ತುಮಕೂರು: ನಗರದಲ್ಲಿ ಭಾನುವಾರ ನಡೆದ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ನ.27ರ ಸೋಮವಾರ ನಗರದ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದರು.
ಈ ಸಂಬಂಧ ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, ಇಂತಹ ಘಟನೆ ಆಗಬಾರದಿತ್ತು. ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿದಿದೆ. ಅವರು ಡೆತ್ ನೋಟ್ ನಲ್ಲಿ ಬರೆದಿರುವವರ ವಿಚಾರಣೆಯನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಆತ್ಮಹತ್ಯೆ ಮಾಡಿಕೊಂಡಿರುವವರು ಕೇವಲ 1.5 ಲಕ್ಷ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇಷ್ಟು ಹಣಕ್ಕಾಗಿ ಐದು ಜನರ ಪ್ರಾಣ ಹೋಗಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ ಅದನ್ನು ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ ಸಿಇಒ ಜೆ.ಪ್ರಭು ಮೊದಲಾದವರು ಇದ್ದರು.
ಇದೇ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಘಟನೆ ಕುರಿತು ಗೃಹ ಸಚಿವರಿಗೆ ಮಾಹಿತಿ ನೀಡಿದರು.
ಡೆತ್ ನೋಟ್ ನಲ್ಲಿ ಬರೆದಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.