Advertisement
ಗ್ರಾಮೀಣ ಪ್ರದೇಶದಲ್ಲಿ ಬಯಲು ಮಲ ವಿಸರ್ಜನೆ ಪದ್ಧತಿ ಇರುವುದರಿಂದ ಅನೇಕ ರೀತಿಯ ತೊಂದರೆಗಳು ಉಂಟಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಪ್ರತಿ ವರ್ಷ ಅನೇಕ ಜನರು ವಿಷಜಂತುಗಳ ಕಡಿತದಿಂದ ಹಾಗೂ ಕಾಡು ಪ್ರಾಣಿಗಳ ದಾಳಿಯಿಂದ ತೊಂದರೆ ಅನುಭವಿಸುತ್ತಲೇ ಇದ್ದಾರೆ. ಆದರೂ ಜಿಲ್ಲೆಯ ಗ್ರಾಮೀಣ ಜನರು ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.
Related Articles
Advertisement
1.85 ಲಕ್ಷ ಕುಟುಂಬಗಳಿಗೆ ಶೌಚಾಲಯವಿಲ್ಲ: ಜಿಲ್ಲೆಯ ಒಟ್ಟು 6.40ಲಕ್ಷ ಕುಟುಂಬಗಳಲ್ಲಿ 321 ಗ್ರಾಮಪಂಚಾಯ್ತಿ ಗಳಲ್ಲಿ 495769ಲಕ್ಷ ಮನೆಗಳಲ್ಲಿ 2017 ಇಂದಿನವರೆಗೆ 3,10,769 ಮನೆಗಳಲ್ಲಿ ಶೌಚಾಲಯ ನಿರ್ಮಾಣಗೊಂಡಿದ್ದು, ಇನ್ನೂ 1.85 ಲಕ್ಷ ಕುಟುಂಬಗಳಲ್ಲಿ ಶೌಚಾಲಯವಿಲ್ಲ ಎನ್ನುವುದೇ ವಿಪರ್ಯಾಸವಾಗಿದೆ.
ಜನರಲ್ಲಿ ಇಚ್ಛಾಶಕ್ತಿಯ ಕೊರತೆ: ಸ್ವತ್ಛ ಭಾರತ ಮಿಷನ್ ಅಡಿಯಲ್ಲಿ ಸರಕಾರ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಬೇಕು ಯಾರೂ ಬಯಲಲ್ಲಿ ಶೌಚ ಮಾಡಬಾರದು ಎನ್ನುವ ಉದ್ದೇಶ ಹೊಂದಿದೆ. ಇದಕ್ಕೆ ನಾಗರಿಕರು ತಮ್ಮ ಮನೆಗಳ ಬಳಿ ಶೌಚಾಲಯ ನಿರ್ಮಿಸಿಕೊಳ್ಳಲುಮುಂದಾಗಬೇಕು ಬಿಪಿಎಲ್ ಕುಟುಂಬಕ್ಕೆ 15 ಸಾವಿರ ರೂ ಸಹಾಯಧನ ನೀಡುತ್ತಿದೆ. ಈ ವಿಚಾರವನ್ನು ಜಿಲ್ಲೆಯ 321 ಗ್ರಾಮಪಂಚಾಯಿತಿಗಳಲ್ಲಿ ಬೀದಿನಾಟಕ, ಕರಪತ್ರ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಮೂಲಕ ವ್ಯಾಪಕ ಪ್ರಚಾರ ಮಾಡಲಾಗಿದೆ.
ಆದರೆ ಜನರಲ್ಲಿನ ಇಚ್ಛಾಶಕ್ತಿಯ ಕೊರತೆಯಿಂದ ಶೌಚಾಲಯ ನಿರ್ಮಾಣ ಕೊಂಚ ವಿಳಂಬವಾಗಿದೆ. ಒಂದು ಮನೆಯಲ್ಲಿ ಎರಡೆರಡು ಮೊಬೈಲ್ ಪೋನ್ ಇಟ್ಟುಕೊಳ್ಳುವ ಗ್ರಾಮೀಣ ಜನತೆ ಜಾತ್ರೆ, ಉತ್ಸವ, ಹಬ್ಬ ಹರಿದಿನಗಳಿಗಾಗಿ ಸಾವಿರಾರು ರೂ. ಖರ್ಚು ಮಾಡುತ್ತಾರೆ. ತಮ್ಮ ಗ್ರಾಮದ ಪರಿಸರ ಹಾಗೂ ಕುಟುಂಬದ ಮಹಿಳೆಯರು ಮಲವಿಸರ್ಜನೆಗಾಗಿ ಚೆಂಬು ಹಿಡಿದುಕೊಂಡು ಬೇಲಿ ಸಾಲು, ತೆರೆಮರೆಗಳಿಗೆ ಹೋದಾಗ ಅನೇಕ ಅವಘಡಗಳು ಸಂಭವಿಸುವುದರ ಜೊತೆಗೆ ರೋಗ ರುಜನುಗಳು ಕಂಡು ಬರುತ್ತಿದ್ದರೂ ಜನರು ಶೌಚಾಲಯ ಕಟ್ಟಿಸಿಕೊಳ್ಳಲು ಹಿಂಜರಿಯುತ್ತಿರುವುದು ದುರದೃಷ್ಟ ಕರ ಸಂಗತಿಯಾಗಿದೆ.
ಜಿಲ್ಲೆಯ 321 ಗ್ರಾಮಪಂಚಾಯಿತಿಗಳಲ್ಲಿ ಜಿಲ್ಲೆಯ 10 ಗ್ರಾಮ ಪಂಚಾಯ್ತಿ ಗಳು ಶೇ100 ರಷ್ಟು ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮ ಪಂಚಾಯ್ತಿ ಗಳಾಗಿವೆ ಅವುಗಳಲ್ಲಿ ತುಮಕೂರು ತಾಲೂಕಿನ 7 ಗ್ರಾಮ ಪಂಚಾಯ್ತಿಗಳಾದ ಅರಕೆರೆ, ಊರುಕೆರೆ, ಬೆಳಗುಂಬ, ಬುಗುಡನಹಳ್ಳಿ, ಹಿರೇಹಳ್ಳಿ, ಸೌಂದೇನಹಳ್ಳಿ, ಹೆಗ್ಗೆರೆ ಗ್ರಾಮಪಂಚಾಯ್ತಿಗಳು, ತುರುವೇಕೆರೆಯ ತಾಲೂಕಿನ ಮಾಯುಸಂದ್ರ, ಅಮ್ಮಸಂದ್ರ, ಕುಣಿಗಲ್ ತಾಲೂಕಿನ ಬೇಗೂರು ಗ್ರಾಮ ಪಂಚಾಯ್ತಿಗಳು ಶೇ.100 ಸಾಧನೆ ಮಾಡಿವೆ.
ಸರ್ಕಾರ ಏನೆಲ್ಲಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರೂ ಜಾರಿಗೊಳಿಸುವ ಅಧಿಕಾರಿಗಳ ಇಚ್ಛಾಶಕ್ತಿಯ ಜೊತೆಗೆ ನಾಗರೀಕರ ಸಹಭಾಗಿತ್ವವೂ ಮುಖ್ಯವಾಗಿದ್ದು, ಜಿಲ್ಲೆಯಲ್ಲಿ ಬಯಲು ಶೌಚಾಲಯದಿಂದ ಹಲವು ಜನರು ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಇದಕ್ಕೆ ಮುಕ್ತಿ ಎಂದು?
ತುಮಕೂರು ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತ ವಾಗಿಸಲು ವ್ಯಾಪಕ ಪ್ರಚಾರ ಮಾಡಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ನಾಗರಿಕರು ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಜನರು ಮನಸ್ಸು ಮಾಡದ ಹೊರತು ಯಾವುದೇ ಯೋಜನೆಗಳು ಫಲಪ್ರದವಾಗುವುದಿಲ್ಲ. ಉತ್ತಮ ಪರಿಸರ ನಿರ್ಮಾಣ ಮಾಡಬೇಕಾದರೆ ನಾಗರಿಕರ ಸಹಭಾಗಿತ್ವವೂ ಮುಖ್ಯ-ಕೆ.ಜಿ.ಶಾಂತರಾಮ್, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿಲ್ಲೆಯನ್ನು ಸಂಪೂರ್ಣ ಬಯಲು ಶೌಚಾಲಯ ಮುಕ್ತಗೊಳಿಸುವ ಗುರಿ ಹೊಂದಿದ್ದೇವೆ. ಈ ವರ್ಷ ಈವರೆಗೆ 30,000 ಶೌಚಾಲಯ ನಿರ್ಮಾಣ ಮಾಡಿದ್ದೇವೆ.ಬರುವ ಮಾರ್ಚ್ ಒಳಗೆ ಜಿಲ್ಲೆಯಲ್ಲಿ ಉಳಿದಿರುವ 1,85,000 ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ.
-ಪಿ.ಕೃಷ್ಣಪ್ಪ ಜಿಪಂ ಉಪ ಕಾರ್ಯದರ್ಶಿ * ಚಿ.ನಿ. ಪುರುಷೋತ್ತಮ್