ತುಮಕೂರು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಕಡಿಮೆಯಾಗುತ್ತಿದೆ ಅಂದು ಕೊಂಡವರಿಗೆ ನಿರಾಸೆಯಾಗುತ್ತಲೇ ಇದೇ. ದಿನ ಬಿಟ್ಟು ದಿನ ಜಿಲ್ಲೆಯಲ್ಲಿ ಸೋಂಕು ಇರುವುದು ಕಂಡು ಬರುತ್ತಿದೆ. ಮಂಗಳವಾರ ಯಾವುದೇ ಸೋಂಕು ಕಂಡು ಬರಲಿಲ್ಲ, ಆದರೆ ಬುಧವಾರ ಮತ್ತೂಬ್ಬರಲ್ಲಿ ಸೋಂಕು ಇರುವುದು ದೃಢವಾಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಮುಂಬೈ ನಿಂದ ಬಂದವರಿಗೆ ಈ ಸೋಂಕು ಕಾಣಿಸಿ ಕೊಂಡಿದ್ದು, ಈತನಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಳ್ಳಿಗಳತ್ತ ಕೋವಿಡ್ 19: ಜಿಲ್ಲೆಯಲ್ಲಿ ಸೋಂಕಿ ತರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಈ ಕೋವಿಡ್-19 ಸಾಂಕ್ರಾಮಿಕ ರೋಗ ಜಿಲ್ಲೆಯಲ್ಲಿ ಹೆಚ್ಚು ಹರಡದಂತೆ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದರೂ ಮಹಾಮಾರಿ ಕೋವಿಡ್ 19 ಈಗ ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಿರುವುದು ಆತಂಕ ಮೂಡಿಸುತ್ತಿದೆ.
ಜನರಲ್ಲಿ ಆತಂಕ: ಜಿಲ್ಲೆಯ ಕೋವಿಡ್ ಆಸ್ಪತ್ರೆ ಯಲ್ಲಿ ತಪಾಸಣೆ ನಡೆಸಿ ಕಳುಹಿಸಿರುವ ಇನ್ನೂ 544 ಜನರ ಗಂಟಲು ಸ್ರಾವದ ಮಾದರಿ ವರದಿ ಬಾಕಿ ಇದೆ, ದಿನೇ ದಿನೆ ಸೋಂಕು ಕಾಣಿಸಿ ಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮೂಡಿದೆ.
ಆಂಧ್ರದಿಂದ ಹೆಚ್ಚು ಜನ ಆಗಮನ: ಕೋವಿಡ್ 19 ಜಿಲ್ಲೆಯಿಂದ ಹೋಗಿತು ಎಂದು ನಿರಾಳರಾ ಗಿದ್ದ ಜನರಿಗೆ ಬೇರೆ ರಾಜ್ಯಗಳಿಂದ 462 ಮಂದಿ ಜಿಲ್ಲೆಗೆ ಬಂದಿದ್ದು, ಅತಿ ಹೆಚ್ಚು ಸೋಂಕು ಇರುವ ರಾಜ್ಯಗಳಾದ ಆಂಧ್ರಪ್ರದೇಶ ದಿಂದಲೇ 133 ಅತಿ ಹೆಚ್ಚು ಮಂದಿ ಬಂದಿ ದ್ದಾರೆ. ಮಹಾರಾಷ್ಟ್ರದಿಂದ 113, ತಮಿಳು ನಾಡಿನಿಂದ 103 ಜನರು ಬಂದಿದ್ದಾರೆ. ಈ ವರೆಗೆ ಬಂದಿರುವ ವರದಿಗಳಲ್ಲಿ ಹೊರ ರಾಜ್ಯಗಳಾದ ದೆಹಲಿ, ಹೈದರಾಬಾದ್, ಮುಂಬೈ, ಗುಜರಾಜ್‌ನಿಂದ ಬಂದವರಿಗೇ ಹೆಚ್ಚು ಸೋಂಕು ಕಾಣಿಸಿ ಕೊಂಡಿರುವುದರಿಂದ ಹೊರ ರಾಜ್ಯಗಳಿಂದ ಬಂದಿರುವ ಇನ್ನೆಷ್ಟು ಜನರಿಗೆ ಈ ಮಹಾಮಾರಿ ಕಾಣಿಸಿ ಕೊಂಡಿದೆಯೋ ಎನ್ನುವ ಆತಂಕ ಜನರಲ್ಲಿದೆ.
ನಿಯಂತ್ರಿತ ವಲಯ: ತಾಲೂಕಿನ ಹೆಬ್ಬೂರು ಹೋಬಳಿಯ ಬಳ್ಳಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಯಮ್ಮನ ಪಾಳ್ಯ ಹಾಗೂ ಬೆಳ್ಳಾವಿ ಹೋಬಳಿಯ ಮಾವಿನಕುಂಟೆ ಗ್ರಾಮದ ವಾಸಿ ಕೆ.ಎಸ್.ಆರ್.ಟಿ.ಸಿ .ಚಾಲಕನಿಗೆ, ಸೋಂಕು ಕಾಣಿಸಿ ಕೊಂಡಿದೆ ಜೊತೆಗೆ ಸದಾಶಿವನಗರ ಮತ್ತು ಖಾದರ್ ನಗರಗಳನ್ನು ನಿಯಂತ್ರಿತ ವಲಯವನ್ನಾಗಿ ಪರಿವರ್ತಿಸಲಾಗಿದೆ.
25 ಮಂದಿ ಕ್ವಾರಂಟೈನ್: ಕೆಎಸ್‌ಆರ್‌ಟಿಸಿ ಬಸ್ ಚಾಲಕ ವಾಸವಿದ್ದ ಮಾವಿನಕುಂಟೆ ಗ್ರಾಮದಲ್ಲಿ ಸುಮಾರು 80ಕ್ಕೂ ಅಧಿಕ ಮನೆಗಳಿವೆ ಕೆಎಸ್‌ಆರ್‌ಟಿಸಿ ಚಾಲಕನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 25 ಮಂದಿಯನ್ನು ಕ್ವಾರಂಟೈನ್ ಮಾಡಿದ್ದಾರೆ.
ಒಬ್ಬರಿಗೆ ಕೋವಿಡ್ 19 ಸೋಂಕು ದೃಢ: ತುಮಕೂರು ಜಿಲ್ಲೆಯಲ್ಲಿ ಬುಧವಾರ ದಂದು ಹೊಸದಾಗಿ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿಯು 33 ವರ್ಷದ ಪುರುಷನಾಗಿದ್ದು, ಮುಂಬೈ ಹೋಟೆಲ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈತನು ಮೇ 24ರಂದು ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಇಳಿದಿದ್ದಾರೆ.
ಭಾನುವಾರದಂದು ಕರ್ಫ್ಯೂ ಜಾರಿಯಲ್ಲಿದ್ದರಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಇವರ ಪ್ರಯಾಣದ ಹಿಸ್ಟರಿ ಇದ್ದಿದ್ದರಿಂದ ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಪಾಸಿಟಿವ್ ಬಂದಿದೆ. ಸೋಂಕಿತ ವ್ಯಕ್ತಿಯನ್ನು ಪಿ-2343 ಗುರುತಿಸಿದ್ದು, ಈತನು ಮೈಸೂರಿನ ಮೆಟಗಳ್ಳಿ ಯವರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಜ್ವರ, ಉಸಿರಾಟದ ತೊಂದರೆಯಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.