ತುಮಕೂರು: ಇಬ್ಬರು ಮಹಿಳೆಯರು ಎರಡು ಬಸ್ ಗಳ ಮಧ್ಯೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಿಹಳ್ಳಿ ಗ್ರಾಮದ ಪುಟ್ಟತಾಯಮ್ಮ ಹಾಗೂ ಪಂಕಜ ಮೃತಪಟ್ಟ ಮಹಿಳೆಯರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಿಹಳ್ಳಿ ಗ್ರಾಮದ ಆರು ಮಹಿಳೆಯರು ತುಮಕೂರಿನ ಗೊರವನಹಳ್ಳಿ ದೇವಸ್ಥಾನಕ್ಕೆ ಹೋಗಲು ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದರು. ಈ ಸಂದರ್ಭ ಮಹಿಳೆಯರು ಬಸ್ ನಿಲ್ದಾಣಕ್ಕೆ ಬಂದ ಕೂಡಲೇ ಬಸ್ ಹತ್ತಲು ಮುಂದಾದಾಗ ಬಸ್ ಏಕಾಏಕಿ ಹಿಂಬದಿ ಚಲಿಸಿದ್ದು, ಎರಡು ಬಸ್ ಗಳ ನಡುವೆ ಇಬ್ಬರು ಮಹಿಳೆಯರು ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಮಹಿಳೆಯರ ಜೊತೆಯಲ್ಲಿದ್ದ ನಾಲ್ವರು ಮಹಿಳೆಯರಾರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಘಟನೆ ನಡೆದ ಕೂಡಲೇ ಕೆಎಸ್ಆರ್ ಟಿಸಿ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಮೃತಪಟ್ಟ ಮಹಿಳೆಯರ ಶವಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಫ್ರೀ ಬಸ್ ಎಂದು ಮಹಿಳೆಯರು ದಂಬಾಲು ಬಿದ್ದು ದೇವಸ್ಥಾನಕ್ಕೆ ಹೊರಟ್ಟಿದ್ದರು.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಜಾರಿಗೆ ತಂದಿದ್ದು, ಇದೇ ಮೊದಲ ಬಾರಿಗೆ ಬಸ್ ನಲ್ಲಿ ದೇವಸ್ಥಾನಕ್ಕಾಗಿ ತೆರಳಿದ್ದ ಮಹಿಳೆಯರು ದಾರುಣ ಸಾವನ್ನಪ್ಪಿರುವುದು ನಿಜಕ್ಕೂ ಶೋಚನೀಯ. ಇದೇ ಸಂದರ್ಭದಲ್ಲಿ ಅವರ ಜೊತೆಗಿದ್ದ ಇನ್ನೊಬ್ಬ ಮಹಿಳೆ ಪುಷ್ಪ ಪ್ರತಿಕ್ರಿಯಿಸಿ, ಇದೇ ಮೊದಲ ಬಾರಿಗೆ ಫ್ರೀ ಬಸ್ ಎಂದು ದೇವಸ್ಥಾನಕ್ಕಾಗಿ ಆಗಮಿಸಿದ್ದು ಈ ಸಂದರ್ಭ ಇಂತಹ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ
ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.