Advertisement

Tumakuru; ಗೋಕಟ್ಟೆಗೆ ಬಿದ್ದ ವಿದ್ಯಾರ್ಥಿ ರಕ್ಷಿಸಲು ಹೋದ ನಾಲ್ವರು ಸಾವು

07:41 PM Aug 13, 2023 | Team Udayavani |

ತುಮಕೂರು: ಗೋಕಟ್ಟೆಯೊಂದಕ್ಕೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದ ವಿದ್ಯಾರ್ಥಿಯನ್ನು ರಕ್ಷಿಸಲು ಹೋದ ತಾಯಿ ಸೇರಿದಂತೆ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ಮಧ್ಯಾಹ್ನ ನಗರದ ಸಿದ್ದಗಂಗಾ ಮಠದ ಬಳಿ ನಡೆದಿದೆ.

Advertisement

ಗೋಕಟ್ಟೆಗೆ ಆಯತಪ್ಪಿ ಬಿದ್ದ ಸ್ನೇಹಿತ ರಂಜಿತ್‌ನನ್ನು ರಕ್ಷಿಸಲು ಮುಂದಾದ ಶ್ರೀಮಠದ ವಿದ್ಯಾರ್ಥಿಗಳಾದ ಶಂಕರ್ (11), ಹರ್ಷಿತ್ (11) ಹಾಗೂ ಇವರನ್ನು ರಕ್ಷಣೆ ಮಾಡಲು ನೀರಿಗಿಳಿದ ರಂಜಿತ್ ತಾಯಿ ಬೆಂಗಳೂರು ಬಾಗಲಗುಂಟೆಯ ಲಕ್ಷ್ಮೀ (33) ಹಾಗೂ ಯಾದಗಿರಿ ಜಿಲ್ಲೆಯ ಅಜಲಪುರದ ಮಹದೇವಪ್ಪ (44) ಎಂಬುವರೇ ಮೃತ ದುರ್ದೈವಿಗಳು.

ಶ್ರೀಮಠದಲ್ಲಿ 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮಧ್ಯಾಹ್ನ ಊಟದ ನಂತರ ಕೈತೊಳೆಯಲು ಗೋಕಟ್ಟೆಗೆ ಇಳಿದಿದ್ದರು ಎನ್ನಲಾಗಿದ್ದು ಘಟನೆಯಲ್ಲಿ ರಂಜಿತ್ ಎಂಬ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗನನ್ನು ನೋಡಲು ತಾಯಿ ಬಂದಿದ್ದರು. ಈ ಸಂದರ್ಭದಲ್ಲಿ ಮಗ ರಂಜಿತ್ ಕೈಕಾಲು ತೊಳೆದುಕೊಳ್ಳಲೆಂದು ಗೋಕಟ್ಟೆಗೆ ಇಳಿದಿದ್ದಾನೆ. ಆಗ ಆಯತಪ್ಪಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ನೋಡಿದ ಈತನ ಸ್ನೇಹಿತರಾದ ಶಂಕರ್, ಹರ್ಷಿತ್ ಇವರಿಬ್ಬರು ಆತನನ್ನು ರಕ್ಷಿಸುವ ಸಲುವಾಗಿ ನೀರಿಗೆ ಧುಮುಕಿದ್ದಾರೆ. ಇದನ್ನು ನೋಡಿದ ತಾಯಿ ಲಕ್ಷ್ಮಿ ಅವರು ಸಹ ನೀರಿಗೆ ಇಳಿದಿದ್ದಾರೆ. ಇವರೆಲ್ಲರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಯಾದಗಿರಿ ಜಿಲ್ಲೆಯ ಮಹದೇವಪ್ಪ ಅವರು ಸಹ ನೀರಿಗೆ ಧುಮುಕಿದ್ದಾರೆ. ಆದರೆ ವಿಧಿಯಾಟದಲ್ಲಿ ನಾಲ್ವರು ಮೃತಪಟ್ಟಿದ್ದು, ಮೊದಲು ನೀರಿಗೆ ಬಿದ್ದಿದ್ದ ರಂಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Advertisement

ಘಟನೆಯ ಸುದ್ದಿ ತಿಳಿದ ಕೂಡಲೇ ಕ್ಯಾತ್ಸಂದ್ರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಶವಗಳಿಗಾಗಿ ಹುಡುಕಾಟ ನಡೆಸಿ, ಸಂಜೆ ವೇಳೆಗೆ ಶವಗಳನ್ನು ಹೊರ ತೆಗೆಯುವಲ್ಲಿ ಶ್ರಮಿಸಿದ್ದಾರೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಹುಲ್‌ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next