Advertisement

ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರಿಸಲು ವಿಫ‌ಲ: ಡಿ.ವಿ. ಸದಾನಂದ ಗೌಡ

11:50 PM Feb 12, 2023 | Team Udayavani |

ಬೆಂಗಳೂರು: ತುಳು ವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನದಲ್ಲಿ ರಾಜಕಾರಣಿಗಳಾಗಿ ನಾವು ವಿಫ‌ಲರಾಗಿದ್ದೇವೆ ಎಂದು ಮಾಜಿ ಸಿಎಂ, ಬೆಂಗಳೂರು ಉತ್ತರ ಸಂಸದ ಡಿ.ವಿ. ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ರವೀಂದ್ರ ಕಲಾ ಕ್ಷೇತ್ರದಲ್ಲಿ ಬೆಂಗಳೂರಿನ ತುಳುವೆರೆ ಚಾವಡಿ ಸಂಘಟನೆಯ 25ನೇ ವರ್ಷದ ಬೆಳ್ಳಿ ಹಬ್ಬ (ಬೊಳ್ಳಿ ಪರ್ಬ) ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನಲ್ಲಿ ಏಳು ಸಾವಿರ ಭಾಷೆಗಳಿವೆ. ಇದರಲ್ಲಿ ಮೂರೂವರೆ ಸಾವಿರ ಭಾಷೆಗಳು ಭಾರತದಲ್ಲಿದೆ. ಈವರೆಗೆ 22 ಭಾಷೆಗಳು ಮಾತ್ರ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿವೆ. 108 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರುವ ಪ್ರಯತ್ನ ನಡೆಸುತ್ತಿದ್ದು, ಇದರಲ್ಲಿ ತುಳು ಸೇರಿ 35 ಭಾಷೆಗಳು 22ನೇ ಪರಿಚ್ಛೇದಕ್ಕೆ ಸೇರಲು ಹೋರಾಡುತ್ತಿವೆ ಎಂದರು.

ಆಶಿರ್ವಚನ ನೀಡಿದ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಹೃದಯದ ಭಾವನೆಗಳ ಇನ್ನೊಂದು ರೂಪವೇ ಭಾಷೆ. ತುಳುನಾಡಿನವರಿಗೆ ಎರಡು ಭಾಷೆ ಇದೆ. ಕನ್ನಡ ರಾಜ್ಯ ಭಾಷೆಯಾಗಿದ್ದು, ತುಳು ಮಾತೃಭಾಷೆಯಾಗಿದೆ. ಮಾತೃಭಾಷೆಯನ್ನು ಬಳಸಲು ಹಿಂಜರಿಕೆ ಸಲ್ಲದು ಎಂದು ಹೇಳಿದರು.

ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ವಿಚಾರ ಹೋರಾಟದ ಹಾದಿ ಯಲ್ಲಿದೆ. ಆದರೆ ಅದಕ್ಕಿಂತ ಮುನ್ನ ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆಯಾಗಿಸಬೇಕು ಎಂದರು.

Advertisement

ಮಕ್ಕಳ ಪದ ಸಾಹಿತ್ಯ ಕೃತಿ “ಜೋಕುಲೆ ಉಜ್ಜಾಲ್‌’ ಪುಸ್ತಕ ಬಿಡುಗಡೆ ಮಾಡಲಾಯಿತು. ಕೆ. ಇ. ರಾಧಾಕೃಷ್ಣ ಬರೆದಿರುವ ‘ಸತ್ಯಪ್ಪೆ ಬಾಲೆಲು’ ತುಳು ಕತೆಯ ಆಡಿಯೋ ಬಿಡುಗಡೆ ಮಾಡಲಾಯಿತು.

ಖ್ಯಾತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್‌ ಕಟೀಲು, ಹಿರಿಯ ತುಳು ಸಾಹಿತಿ ಕುಶಲಾಕ್ಷಿ ವಿ. ಕಣ್ವತೀರ್ಥ, ಸ್ಫೂರ್ತಿ ಭಿನ್ನ ಸಾಮರ್ಥ್ಯದ ಶಾಲೆಯ ಪ್ರಕಾಶ್‌ ಜೆ ಶೆಟ್ಟಿಗಾರ್‌ ಇವರಿಗೆ ತುಳುನಾಡª ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಸಾಹಿತಿ ಡಿ.ಕೆ.ಚೌಟ ಸ್ಮರರ್ಣಾಥ ತುಳು ಸಾಹಿತಿ ಉಗ್ರಪ್ಪ ಪೂಜಾರಿಯವರಿಗೆ ಮತ್ತು ತುಳು ಪರ ಹೋರಾಟಗಾರ ಡಾ| ಉದಯ ಧರ್ಮಸ್ಥಳ ಸ್ಮರರ್ಣಾಥವಾಗಿ ತುಳು ಸೇವೆಗಾಗಿ ಯುವ ಪ್ರತಿಭೆ ಸತೀಶ್‌ ಗೆ ಪ್ರಶಸ್ತಿ ನೀಡಲಾಯಿತು. ವಿಶೇಷ ಚೇತನರಾದ ಉಲ್ಲಾಸ್‌ ಯು. ನಾಯಕ್‌, ಲಿಖಿತ ಮತ್ತು ಶ್ರಾವ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಶಿಕ್ಷಣ ತಜ್ಞ ಪ್ರೊ| ಕೆ.ಇ.ರಾಧಾಕೃಷ್ಣ, ತುಳುವೆರೆ ಚಾವಡಿ ಸಂಘದ ಅಧ್ಯಕ್ಷ ಪುರುಷೋತ್ತಮ್‌ ಚೇಂಡ್ಲಾ, ಉಮೇಶ್‌ ಪೂಂಜ, ವಸಂತ್‌ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿದ್ದರು.

ಮಂಗಳೂರಿನ ತಂಡರ್‌ ಕಿಡ್ಸ್‌ ತಂಡದಿಂದ ಪದರಂಗಿತ, ವಂದನಾ ರೈ ಕಾರ್ಕಳ ಇವರಿಂದ ಪದ ನೃತ್ಯರೂಪಕ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next