ಫೆಬ್ರವರಿ 3 ಕ್ಕೆ ಗುಜರಾತ್ ಪ್ರವಾಸ ಮುಗಿಸಿ, ಮಾರನೇ ದಿನ ಅಸ್ಸಾಂ ತಲುಪಿದ್ದೆ. ಏಪ್ರಿಲ್‌ನಲ್ಲಿ ಯುರೋಪ್ ಟೂರ್‌ಗೆ ಬುಕ್ ಮಾಡಿಕೊಂಡಿದ್ದರಿಂದ, ಮಾರ್ಚ್‌ನಲ್ಲಿ ಒಂದಿಷ್ಟು ಶಾಪಿಂಗ್ ಮಾಡುವುದಿತ್ತು. ಮಾರ್ಚ್‌ನಲ್ಲಿ ಲಾಕ್‌ಡೌನ್ ಆದಾಗ ಇದು ಬೇಗನೆ ಸರಿ ಹೋಗಬಹುದು ಎಂಬ ನಂಬಿಕೆ ಇತ್ತು. ಆದರೆ ಹಾಗಾಗಲಿಲ್ಲ. ಏಪ್ರಿಲ್, ಮೇ, ಆತಂಕ ಉಂಟುಮಾಡಿದವು. ದಿನಕೊಮ್ಮೆ ಬದಲಾಗುತ್ತಿರುವ ಕಾನೂನು, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಸಿತ್ತು. ಸ್ನೇಹಿತರೆಲ್ಲಾ ಫೋನ್‌ನಲ್ಲಿ ಪರಸ್ಪರ ಸಮಾಧಾನ ಹೇಳಿಕೊಳ್ಳೋದು, ಪರಿಸ್ಥಿತಿಯ ಭೀಕರತೆಯನ್ನು ಕಡಿಮೆ ಕಾಣಿಸುವುದಕ್ಕಾಗಿ, ದಿನಕ್ಕೊಂದು ಉಡುಗೆ, ಅಡುಗೆ, ಫ್ಯಾಶನ್ ಶೋ… 64 ವಿದ್ಯೆಗಳ ಪ್ರದರ್ಶನ… ಏನಾಗ್ತಿದೆ… ಗೊತ್ತಿಲ್ಲ… ಸರಿ ಹೋಗುತ್ತಾ? ಗೊತ್ತಿಲ್ಲ… ಸರಿ ಹೋಗಲ್ವಾ?.. ಅದೂ ಗೊತ್ತಿಲ್ಲ… ಊರು ತೊರೆದು ಬಂದವರು ಮತ್ತೆ ಊರಿಗೆ ಮರಳಿದರು. ಕುಟುಂಬದ ಸದಸ್ಯರೆಲ್ಲ ಒಂದೇ ಕಡೆ ಇರುವಂತಾದದ್ದು ಹೊಸ ಬೆಳವಣಿಗೆ ಅನಿಸಿದರೂ, ಒಂಟಿಯಾಗಿ ಬದುಕುವ ನನ್ನಂಥವರ ಕತೆ ಏನು? ಹೊರಗೆ ಹೋಗಲಾಗದ, ಯಾರೊಂದಿಗೂ ನೇರ ಮಾತನಾಡಲಾರದ ಪರಿಸ್ಥಿತಿಯ ಕಲ್ಪನೆಯೂ ನನಗಿರಲಿಲ್ಲ.
ಕಾಲಿಗೆ ಚಕ್ರ ಇಟ್ಟುಕೊಂಡು ಓಡಾಡ್ತಿದ್ದೆಯಲ್ಲಾ ಈಗ ಏನ್ ಮಾಡ್ತಿ? ಒಬ್ಬಳೇ ಇರುವುದಕ್ಕೆ ಭಯ ಆಗ್ತಿಲ್ವಾ?- ಎಂದು ಕೇಳಿದಂತಾಯಿತು. ಭಯ ಇಲ್ಲ. ರಿಟೈರ್‌ವೆುಂಟ್ ತೊಗೊಂಡು ದೇಶ ಸುತ್ತುವ ಕನಸು ಕಂಡವಳು ನಾನು. ಒಬ್ಬಳೇ ಬದುಕುವ ನಿರ್ಧಾರ ಮಾಡೋದಕ್ಕೆ ಗಟ್ಟಿತನ ಇರಲೇಬೇಕು. ಅನಾರೋಗ್ಯ, ಹೋದಕಡೆ ಏನಾದ್ರು ಆದ್ರೆ? ಇದಕ್ಕೆಲ್ಲ ಉತ್ತರ ಕಂಡುಕೊಂಡಾಗಿತ್ತು. ಹೀಗಾದಾಗ ಏನು ಮಾಡಬೇಕು ಅನ್ನೋ ತಯಾರಿ ಇತ್ತು. ಆದರೆ ಯಾರೂ ಕಲ್ಪಿಸಿಕೊಳ್ಳಲಾಗದ ಪ್ರಶ್ನೆಗಳನ್ನು ಕೋವಿಡ್ ಮುಂದಿಟ್ಟಾಗ ಮಾಡೋದಾದರೂ ಏನು? ಒಂದು ರೀತಿಯ ಖನ್ನತೆ ಆವರಿಸಿಕೊಳ್ಳುತ್ತಿದೆ ಅನಿಸಿದಾಗ, ಕಷ್ಟಪಟ್ಟು ಕೊಡವಿ ನಿಂತೆ. ಹೊರಗಿನ ಓಡಾಟವನ್ನು ನಿಲ್ಲಿಸಿದೆ. ಅಗತ್ಯ ವಸ್ತುಗಳಿಗೆ ಆನ್‌ಲೈನ್ ಸಹಾಯ ತೊಗೊಂಡಾಗಲೇ- “ಓ, ಅಂದುಕೊಂಡಷ್ಟು ಬದುಕು ಘೋರವಾಗಿಲ್ಲ, ಈಗ ಏನಾದ್ರೂ ಮಾಡಲೇಬೇಕು’ ಅನಿಸಿತು. ಮಾಡಬಹುದಾದ್ದನ್ನೆಲ್ಲ ಲಿಸ್ಟ್ ಮಾಡಿದೆ. ಲಿಸ್ಟಿನಲ್ಲಿದ್ದ ಒಂದು ಸ್ವೀಟ್ ಸೆಲೆಕಕ್ಟ್ ಆಯಿತು. ಯಾರದೇ ಸಹಾಯವಿಲ್ಲದೆ ತಯಾರಿಸಬಹುದಾದ ಈ ಸ್ವೀಟಿನ ಹೆಸರು- ರಾಯಲ್ ಸ್ವೀಟ್ ಮನೆಯಲ್ಲೇ ಮಾಡುವ ಸ್ವೀಟ್ ಮಾರಾಟಕ್ಕೂ ಈಗ ಫುಡ್ ಲೈಸನ್ಸ್ ನ ಅಗತ್ಯವಿದೆ. ಇದನ್ನೂ ಸ್ನೇಹಿತೆ ಅನುಪಮಾ ಹೆಗ್ಡೆ ಆನ್‌ಲೈನ್‌ನಲ್ಲಿ ಮಾಡಿಸಿಕೊಟ್ಟರು: ವಿಜ್ಜಿಸ್ ಕಿಚನ್ ಹೆಸರಿನಲ್ಲಿ.
ಈ ಸಿಹಿ ತಿನಿಸನ್ನು ಈ ಕೋವಿಡ್ ಕಾಲದಲ್ಲಿ ಯಾರು ತೊಗೊತಾರೆ ಅನ್ನೋ ಪ್ರಶ್ನೆ ನನ್ನನ್ನು ಹೆದರಿಸಲೇ ಇಲ್ಲ. ಹೊಟ್ಟೆ ಮತ್ತು ನಾಲಿಗೆಗೆ ಇರುವ ಶಕ್ತಿಯ ಅರಿವಿತ್ತು. ಇಂತಹ ಸಂಕಟದ ಸಮಯದಲ್ಲಿ ಬರುವ ಆತ್ಮೀಯರ ಹುಟ್ಟುಹಬ್ಬಗಳು, ಆನಿವರ್ಸರಿಗಳು, ಶುಭದಿನಗಳಿಗೆ, ಹೋಗಲಾಗದ ಬೇಸರವನ್ನು ಈ ರಾಯಲ್ ಸ್ವೀಟು ತಲುಪಿ ಎರಡೂ ಕಡೆ ಸಮಾಧಾನ ಪಡಿಸುತ್ತದೆ ಅನ್ನೋದು ನನ್ನ ವಿಶ್ವಾಸ. ಮಹಿಳಾ ಮಾರ್ಕೆಟ್, ನನ್ನ ಸ್ನೇಹಿತರು, ಫೇಸ್ಬುಕ್ ಸ್ನೇಹಿತರು ನನ್ನ ರಾಯಲ್ ಸ್ವೀಟಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ.
ಕೆಲವೊಮ್ಮೆ ಕೊರಿಯರ್, ಕೆಲವೊಮ್ಮೆ ನನ್ನ ಅಣ್ಣನ ಮಗ ಸಿಹಿಯನ್ನು ಗ್ರಾಹಕರ ಮನೆಗೆ ತಲುಪಿಸುತ್ತಾರೆ. ನಿವೃತ್ತಿ ತೆಗೆದುಕೊಂಡವಳನ್ನು ಕೋವಿಡ್ ಮತ್ತೆ ಆನ್‌ಲೈನಿಗೆ ನಿಲ್ಲಿಸಿದೆ. ತಿಂಡಿ ತಯಾರಿಸಿಯೂ ನಾಲ್ಕು ಕಾಸು ಜೇಬು ಮತ್ತು ಜಾಬ್ ಸ್ಯಾಟಿಸ್‌ಫ್ಯಾಕ್ಷನ್ ಹೊಂದಬಹುದು ಎಂದು ತೋರಿಸಿಕೊಟ್ಟಿದೆ. ಹಾಗಂತ, ಯಾವಾಗಲೂ ಸ್ವೀಟ್ ಮಾಡ್ತಾನೆ ಇರ್ತೀನಿ ಅನ್ಕೋಬೇಡಿ. ನಾಳೆ ಬೆಳಗ್ಗೆ 5 ಗಂಟೆಗೆ ಕೋವಿಡ್ ದೇಶಬಿಟ್ಟು ಹೋದರೆ, 6 ಗಂಟೆ ಬಸ್ಸಿಗೆ ಮಂಗಳೂರಿಗೆ ಹೋಗ್ತೀನಿ.
ಅಜ್ಜಿಮನೆ ವಿಜಯಕ್ಕ