Advertisement

ತುಂಬೆ ನೂತನ ಅಣೆಕಟ್ಟು: ಸಂತ್ರಸ್ತರಿಗೆ ಇನ್ನೂ ವಿತರಣೆಯಾಗಿಲ್ಲ ಪರಿಹಾರ

10:26 AM Jul 08, 2019 | keerthan |

ಬಂಟ್ವಾಳ: ತುಂಬೆಯ ನೂತನ ಅಣೆಕಟ್ಟಿನಲ್ಲಿ 6 ಮೀ. ಎತ್ತರಕ್ಕೆ ನೀರು ನಿಲ್ಲಿಸಿದ್ದರಿಂದ ಸಂತ್ರಸ್ತರಾದ ಕೃಷಿಕ ರಿಗೆ 17.5 ಕೋ.ರೂ. ಪರಿಹಾರ ಧನ ಮಂಜೂರಾಗಿದ್ದರೂ ಪಾವತಿ ಯಾಗಿರುವುದು ಕೇವಲ 7.78 ಕೋ.ರೂ. ಈ ನಡುವೆ 7 ಮೀ. ನೀರು ನಿಲ್ಲಿಸುವ ಪ್ರಸ್ತಾವ ಕೇಳಿಬರುತ್ತಿದ್ದು, ಕೃಷಿಕರನ್ನು ಆತಂಕಕ್ಕೀಡು ಮಾಡಿದೆ.

Advertisement

6 ಮೀ. ವರೆಗೆ ನೀರು ನಿಲ್ಲಿಸಿದ್ದರಿಂದ ಮಂಗಳೂರು ಮನಪಾ ಪ್ರಕಾರ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು, ಪಾಣೆ ಮಂಗಳೂರು, ಬಿ.ಮೂಡ ಮತ್ತು ಕಳ್ಳಿಗೆ ಗ್ರಾಮಗಳ ಒಟ್ಟು 65.68 ಎಕರೆ ಜಲಾವೃತವಾಗಿದೆ. ಭೂಮಿ ಖರೀದಿ ಮತ್ತು ಬಾಡಿಗೆ ಎಂದು ಪರಿಹಾರ ವಿತರಿಸಲಾಗುತ್ತಿದೆ. ಈವರೆಗೆ 28 ಮಂದಿಗಷ್ಟೇ ಪರಿಹಾರ ವಿತರಣೆ ಯಾಗಿದ್ದು, 40 ಮಂದಿಗೆ ಇನ್ನೂ ಆಗಿಲ್ಲ. ಪಾಲಿಕೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಜು. 3ರಂದು ತುಂಬೆಯಲ್ಲಿ ಸಂತ್ರಸ್ತರ ಸಭೆ ಮಾಡಿ ಮಾಹಿತಿ ನೀಡಿದ್ದಾರೆ.

ಗೊಂದಲ ಕಾರಣ
ಸಂತ್ರಸ್ತ ಕೃಷಿಕರ ಜಮೀನು ದಾಖಲೆಗಳಲ್ಲಿ ಗೊಂದಲ ಇರುವು ದರಿಂದ ಪರಿಹಾರ ವಿತರಣೆ ವಿಳಂಬ ವಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಜತೆಗೆ ಲೋಕಸಭಾ ಚುನಾವಣೆ ಮತ್ತು ಪಾಲಿಕೆಯ ಖಜಾನೆಯಲ್ಲಿನ ತಾಂತ್ರಿಕ ದೋಷವೂ ವಿಳಂಬಕ್ಕೆ ಕಾರಣವಾಗಿತ್ತು ಎಂದು ಮನಪಾ ಮೂಲಗಳು ತಿಳಿಸುತ್ತವೆ.

ಸಂತ್ರಸ್ತ ರೈತರ ವಿವರ
6 ಮೀ. ನೀರು ನಿಲ್ಲಿಸಿದ್ದರಿಂದ ಒಟ್ಟು 65.68 ಎಕರೆ ಭೂಮಿ ಮುಳುಗಡೆ ಯಾಗಿದೆ. 4ರಿಂದ 5 ಮೀ. ನೀರು ನಿಲ್ಲಿಸಿದಾಗ 20.53 ಎಕರೆ ಕೃಷಿ ಭೂಮಿ ಜಲಾವೃತವಾಗಿದ್ದು, 28 ಮಂದಿ ಸಂತ್ರಸ್ತರಾಗಿದ್ದರು. ಅವರಿಂದ ಭೂಮಿ ಖರೀದಿ ಪ್ರಕ್ರಿಯೆಯಲ್ಲಿ 14 ಮಂದಿಯ ಜಮೀನು ನೋಂದಣಿಯಾಗಿದ್ದು, 14 ಮಂದಿಯದು ಬಾಕಿ ಇದೆ. 5ರಿಂದ 6 ಮೀ. ನೀರು ನಿಲ್ಲಿಸಿದಾಗ 45.11 ಎಕರೆ ಕೃಷಿ ಭೂಮಿ ಜಲಾವೃತವಾಗಲಿದ್ದು, 63 ಹಿಡುವಳಿದಾರರ ಪೈಕಿ 15 ಮಂದಿಗೆ ಪರಿಹಾರ ವಿತರಣೆಯಾಗಿದೆ. 5 ಮಂದಿಗೆ ಹಣ ಸಂದಾಯ ಅಂತಿಮ ಹಂತದಲ್ಲಿದ್ದು, ಉಳಿದವರಿಗೆ ದಾಖಲೆ ಪರಿಶೀಲನೆಯ ಬಳಿಕ ಸಿಗಲಿದೆ.

7 ಮೀ. ನೀರು ಸಂಗ್ರಹ?
ಕಳೆದ ಬೇಸಗೆಯಲ್ಲಿ ಅಣೆಕಟ್ಟಿನಲ್ಲಿ 6 ಮೀ. ನೀರು ನಿಲ್ಲಿಸಿಯೂ ಮಂಗಳೂರಿಗೆ ನೀರಿನ ಕೊರತೆಯಾದ ಹಿನ್ನೆಲೆಯಲ್ಲಿ ಮುಂದಿನ ವರ್ಷ 7 ಮೀ. ಸಂಗ್ರಹಿಸುವ ಪ್ರಸ್ತಾವ ಕೇಳಿಬಂದಿದೆ. ಮೇ 27ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಯು.ಟಿ. ಖಾದರ್‌ ಈ ವಿಚಾರ ಪ್ರಸ್ತಾವಿಸಿದ್ದಾರೆ. 7 ಮೀ. ವರೆಗೆ ನೀರು ಸಂಗ್ರಹಿಸಿದಾಗ ಹೆಚ್ಚುವರಿ 344 ಎಕರೆ ಭೂಮಿ ಜಲಾವೃತವಾಗಲಿದೆ. ಭೂ ಸ್ವಾಧೀನಕ್ಕೆ 130 ಕೋ.ರೂ. ಅಗತ್ಯವಿದೆ ಎಂಬ ವಿಚಾರವನ್ನು ಅವರು ಸಿಎಂ ಮುಂದಿಟ್ಟಿದ್ದಾರೆ. ಈ ಕುರಿತು ಸಂತ್ರಸ್ತ ರೈತರಲ್ಲಿ ಗೊಂದಲವಿದ್ದು, ಬಾಕಿ ಮೊತ್ತವನ್ನು ಶೀಘ್ರ ಪಾವತಿಸಬೇಕು. ಜತೆಗೆ ಸಂತ್ರಸ್ತ ರೈತರ ಪಟ್ಟಿ ಬಿಡುಗಡೆ ಮಾಡಬೇಕು ಎಂದು ತುಂಬೆ ಅಣೆಕಟ್ಟು ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್‌ ಆಗ್ರಹಿಸಿದ್ದಾರೆ.

Advertisement

ಸಂತ್ರಸ್ತರ ಪರಿಹಾರ ನಿಧಿಯ ಒಟ್ಟು ಮೊತ್ತ 17.5 ಕೋ.ರೂ.ಗಳಲ್ಲಿ 28 ಹಿಡುವಳಿದಾರರಿಗೆ 7.78 ಕೋ.ರೂ. ಪರಿಹಾರ ವಿತರಣೆಯಾಗಿದೆ. ಇನ್ನೂ ಸುಮಾರು 40 ಮಂದಿಗೆ ವಿತರಣೆಗೆ ಬಾಕಿ ಇದ್ದು, ಪ್ರಕ್ರಿಯೆ ನಡೆಯುತ್ತಿದೆ.
– ಗಾಯತ್ರಿ ನಾಯಕ್‌ ವಿಶೇಷ ಭೂ ಸ್ವಾಧೀನಾಧಿಕಾರಿ, ಮಂಗಳೂರು ಮನಪಾ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next