ಮಹಾನಗರ: ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ನೀರು ಸೋರಿಕೆ ತಡೆಗೆ ಮುಂದಾಗಿದ್ದಾರೆ. ತುಂಬೆಯಿಂದ ಮಂಗಳೂರಿಗೆ ಬರುವ ನೀರು ಪೂರೈಕೆ ಕೊಳವೆಗಳಿಗೆ ಕನ್ನಕೊರೆದು ಅಕ್ರಮವಾಗಿ ಹಾಕಿರುವ ನೀರಿನ ಸಂಪರ್ಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ನಿರ್ದೇಶನದಂತೆ ಪಾಲಿಕೆಯ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಸ್ಥಳೀಯರು ಪ್ರತಿಭಟನೆಗೆ ಮುಂದಾದರೂ ಕೂಡ ಪೊಲೀಸರ ಭದ್ರತೆಯ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು.
ಪಾಲಿಕೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸುಮಾರು 18 ಕಡೆಗಳಲ್ಲಿ 1.5 ಇಂಚಿನಿಂದ 4 ಇಂಚುವರೆಗಿನ ಪೈಪ್ ಬಳಸಿ ಅಕ್ರಮವಾಗಿ ನೀರಿನ ಸಂಪರ್ಕ ಪಡೆಯಲಾಗಿದ್ದು, ಇಂತಹ ಸುಮಾರು 31 ಪ್ರಕರಣಗಳು ಪತ್ತೆಯಾಗಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಸೋಮವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿ, ಫರಂಗಿಪೇಟೆ, ಪುದು ವ್ಯಾಪ್ತಿಯಲ್ಲಿದ್ದ ಅಕ್ರಮ ನೀರಿನ ಸಂಪರ್ಕವನ್ನು ತೆರವು ಮಾಡಲಾಗಿದೆ. ಜತೆಗೆ ಕೆಲವೆಡೆ ಅಕ್ರಮವಾಗಿ ನೀರು ಪಡೆಯುವ ಪ್ರಯತ್ನ ನಡೆಯುತ್ತಿರುವುದನ್ನು ಕೂಡ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಮನಪಾ ಮುಖ್ಯ ಪೈಪ್‌ಲೈನ್‌ನಿಂದ ನೀರು ಕದಿಯುವ ಸಮಸ್ಯೆ ಬಹಳಷ್ಟು ಸಮಯದಿಂದಲೂ ಇದೆ. ಅಕ್ರಮ ಸಂಪರ್ಕವನ್ನು ಹಲವು ಬಾರಿ ತೆರವುಗೊಳಿಸಿದರೂ ಅದನ್ನು ಮತ್ತೆ ಸೇರಿಸುವ ಕೆಲಸ ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಈಗ ಮಂಗಳೂರಿಗೆ ನೀರಿನ ಸಮಸ್ಯೆ ಬಹುವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ನೀರಿನ ಸಂಪರ್ಕವನ್ನು ಸಂಪೂರ್ಣವಾಗಿ ತೆಗೆದುಹಾಕಲು ಜಿಲ್ಲಾಡಳಿತ ಮುಂದಾಗಿದೆ.