ತುಳು ಮಂದಿ ಮನಗೆದ್ದ “ಏಸ’ ಸಿನಿಮಾ ಈಗ, ಬೆಂಗಳೂರಿನಲ್ಲೂ ಬಿಡುಗಡೆ ಕಂಡಿದೆ. “ಯು 2′ ಸಿನಿಮಾ ಟಾಕೀಸ್ ಬ್ಯಾನರ್‌ನಲ್ಲಿ ತಯಾರಾದ ಈ ಚಿತ್ರ ಕಳೆದ ಮೇ.26 ರಂದು ಬಿಡುಗಡೆಯಾಗಿ, ಅಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸುವ ಮೂಲಕ ತುಳುನಾಡಿನ ಜನರ ಮನಗೆದ್ದಿತ್ತು. ಈಗ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲೂ ಬಿಡುಗಡೆಯಾಗುವ ಮೂಲಕ ತುಳು ಮಂದಿಗೆ ಹತ್ತಿರವಾಗಿದೆ.
ಉದಯಶೆಟ್ಟಿ ಕಾಂತಾವರ ಮತ್ತು ಉದಯ ಸಲ್ಯಾನ್ ಅಜ್ಜಾಡಿ ನಿರ್ಮಾಣದ ಈ ಚಿತ್ರವನ್ನು ಎಂ.ಎನ್.ಜಯಂತ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶೋಭರಾಜ್ ಪಾವೂರು ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಮಂಗಳೂರಿನಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿದ “ಏಸ’ ಚಿತ್ರ, ಮುಂಬೈನಲ್ಲೂ ಯಶಸ್ವಿ ಪ್ರದರ್ಶನ ಕಂಡಿದೆ ಎಂಬುದು ವಿಶೇಷ.
“ಏಸ’ ಕಥೆ ಬಗ್ಗೆ ಹೇಳುವುದಾದರೆ, ಬದುಕಿಗಾಗಿ ನಾನಾ ವೇಷ ತೊಡುವ ಮನುಷ್ಯರಿದ್ದಾರೆ. ಕೊನೆಯ ಕ್ಷಣದಲ್ಲಿ ಅವರೆಲ್ಲರ ಬಣ್ಣ ಕಳಚಿದಾಗ ಏನೆಲ್ಲಾ ಆಗಿ ಹೋಗುತ್ತೆ ಎಂಬುದೇ ಸಿನಿಮಾದ ಹೈಲೈಟು. ಇದೊಂದು ಕೌಟುಂಬಿಕ ಸಿನಿಮಾ ಆಗಿದ್ದು, ಸಾಕಷ್ಟು ಹಾಸ್ಯ ಸನ್ನಿವೇಶಗಳು ಚಿತ್ರದ ಜೀವಾಳ.
ಯಕ್ಷಗಾನ ಕಲಾವಿದನೊಬ್ಬನ ಬದುಕಿನ ಕಥಾನಕ ಈ ಚಿತ್ರದಲ್ಲಿದೆ. ಚಿತ್ರದಲ್ಲಿ ತುಳುನಾಡಿನ ಹೆಸರಾಂತ ಕಲಾವಿದರಾದ ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಸೇರಿದಂತೆ ಬಹುತೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ.
ಈ ಹಾಸ್ಯಮಯ ಚಿತ್ರವು ಗಣೇಶ ಹಬ್ಬದ ದಿನದಂದು ಬೆಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲೂ ಬಿಡುಗಡೆಯಾಗಿದೆ. ಕೋರಮಂಗಲದಲ್ಲಿರುವ ಫೋರಂ ಮಾಲ್‌ನಲ್ಲಿ ಚಿತ್ರ ಪರದರ್ಶನ ಕಾಣುತ್ತಿದೆ. ತುಳು ಮಂದಿಯ ಮನಗೆದ್ದ ಈ ಸಿನಿಮಾ ಈಗ ಬೆಂಗಳೂರಿನ ತುಳುವರ ಮನಗೆಲ್ಲಲು ಅಣಿಯಾಗಿದೆ.