Advertisement

ಜಿಲ್ಲಾಧ್ಯಕ್ಷ ಪಟ್ಟ ಬೇಡ ಎಂದ ಕೈ ನಾಯಕರು

03:04 PM Jul 20, 2021 | Team Udayavani |

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಬೇಕು ಎನ್ನುವ ಕಲ್ಪನೆಯಡಿ ಜಿಲ್ಲಾ ಮಟ್ಟದಲ್ಲಿ ಪಕ್ಷ ಬಲಿಷ್ಠಗೊಳಿಸಲು ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಗದ್ದುಗೆ ಏರಲು ಮಾಜಿಸಚಿವಟಿ.ಬಿ.ಜಯಚಂದ್ರ ನಿರಾಸಕ್ತಿ ತೋರಿದ್ದಾರೆ. ಅಲ್ಲದೇ, ಮುದ್ದಹನುಮೇಗೌಡ ಅವರೂಒಲ್ಲೆ ಎಂದಿದ್ದು ಮುಂದೆ “ಕೈ’ಅಧ್ಯಕ್ಷರು ಯಾರಾಗ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.

Advertisement

ತುಮಕೂರು: ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಪಟ್ಟವನ್ನು ಮಾಜಿ ಸಚಿವ ಟಿ.ಬಿ.ಜಯಚಂದ್ರರಿಗೆ ವಹಿಸಲು ಯತ್ನ ನಡೆಸಿದ್ದು ಅದಕ್ಕೆ ಟಿ.ಬಿ.ಜಯಚಂದ್ರರಿಂದ ನಿರಾಸಕ್ತಿ ವ್ಯಕ್ತವಾಗಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಜಿಲ್ಲೆಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಮುಖಂಡರಾದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ, ಮಾಜಿ ಸಚಿವರಾಜ ಟಿ.ಬಿ.ಜಯಚಂದ್ರ, ವೆಂಕಟರಮಣಪ್ಪ, ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ಶಾಸಕರಾದ ಡಾ.ರಂಗನಾಥ್‌, ಮಾಜಿ ಶಾಸಕರಾದ ಡಾ.ಎಸ್‌.ರಫೀಕ್‌ಅಹಮದ್‌,.ಎಸ್‌.ಷಫೀಅಹಮದ್‌, ಕೆ.ಷಡಕ್ಷರಿ ಸೇರಿದಂತೆ ಹಲವರು ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಮುಂದೆ ಪಕ್ಷವನ್ನು ಸದೃಢ ಗೊಳಿಸಲು ಹಲವು ಸಭೆಗಳನ್ನು ನಡೆಸಿದ್ದಾರೆ.

ನನಗೆ ಬೇಡ: ಪಕ್ಷವನ್ನು ಮತ್ತಷ್ಟು ಸಂಘಟಿಸಲು ಈಗ ಹಾಲಿ ಜಿಲ್ಲಾಧ್ಯಕ್ಷರಾಗಿ ಇರುವ ಆರ್‌.ರಾಮಕೃಷ್ಣ ಅವರನ್ನು ಬದಲಿಸಿ ಆ ಸ್ಥಾನಕ್ಕೆ ಉತ್ತಮರನ್ನು ಕೂರಿಸಲು ಕಾಂಗ್ರೆಸ್‌ ಮುಖಂಡರು ಒಲವು ವ್ಯಕ್ತಪಡಿಸಿದ್ದರು. ಈ ಮುನ್ನ ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರನ್ನು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಲು ಶತಪ್ರಯತ್ನ ಮಾಡಿದರೂ, ಅವರು ನಾನು ಅಧ್ಯಕ್ಷನಾಗಲಾರೆ ಎಂದುಹೇಳಿದರು.

ನಂತರ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಜಿಲ್ಲಾ ಸಮಿತಿ ಮುಖಂಡರು ರಾಜ್ಯ ಕಾಂಗ್ರೆಸ್‌ ಮುಖಂಡರೊಂದಿಗೂ ಮಾತುಕತೆ ನಡೆಸಿ ಇನ್ನೇನು ಘೋಷಣೆಯಾಗಬೇಕು ಎನ್ನುವ ವೇಳೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೂ ಜಿಲ್ಲಾ ಅಧ್ಯಕ್ಷ ಗದ್ದುಗೆ ಏರಲು ಒಲ್ಲೆ ಎಂದಿದ್ದಾರೆ ಎನ್ನುವ ವಿಷಯ ತಿಳಿದುಬಂದಿದೆ.

Advertisement

ಜಯಚಂದ್ರ ರಾಜ್ಯ ನಾಯಕ, ಜಿಲ್ಲೆಗೆ ಸೀಮಿತ ಬೇಡ: ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ರಾಜ್ಯಮಟ್ಟದ ನಾಯಕರು. ಅವರನ್ನು ಜಿಲ್ಲೆಗೆ ಸೀಮಿತ ಮಾಡುವುದು ಬೇಡ ಎನ್ನುವುದು ಅವರ ಬೆಂಬಲಿಗರವಾದ. ಟಿ.ಬಿ.ಜಯಚಂದ್ರ ಅವರನ್ನು ಜಿಲ್ಲಾಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವ ವಿಷಯ ಬಹಿರಂಗವಾಗಿರುವಂತೆ ಅವರ ಬೆಂಬಲಿಗರಿಂದಲೂ ವಿರೋಧ ವ್ಯಕ್ತವಾಗಿದೆ.

ತಾವು ರಾಜ್ಯ ಮಟ್ಟದ ನಾಯಕರು. ಕೇವಲ ಜಿಲ್ಲೆಗೆ ಸೀಮಿತ ಆಗಬೇಡಿ. ರಾಜ್ಯ ಮಟ್ಟದ ಹುದ್ದೆ ನೀಡಿದರೆ ಸ್ವೀಕರಿಸಿ ಜಿಲ್ಲಾ ಅಧ್ಯಕ್ಷ ಸ್ಥಾನ ಬೇಡ ಎಂದು ಅವರ ಅಭಿಮಾನಿಗಳು ಒತ್ತಡ ಹಾಕಿರುವ ಹಿನ್ನೆಲೆಯಲ್ಲಿ ಟಿ.ಬಿ.ಜಯಚಂದ್ರ ಅವರು ಜಿಲ್ಲಾಧ್ಯಕ್ಷ ಸ್ಥಾನ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ತಲೆಬಿಸಿ: ಇತ್ತ ನಿ‌ ರೀಕ್ಷೆ ಹೊಂದಿದ್ದ ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡರಂತೆಯೇ ಮಾಜಿ ಶಾಸಕ ಟಿ.ಬಿ.ಜಯಚಂದ್ರ ಅವರೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಬೇಡ ಎಂದು ಹೇಳುತ್ತಿದ್ದಾರೆ. ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ ಒತ್ತಡಕ್ಕೆ ಮಣಿಯುತ್ತಾರೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ಆದರೆ, ಜಯಚಂದ್ರ ಒಪ್ಪುವುದಿಲ್ಲ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಕಾಂಗ್ರೆಸ್‌ ಅನ್ನು ಜಿಲ್ಲೆಯಲ್ಲಿ ಸಂಘಟಿಸಬೇಕು, ಮುಂದೆ ಬರಲಿರುವ ಜಿಪಂ, ತಾಪಂ ಚುನಾವಣೆ ಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ವಿಧಾನಸಭಾ ಚುನಾವಣೆಗೂ ಪಕ್ಷ ಸಂಘಟಿಸಬೇಕು, ಅಂತಹ ಅಭ್ಯರ್ಥಿ ಯಾರು ಇದ್ದಾರೆ. ಯಾರನ್ನು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ತಲೆ ಬಿಸಿ ಮುಖಂಡರಲ್ಲಿ ಉಂಟಾಗಿದೆ.

ಜಯಚಂದ್ರರಿಗೆ ರಾಜ್ಯಮಟ್ಟದ ಸ್ಥಾನಮಾನ ನೀಡಲು ಆಗ್ರಹ : ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು 1968ರಲ್ಲಿ ಕೆ.ಮಲ್ಲಣ್ಣ ಅವರ ನೇತೃತ್ವದಲ್ಲಿಕಾಂಗ್ರೆಸ್‌ಗೆ ಸೇರಿದರು. ಕಳೆದ 5 ದಶಕಗಳಕಾಲ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಅಂದಿನಿಂದಲೂ ಕಾಂಗ್ರೆಸ್‌ ನಲ್ಲಿಯೇ ಇದ್ದು 1978ರಲ್ಲಿಯೇ ಶಾಸಕರಾಗಿ ವಿಧಾನ ಸಭೆ ಪ್ರವೇಶ ಮಾಡಿ ಸಚಿವರಾಗಿ, ದೆಹಲಿ ಪ್ರತಿನಿಧಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ನಾಯಕರು ರಾಜ್ಯ ಮಟ್ಟದ ನಾಯಕರು. ಅವರಿಗೆ ರಾಜ್ಯಮಟ್ಟದಲ್ಲಿ ಸ್ಥಾನಮಾನ ದೊರೆಯಬೇಕು. ಜಿಲ್ಲಾ ಮಟ್ಟದ ಸ್ಥಾನ ಬೇಡ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಕುರಿತು ನನ್ನ ಹೆಸರು ಕೇಳಿ ಬಂದಿದೆ. ಆದರೆ, ನಾನು ಇನ್ನೂಈ ಬಗ್ಗೆ ಏನೂ ನಿರ್ಧಾರ ಕೈಗೊಂಡಿಲ್ಲ. ಜಿಲ್ಲಾಧ್ಯಕ್ಷ ಸ್ಥಾನದ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. – ಟಿ.ಬಿ.ಜಯಚಂದ್ರ, ಮಾಜಿ ಸಚಿವ

ಜಿಲ್ಲಾ ಕಾಂಗ್ರೆಸ್‌ಗೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ನಮ್ಮ ಪಕ್ಷದ ಮುಖಂಡರು ಒತ್ತಾಯ ಮಾಡಿದ್ದು ನಿಜ. ಆದರೆ, ನಾನೇ ಬೇಡ ಎಂದು ಹೇಳಿದ್ದೆ. ಈ ಹಿಂದೆ 8 ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಯಾರಾದರೂ ಯುವಕರಿಗೆ ನೀಡಿ ಎಂದಿದ್ದೇನೆ.– ಎಸ್‌.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ

 

– ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next