ಕುಣಿಗಲ್: ಇಬ್ಬರು ವ್ಯಕ್ತಿಗಳು ಕರ್ತವ್ಯ ನಿರತ ಇಬ್ಬರು ಪೊಲೀಸರ ಕೈಯಲ್ಲಿದ್ದ ಲಾಠಿ ಕಿತ್ತುಕೊಂಡು ಹಲ್ಲೆ ನಡೆಸಿರುವ ಘಟನೆ ಕಳೆದ ರಾತ್ರಿ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದ್ದು, ಘಟನೆ ಸಂಬಂಧಿಸಿದಂತೆ ಗ್ರಾಮಲೆಕ್ಕಿಗ ಸೇರಿದಂತೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್‌ಗಳಾದ ಮಿಥನ್, ಸುಮನ್ ಅವರ ಮೇಲೆ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳಾದ ಗ್ರಾಮಲೆಕ್ಕಿಗ ವೆಂಕಟೇಶ್ ಹಾಗೂ ರಾಮಚಂದ್ರ ಹಲ್ಲೆ ಮಾಡಿರುವ ವ್ಯಕ್ತಿಗಳು ಎಂದು ತಿಳಿದು ಬಂದಿದೆ.
ಘಟನೆ ವಿವರ: ಕಳೆದ ರಾತ್ರಿ ಸುಮಾರು 11-45ಕ್ಕೆ ಪೊಲೀಸ್ ಕಾನ್ಸ್ಟೇಬಲ್‌ಗಳಾದ ಮಿಥನ್ ಹಾಗೂ ಸುಮನ್ ಹೌಸಿಂಗ್ ಬೋರ್ಡ್ ಸ್ಟೇಲ್ಲಾ ಮೇರಿಸ್ ಸ್ಕೂಲ್ ರಸ್ತೆಯಲ್ಲಿನ ಮೋದಿ ಕೇರ್ ಅಂಗಡಿಯ ಮುಂಭಾಗದಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿರುವಾಗ ಅಲ್ಲೆ ಎದುರಿನ ಮನೆ ಮೇಲೆ ಇದ್ದ ಇಬ್ಬರು ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ಕಾನ್ಸ್ಟೇಬಲ್‌ಗಳನ್ನು ನೋಡಿ ಯಾರೋ ನೀವು ಮೋದಿ ಕೇರ್ ಮುಂದೆ ಸೆಲ್ಪಿ ಪೋಟೊ ತೆಗೆದುಕೊಳ್ಳುತ್ತೀರ ಎಂದು ಅವಾಚ್ಯವಾದ ಶಬ್ದಗಳಿಂದ ನಿಂದಿಸಿ ಕೂಗಾಡಿದ್ದಾರೆ. ಬಳಿಕ ಕಾನ್ಸ್ಟೇಬಲ್‌ಗಳು, ನಾವು ಪೊಲೀಸರು ರಾತ್ರಿ ಗಸ್ತಿಗಾಗಿ ಬಂದಿದ್ದೇವೆ. ನಮ್ಮ ಹಾಜರಾತಿಗಾಗಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೂಡಲೇ ಆ ಇಬ್ಬರು ವ್ಯಕ್ತಿಗಳು ಮನೆಯಿಂದ ಇಳಿದು ಬಂದು ಕುಣಿಗಲ್‌ನಲ್ಲಿ ಇರುವ ಎಲ್ಲಾ ಮೋದಿ ಕೇರ್ ಮುಂದೆಯೂ ಸೆಲ್ಪಿ ಪೋಟೋ ತೆಗೆದುಕೊಳ್ಳುತ್ತೀರ ಎಂದು ಏರುದ್ವನಿಯಲ್ಲಿ ಕೂಗಾಡಿ ಸಮವಸ್ತ್ರದಲ್ಲಿದ್ದ ಇಬ್ಬರು ಕಾನ್ಸ್ಟೇಬಲ್‌ಗಳ ಮೇಲೆ ಕೈಯಿಂದ ಹಲ್ಲೆ ನಡೆಸಿರುವುದಲ್ಲದೆ ಕಾನ್ಸ್ಟೇಬಲ್ ಕೈಯಲ್ಲಿದ್ದ ಲಾಠಿಯನ್ನು ಕಿತ್ತುಕೊಂಡು ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಮೊಬೈಲ್ ಕಿತ್ತುಕೊಂಡು ಹಾಳು ಮಾಡಿದ್ದಾರೆ.
ಈ ಸಂದರ್ಭದ ಕುರಿತು ಕಾನ್ಸ್ಟೇಬಲ್ ಮಿಥುನ್ ಘಟನೆಯಲ್ಲಿ ನನಗೆ ಗಾಯವಾಗಿದೆ ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದು, ಕಾನ್ಸ್ಟೇಬಲ್ ಸುಮನ್ ತಕ್ಷಣ 112 ಕ್ಕೆ ಕರೆ ಮಾಡಿದ್ದು, 112 ಸಿಬ್ಬಂದಿ ಸ್ಥಳಕ್ಕೆ ಬಂದು ಜಗಳ ಮಾಡುತ್ತಿದ್ದವರಿಂದ ಕಾನ್ಸ್ಟೇಬಲ್‌ಗಳನ್ನು ಬಿಡಿಸಿದ್ದಾರೆ ಎಂದು ವಿವರಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪಟ್ಟಣದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.