್ಯತೆ ನೀಡಿ ಮಕ್ಕಳ ಶಿಕ್ಷಣಕ್ಕೂ ಆಧ್ಯತೆ ನೀಡುತ್ತೇವೆ ಎಂದರು.
ಗ್ರಾಮೀಣ ಭಾಗದಲ್ಲಿ ಅಧಿಕಾರಿ ವರ್ಗ ಜನಸ್ನೇಹಿಯಾಗಿ ಕೆಲಸ ಮಾಡಬೇಕಿದೆ. ಸಾರ್ವಜನಿಕರನ್ನು ಸರಕಾರಿ ಕಚೇರಿಗೆ ಅಲೆದಾಡಿಸುವ ಕೆಲಸ ಮಾಡಬಾರದು. ಸರಕಾರಿ ಕಚೇರಿಯಲ್ಲಿ ಹೆಚ್ಚಿನ ಕಾಲಹರಣ ಮಾಡದೇ ಸಮಸ್ಯೆ ಇರುವ ಕಡೆಯಲ್ಲೇ ತೆರಳಿ ಕೆಲಸ ಮಾಡುವುದನ್ನು ರೂಢಿಸಿಕೊಂಡರೆ ಒಳ್ಳೆಯದು. ಕೆಲಸದ ಕಡತಗಳು ಕಚೇರಿಯಲ್ಲಿ ಇರಬಾರದು. ನಾನು ಯಾವುದೇ ವೇಳೆಗೆ ಕಚೇರಿ ಅಥವಾ ಹಳ್ಳಿಗಳಿಗೆ ಭೇಟಿ ನೀಡುತ್ತೇನೆ, ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಹೇಳಿದರು.
ಭೇಟಿಯ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಕುಡಿಯುವ ನೀರು ಎಇಇ ಕೀರ್ತಿನಾಯಕ್, ಸಾಮಾಜಿಕ ವಲಯ ಶಿಲ್ಪಾ, ಬಿಇಓ ನಟರಾಜು, ಜಿಪಂ ಎಇಇ ರವಿಕುಮಾರ್, ನರೇಗಾ ಎಡಿಎ ಗುರುಮೂರ್ತಿ, ಶಿವಪ್ರಸನ್ನ, ಮಧುಸೂಧನ್, ಗ್ರಾಪಂ ಪಿಡಿಓ ರವಿಕುಮಾರ್, ರಮೇಶ್, ಶಿವಕುಮಾರ್ ಸೇರಿದಂತೆ ಇತರರಿದ್ದರು.
ಸಿಇಓರಿಂದ ಬಿಇಓಗೆ ತರಾಟೆ:
ಸರಕಾರಿ ಶಾಲೆಗೆ ಇವತ್ತು ಜಿಪಂ ಸಿಇಓ ಬರ್ತಾರೇ ತಾಪಂ ಇಓ ಬರ್ತಾರೇ ಅಂತ ವಿಶೇಷತೆ ತೋರಿಕೆ ಬೇಡ. ಗೈರಾಗಿರುವ ವಿದ್ಯಾರ್ಥಿಯ ಹಾಜರಾತಿ ಏಕೆ? ಹಾಕಿದ್ದೀರಾ ನೀವು. ಸುಳ್ಳು ಹಾಜರಾತಿ ಹಾಕಲು ಕಾರಣ ಏನು. ಬಿಇಓ ಸಾಹೇಬ್ರೆ ಯಾರಿಗೆ ಬೆನ್ನು ತಟ್ಟಿಸಲು ಈ ಕೆಲಸ ಮಾಡ್ತೀರಾ ನೀವು. ವಿದ್ಯಾರ್ಥಿಗಳು ಶಾಲೆಗೆ ಗೈರಾಗಲು ಕಾರಣ ತಿಳಿದುಕೊಳ್ಳದೇ ನಮ್ಮನ್ನು ಮೆಚ್ಚಿಸುವ ಕೆಲಸ ದಯವಿಟ್ಟು ಮಾಡ್ಬೇಡಿ. ಪದೇ ಪದೇ ನಾನು ಹೇಳಿದರೂ ಈ ಕೆಲಸ ಮಾಡೋದು ಸರಿಯಲ್ಲ ಎಂದು ಬಿಇಓ ನಟರಾಜುಗೆ ಜಿಪಂ ಸಿಇಓ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಜಿಪಂ ಸಿಇಓ ಕೊರಟಗೆರೆ ರೌಂಡ್ಸ್:
ಕಂದಾಯ ಇಲಾಖೆಯಿಂದ ಮಂಜೂರಾಗಿರುವ ಸರಕಾರಿ ಜಾಗಗಳ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ, ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ಅಡುಗೆ ಕೋಣೆ ಮತ್ತು ಕೂಸಿನ ಮನೆಗಳ ವೀಕ್ಷಣೆ, ಜೆಜೆಎಂ ಕಾಮಗಾರಿಗಳ ಗುಣಮಟ್ಟದ ಪರಿಶೀಲನೆ ನಡೆಯಿತು.
ಜಿಪಂ ಸಿಇಓ, ಗ್ರಾಪಂ ಪಿಡಿಓ ಮತ್ತು ಸರಕಾರಿ ಶಿಕ್ಷಕರ ಜೊತೆ ವಿಶೇಷ ಸಭೆ ನಡೆಸಿದರು. ಶಿಥಿಲವಾದ ಸರಕಾರಿ ಶಾಲೆಗಳ ವಿಕ್ಷಣೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದರು. ಆಟದ ಮೈದಾನ, ಚರಂಡಿ, ಕಾಂಪೌಂಡ್ ಮತ್ತು ಅಡುಗೆ ಕೋಣೆ ಕಾಮಗಾರಿಗಳ ಗುಣಮಟ್ಟದ ಪರಿಶೀಲನೆ, ಹೀಗೆ.. ದಿನಪೂರ್ತಿ ಕೊರಟಗೆರೆ ರೌಂಡ್ಸ್ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ಕಂದಾಯ ಇಲಾಖೆಯಿಂದ ಪ್ರಸ್ತುತ 2200 ಎಕ್ರೆ ಜಮೀನು ಗ್ರಾಪಂಗೆ ಹಸ್ತಾಂತರ ಆಗಿದೆ. ರಾಜ್ಯಕ್ಕೆ ಮಾದರಿಯಾಗುವಂತೆ ಜಿಲ್ಲೆಯಲ್ಲಿ 25 ಸಾವಿರ ನಿವೇಶನ ನೀಡುವ ಸಂಕಲ್ಪವಿದೆ. ಸರಕಾರಿ ಶಾಲೆಗಳ ಅಭಿವೃದ್ದಿಗೆ ನರೇಗಾ ಯೋಜನೆಯಲ್ಲಿ 2 ಸಾವಿರ ಕಾಮಗಾರಿ ಮುಕ್ತಾಯ ಮತ್ತು 3500 ಸಾವಿರ ಕಾಮಗಾರಿ ಪ್ರಗತಿಯಲ್ಲಿವೆ. 100 ಕೋಟಿ ವೆಚ್ಚದ 3 ಲಕ್ಷ ಮೀಟರ್ ಚರಂಡಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಪ್ರತಿ ಗ್ರಾ.ಪಂ. ಗೆ 5 ಕೋಟಿ ನರೇಗಾ ಅನುಧಾನ ಬಳಕೆಗೆ ಅವಕಾಶವಿದೆ. –
ಪ್ರಭು.ಜಿ. ಜಿಪಂ ಸಿಇಓ. ತುಮಕೂರು