Advertisement

ನಗರದಲ್ಲಿ 85 ಸಾವಿರ ಸದಸ್ಯತ್ವದ ಗುರಿ

04:41 PM Jul 04, 2019 | Naveen |

ತುಮಕೂರು: ಯುವ ಸಮೂಹವನ್ನು ಸೆಳೆಯುವ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕಾರ್ಯಕರ್ತರಿಗೆ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್‌ ಕರೆ ನೀಡಿದರು.

Advertisement

ಶ್ರೀ ದೇವಿ ಕಾಲೇಜು ಸಭಾಂಗಣ ದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಾರ್ಯಕರ್ತರ ಶ್ರಮದಿಂದ ಜಯ: ಸದಸ್ಯತ್ವ ಅಭಿಯಾನದ ಮೂಲಕ ಎಲ್ಲ ವರ್ಗದ ಜನರನ್ನು ತಲುಪಬೇಕು. 2013-14ರಲ್ಲಿ ನಡೆದ ಅಭಿಯಾನ ದಲ್ಲಿ 11 ಕೋಟಿ ಸದಸ್ಯತ್ವ ನೋಂದಾಯಿಸಿಕೊಳ್ಳುವ ಮೂಲಕ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರ್ಯಕರ್ತರ ಶ್ರಮವೇ ಕಾರಣ ಎಂದು ಹೇಳಿದರು.

ಯೋಜನೆ ತಲುಪಿಸಿ: ಕಳೆದ ಬಾರಿಗಿಂತ ಈ ಬಾರಿ ಸದಸ್ಯತ್ವದ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು. ನಗರದಲ್ಲಿ 85 ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಹಲವಾರು ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ಬಿಜೆಪಿ ಕಾರ್ಯ ಕರ್ತರು ಪ್ರತಿ ಮನೆ ಮನೆಗೆ ತಲುಪಿಸಿ ಸದಸ್ಯತ್ವ ನೋಂದಣಿ ಮಾಡಿಸಿ ಎಂದು ಕರೆ ನೀಡಿದರು.

1000 ಸದಸ್ಯತ್ವ ನೋಂದಣಿ ಮಾಡಿಸಿ: ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಹೆಚ್ಚು ಸ್ಥಾನ ಗೆಲ್ಲಲು ಪ್ರತಿ ಮನೆ ಮನೆಗೆ ಭೇಟಿ ನೀಡಿ ಕೇಂದ್ರದ ಯೋಜನೆಗಳ ಅರಿವು ಮೂಡಿಸಿರುವುದೇ ಕಾರಣ. ಮುಂದಿನ ದಿನಗಳಲ್ಲಿ ಬಿಜೆಪಿ ಪರ ಪ್ರತಿಯೊಬ್ಬರೂ ಮತ ಚಲಾಯಿಸುವಂತಾಗಬೇಕು. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಪ್ರತಿದಿನ ಬೆಳಗ್ಗೆ 8ರಿಂದ 10.30ರವರೆಗೆ ಹಾಗೂ ಸಂಜೆ 5ರಿಂದ 8.30ರವರೆಗೆ ಒಬ್ಬೊಬ್ಬರೂ 1000 ಸದಸ್ಯತ್ವ ಮಾಡಿದರೆ ನಮ್ಮ ಗುರಿ ತಲುಪಲಿದ್ದೇವೆ ಎಂದು ಹೇಳಿದರು.

Advertisement

ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಜನರ ಮೊಬೈಲ್ನಲ್ಲಿ ಮಿಸ್ಡ್ಕಾಲ್ ಕೊಟ್ಟು ಮತ್ತೆ ವಾಪಸ್‌ ಬರುವ ಮೆಸೇಜ್‌ಗೆ ಸಂಪೂರ್ಣ ವಿಳಾಸ, ಇಮೇಲ್ ಐಡಿ ಎಲ್ಲವನ್ನೂ ಪಡೆದು ಕಳುಹಿಸಿದರೆ ಈ ಮಾಹಿತಿ ಕೇಂದ್ರಕ್ಕೆ ತಲುಪುತ್ತದೆ. ಇದರಿಂದ ಮುಂದೆ ಸರ್ವೆ ಮಾಡಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ಜು.6ರಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ತುಮಕೂರು ನಗರದಲ್ಲಿ ಅಂದು ಸಂಜೆ ಅಭಿಯಾನಕ್ಕೆ ಚಾಲನೆ ನೀಡಲು ತೀರ್ಮಾನಿಸಿದ್ದು, ಬಿಜೆಪಿಯ ಎಲ್ಲಾ ನಾಯಕರು, ಮುಖಂಡರು ಕಾರ್ಯಕರ್ತರು ಭಾಗವಹಿಸಬೇಕು ಎಂದು ಕರೆ ನೀಡಿದರು.

ಸಂಘಟನೆ ಶಕ್ತಿ: ಸಂಘಟನೆಯು ಪಕ್ಷದ ಶಕ್ತಿಯಾಗಿದೆ. ಬಿಜೆಪಿ ಸದಸ್ಯತ್ವ ಮಾಡುವ ಮೂಲಕ ಆ ಶಕ್ತಿ ಇನ್ನಷ್ಟು ಬಲಪಡಿಸಬೇಕಾಗಿದೆ. ಆಂತರಿಕ ಪ್ರಜಾಪ್ರಭುತ್ವಕ್ಕೆ ಬಲ ತುಂಬಲು ಈ ವ್ಯವಸ್ಥೆ ಅನುಕೂಲವಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎಂ.ಆರ್‌.ಹುಲಿನಾಯ್ಕರ್‌ ತಿಳಿಸಿದರು.

ಬಿಜೆಪಿ ನಗರಾಧ್ಯಕ್ಷ ಹಾಗೂ ಪಾಲಿಕೆ ಪ್ರತಿಪಕ್ಷದ ನಾಯಕ ಸಿ.ಎನ್‌.ರಮೇಶ್‌ ಮಾತನಾಡಿ, ನಗರದ 35 ವಾರ್ಡ್‌ಗಳಲ್ಲಿ ಒಂದು ಲಕ್ಷ ಸದಸ್ಯತ್ವ ನೋಂದಣಿ ಗುರಿ ಇಟ್ಟು ಕೊಂಡಿದ್ದೇವೆ. ಪ್ರತಿ ವಾರ್ಡ್‌ನಲ್ಲಿ 50 ಸಕ್ರಿಯ ಕಾರ್ಯಕರ್ತರನ್ನು ಮಾಡಿದರೆ, ಆ ಕಾರ್ಯಕರ್ತರು ಒಬ್ಬೊಬ್ಬರೂ50 ಮಂದಿಯನ್ನು ಸದಸ್ವತ್ವಕ್ಕೆ ನೋಂದಾಯಿಸಿದರೆ ಗುರಿ ತಲುಪುತ್ತೇವೆ ಎಂದರು.

ಅಭಿಯಾನಕ್ಕೆ ನಗರ ಸಂಚಾಲಕರನ್ನಾಗಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವೀಶಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಸಹ ಸಂಚಾಲಕ ರನ್ನಾಗಿ ಶಿರಾಗೇಟ್ ಪ್ರಸನ್ನ, ರಾಕೇಶ್‌, ವಿನಯ್‌ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವೀಶಯ್ಯ, ಪಾಲಿಕೆ ಸದಸ್ಯ ಎಚ್.ಮಲ್ಲಿಕಾರ್ಜುನ್‌, ಸ್ನೇಕ್‌ ನಂದೀಶ್‌, ಸರೋಜ ಗೌಡ, ಪ್ರೇಮಾ ಹೆಗ್ಡೆ ಹಾಗೂ ಪಾಲಿಕೆ ಬಿಜೆಪಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next